ADVERTISEMENT

ಆಲೂಗಡ್ಡೆ ಅಂಗಾಂಶ ಕೃಷಿ: ಇಲಾಖೆಯಿಂದ ಸಹಾಯಧನ

‘ಪ್ರಜಾವಾಣಿ’ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಯೋಗೇಶ್‌

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 3:03 IST
Last Updated 15 ಜೂನ್ 2022, 3:03 IST
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್‌.ಆರ್. ಯೋಗೇಶ್‌.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್‌.ಆರ್. ಯೋಗೇಶ್‌.   

ಹಾಸನ: ಜಿಲ್ಲೆಯ ರೈತರಿಗೆ ಉತ್ತಮ ಗುಣಮಟ್ಟದ ಆಲೂಗಡ್ಡೆ ಬೆಳೆಯಲು ಅನುಕೂಲ ಆಗುವಂತೆ ಆಲೂಗಡ್ಡೆ ಅಂಗಾಂಶ ಕೃಷಿಯನ್ನು ಇಲಾಖೆಯ ವತಿಯಿಂದ ಪ್ರೋತ್ಸಾಹಿಸಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್.ಆರ್. ಯೋಗೇಶ್‌ ತಿಳಿಸಿದರು.

‘ಪ್ರಜಾವಾಣಿ’ ವತಿಯಿಂದ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ರೈತರ ಕರೆಗಳಿಗೆ ಅವರು ಉತ್ತರಿಸಿದರು.

ಅಂಗಾಂಶ ಕೃಷಿ ಮಾಡಲು ಮುಂದೆ ಬರುವ ರೈತರಿಗೆ ಸಹಾಯಧನ ಒದಗಿಸಲಾಗುತ್ತಿದೆ. 10 ಗುಂಟೆಗೆ ₹7,500 ಹಾಗೂ ಒಂದು ಎಕರೆಗೆ ₹30 ಸಾವಿರ ಸಹಾಯ ಧನ ಒದಗಿಸಲು ಅವಕಾಶವಿದೆ ಎಂದರು.

ADVERTISEMENT

ಮುಂಗಾರು ಹಂಗಾಮಿನಲ್ಲಿ 10 ಗುಂಟೆಯಲ್ಲಿ ಅಂಗಾಂಶ ಕೃಷಿಯ ಸಸಿಗಳನ್ನು ಬೆಳೆದಲ್ಲಿ, ಹಿಂಗಾರು ಹಂಗಾಮಿನಲ್ಲಿ ಎರಡೂವರೆ ಎಕರೆ ಬಿತ್ತನೆ ಮಾಡಬಹುದಾದಷ್ಟು ಆಲೂಗಡ್ಡೆ ಬೀಜ ದೊರೆಯಲಿದೆ. ಈ ಎರಡೂವರೆ ಎಕರೆಯಲ್ಲಿ ಬೆಳೆದ ಆಲೂಗಡ್ಡೆಯಿಂದ ಮುಂದಿನ ಮುಂಗಾರು ಹಂಗಾಮಿನಲ್ಲಿ 25 ಎಕರೆಯಲ್ಲಿ ಬಿತ್ತನೆ ಮಾಡಲು ಬೀಜ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.

ಈ ಅಂಗಾಂಶ ಕೃಷಿಯಲ್ಲಿ ಬೆಳೆದ ಆಲೂಗಡ್ಡೆಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದು, ಇಳುವರಿಯೂ ಉತ್ತವಾಗಿ ಸಿಗಲಿದೆ ಎಂದ ಅವರು, ಈ ಬಾರಿ ತೋಟಗಾರಿಕೆ ಇಲಾಖೆಯಿಂದ 200 ಎಕರೆಯಲ್ಲಿ ಅಂಗಾಂಶ ಕೃಷಿ ಆಲೂಗಡ್ಡೆ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಜುಲೈ 15 ರವರೆಗೂ ಈ ಕಾರ್ಯ ಮಾಡಬಹುದಾಗಿದ್ದು, ಗುರಿ ತಲುಪಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಆರಂಭವಾಗುವ ಮುನ್ನವೇ ಆಲೂಗಡ್ಡೆ ಬಿತ್ತನೆ ಆರಂಭವಾಗುತ್ತದೆ. ಅದಕ್ಕಾಗಿ 200 ಕ್ವಿಂಟಲ್‌ನಷ್ಟು ಬೀಜದ ಅಗತ್ಯವಿದೆ. ಈ ಬೀಜಗಳು ಪಂಜಾಬ್‌, ಹರ್ಯಾಣ, ಶಿಮ್ಲಾ, ಉತ್ತರ ಪ್ರದೇಶದಿಂದ ಬರುತ್ತವೆ. ಸಾಗಣೆಯ ವೇಳೆ ಕೆಲ ಬೀಜಗಳಿಗೆ ಹಾನಿ ಆಗಿರುತ್ತದೆ. ಅಲ್ಲದೇ ಕೆಲವೊಮ್ಮೆ ದೂರದಿಂದ ಬಂದ ಬೀಜಗಳನ್ನು ಶೀತಲಗೃಹಗಳಲ್ಲಿ ಶೇಖರಿಸದೇ ನೇರವಾಗಿ ಬಿತ್ತನೆ ಮಾಡುವುದರಿಂದ ಕೆಲವೊಮ್ಮೆ ಬೆಳೆ ಬರುವುದಿಲ್ಲ. ಇಂತಹ ಸಮಸ್ಯೆಗಳನ್ನು ನಿವಾರಿಸುವಲ್ಲಿ ಅಂಗಾಂಶ ಕೃಷಿ ಆಲೂಗಡ್ಡೆ ಬೆಳೆಯುವುದು ಸಾಕಷ್ಟು ಸಹಕಾರಿ ಆಗಲಿದೆ ಎಂದು ವಿವರಿಸಿದರು.

ಈ ಬಾರಿ ಬಿತ್ತನೆಯ ಸಮಯದಲ್ಲಿ ಪಂಜಾಬ್‌ನಿಂದ ಬಂದ ಬೀಜಗಳಿಗೆ ಬೀಜೋಪಚಾರ ಮಾಡಿ ರೈತರಿಗೆ ವಿತರಿಸಲಾಗಿತ್ತು. ಅಲ್ಲದೇ ₹2,800 ದರವಿತ್ತು. ಜೊತೆಗೆ ಮೇ ತಿಂಗಳಲ್ಲಿ ಮಳೆಯೂ ಹೆಚ್ಚಾಗಿತ್ತು. ಹೀಗಾಗಿ ಹೆಚ್ಚಿನ ರೈತರು ಆಲೂಗಡ್ಡೆ ಬಿತ್ತನೆ ಮಾಡಿಲ್ಲ. ಕೆಲವೆಡೆ ಬಿತ್ತನೆ ಮಾಡಿದ ಬೀಜಗಳೂ ಮಳೆಯಿಂದಾಗಿ ಹಾಳಾಗಿವೆ ಎಂದು ತಿಳಿಸಿದರು.

ಅಂಗಾಂಶ ಕೃಷಿಯ ಮೂಲಕ ಆಲೂಗಡ್ಡೆ ಬೆಳೆಯುವುದರಿಂದ ರೈತರು, ಬೀಜಗಳಿಗೆ ಕಾಯುವ ಪರಿಸ್ಥಿತಿ ಇರುವುದಿಲ್ಲ. ಬೀಜಗಳನ್ನು ತಾವೇ ತಯಾರಿಸಿಕೊಂಡು, ನೇರವಾಗಿ ಬಿತ್ತನೆ ಮಾಡಬಹುದು. ಗುಣಮಟ್ಟವೂ ಚೆನ್ನಾಗಿ ಇರುತ್ತದೆ ಎಂದು ಅಭಿಪ್ರಾಯಪಟ್ಟರು.

ಬಿತ್ತನೆಗೆ ಸಲಹೆ: ಆಲೂಗಡ್ಡೆ ಬಿತ್ತನೆಗೂ 15 ಮೊದಲು ಭೂಮಿಯನ್ನು ಸಿದ್ಧಗೊಳಿಸಬೇಕು. ಶೀತಲಗೃಹದಿಂದ ತೆಗೆದ ಬೀಜಗಳನ್ನು 10–15 ದಿನ ಒಣಗಿಸಬೇಕು. ಬಿತ್ತನೆಗೆ ಯೋಗ್ಯವಾದ ಬೀಜಗಳನ್ನು ತೆಗೆದುಕೊಳ್ಳಬೇಕು. ಪ್ರತಿ ಬೀಜದಲ್ಲಿ 3–4 ಕಣ್ಣುಗಳು ಇರುವಂತೆ ನೋಡಿಕೊಳ್ಳಬೇಕು. ಅಂತಹ ಬೀಜಗಳಿಗೆ ಬೀಜೋಪಚಾರ ಮಾಡಿ, 24 ಗಂಟೆ ನೆರಳಿನಲ್ಲಿ ಹರಡಬೇಕು. ನಂತರ ಬಿತ್ತನೆ ಮಾಡಬೇಕು ಎಂದು ಎಚ್‌.ಆರ್‌. ಯೋಗೇಶ್ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.