ADVERTISEMENT

ಪ್ರಜ್ವಲ್‌ ವಿರುದ್ಧ ತನಿಖೆಗೆ ಹೈಕೋರ್ಟ್‌ಗೆ ಅರ್ಜಿ: ಎ.ಮಂಜು

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 19:29 IST
Last Updated 20 ಜೂನ್ 2019, 19:29 IST

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರು ತಮ್ಮ ವ್ಯವಹಾರಗಳು, ಆಸ್ತಿಯ ವಿವರಗಳನ್ನು ಮರೆಮಾಚಿ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿರುವ ಬಗ್ಗೆ ತನಿಖೆ ನಡೆಸುವಂತೆ ಕೋರಿ ಶುಕ್ರವಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ಬಿಜೆಪಿ ಮುಖಂಡ ಎ.ಮಂಜು ಹೇಳಿದರು.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಗುರುವಾರನಡೆದ ಮಾಧ್ಯಮಗೋಷ್ಠಿ ಯಲ್ಲಿ ಈ ಸಂಬಂಧ ಅವರು ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದರು.

‘ಪ್ರಜ್ವಲ್‌ ರೇವಣ್ಣ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣದಲ್ಲಿ ಸಾಕಷ್ಟು ದೋಷಗಳಿವೆ. ನಗರದ ಮಿನರ್ವ ವೃತ್ತದಲ್ಲಿರುವ ಕರ್ನಾಟಕ ಬ್ಯಾಂಕ್‌ ಶಾಖೆಯಲ್ಲಿ ₹5,78,238 ಇದೆ ಎಂದು ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದ್ದರು. ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಈ ಶಾಖೆಯಲ್ಲಿ ₹50 ಲಕ್ಷ ಇತ್ತು. ಇದರಲ್ಲಿ ₹ 43.31 ಲಕ್ಷ ವ್ಯತ್ಯಾಸವಿರುವುದು ಕಂಡು ಬಂದಿದೆ’ ಎಂದರು.

ADVERTISEMENT

ಚುನಾವಣಾ ಆಯೋಗದ ನಿಯಮದ ಪ್ರಕಾರ, ಅಭ್ಯರ್ಥಿಗಳು ಐದು ವರ್ಷಗಳ ಆದಾಯ ತೆರಿಗೆ ಘೋಷಣೆಯ ವಿವರ ಸಲ್ಲಿಸಬೇಕು. ಪ್ರಜ್ವಲ್‌ಗೆ 2008 ರಿಂದ ಆದಾಯವಿದ್ದರೂ ಕೇವಲ 2018–19 ರ ಸಾಲಿನ ಆದಾಯವನ್ನು ಮಾತ್ರ ಘೋಷಿಸಿಕೊಂಡಿದ್ದಾರೆ. ಈ ಅವಧಿಯಲ್ಲಿ ₹16.59 ಲಕ್ಷ ಆದಾಯ ಇರುವುದಾಗಿ ಘೋಷಿಸಿಕೊಂಡರೂ, ₹10 ಕೋಟಿಗೂ ಹೆಚ್ಚು ಹಣ ಬಂದಿದೆ ಎಂದು ದೂರಿದರು.

ಪ್ರಜ್ವಲ್‌ ತಮ್ಮ ಹೆಸರಿನಲ್ಲಿ ಹಲವು ಕಡೆ ಭೂಮಿ ಖರೀದಿಸಿದ್ದಾರೆ. ಅದಕ್ಕಾಗಿ ಬ್ಯಾಂಕಿನಿಂದ ಹಣ ಪಾವತಿ ಆಗಿರುವ ದಾಖಲೆಗಳು ಇವೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.