ಚನ್ನರಾಯಪಟ್ಟಣ: ಕಾರ್ಮಿಕರ ಹಿತ ಕಡೆಗಣಿಸುತ್ತಿರುವ ಕೇಂದ್ರ ಮತ್ತು ರಾಜ್ಯಸರ್ಕಾರದ ಕಾರ್ಯವೈಖರಿ ಖಂಡಿಸಿ ಸಿಐಟಿಯು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಬಿ.ಎಂ. ರಸ್ತೆಯಲ್ಲಿ ಬುಧವಾರ ಘೋಷಣೆ ಕೂಗುತ್ತ ಮೆರವಣಿಗೆ ನಡೆಸಿದರು. ನವೋದಯ ವೃತ್ತದಲ್ಲಿ ಸ್ವಲ್ಪ ಹೊತ್ತು ಮಾನವ ಸರಪಳಿ ನಿರ್ಮಿಸಿದರು.
ಸಿಐಟಿಯು ರಾಜ್ಯಘಟಕದ ಉಪಾಧ್ಯಕ್ಷ ಎಚ್.ಎಸ್. ಮಂಜುನಾಥ್ ಮಾತನಾಡಿ, ಅಸಂಘಟಿತ ವಲಯದ ಕಾರ್ಮಿಕರ ಹಿತರಕ್ಷಣೆಯಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಕೆಲಸ ಅವಧಿ 12 ಗಂಟೆಯಾಗಿ ಹೆಚ್ಚಿಸಿದರೆ ಕಾರ್ಮಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ದೇಶದಲ್ಲಿ 50 ಕೋಟಿ ಕಾರ್ಮಿಕರಿಗೆ ಕನಿಷ್ಠ ವೇತನ, ಪಿಂಚಣಿ, ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು 11 ವರ್ಷವಾಯಿತು. ಬೆಲೆಏರಿಕೆ ತಡೆಯುವಲ್ಲಿ ವಿಫಲವಾಗಿದೆ. ₹ 175 ಲಕ್ಷ ಕೋಟಿ ಸಾಲ ಮಾಡಿದೆ. ಉಪ್ಪು, ಹಾಲು, ಮೊಸರು ಇತ್ಯಾದಿಗಳಿಗೂ ಜಿಎಸ್‍ಟಿ ವಿಧಿಸಿದೆ. ಕೃಷಿ ಉತ್ಪನ್ನಗಳಿಗೆ ಸ್ವಾಮಿನಾಥನ್ ವರದಿ ಶಿಫಾರಸಿನಂತೆ ವೈಜ್ಞಾನಿಕ ದರ ನಿಗದಿಪಡಿಸಿಲ್ಲ. ರೈಲ್ವೆ, ರಸ್ತೆನಿರ್ಮಾಣ, ವಿದ್ಯುಚ್ಛಕ್ತಿ, ಜೀವವಿಮಾನಿಗಮ, ವಿಮಾನಸೇವೆ, ಉಕ್ಕು ಕಾರ್ಖಾನೆ ಖಾಸಗೀಕರಣ ಮಾಡಲಾಗಿದೆ ಎಂದು ಟೀಕಿಸಿದರು. ಉದ್ಯೋಗ ಖಾತರಿ ಯೋಜನೆಯಡಿ 200 ದಿನಕ್ಕೆ ಕೆಲಸ ವಿಸ್ತರಿಸಬೇಕು. ದಿನದ ಕೂಲಿಯನ್ನು ₹600ಗೆ ಹೆಚ್ಚಿಸಬೇಕು ಎಂದರು.
ವಿವಿಧ ಸಂಘಟನೆಗಳ ಮುಖಂಡರಾದ ಮಹೇಶ್‍ಗುಲಸಿಂದ, ಕರಿಯಪ್ಪ, ಯು.ಎ. ಸುನೀಲ್‍ಗೌಡ, ಶಂಕರ್, ವಾಸುಕಲ್ಕೆರೆ, ರಾಮಚಂದ್ರು ನೇತೃತ್ವ ವಹಿಸಿದ್ದರು.
ಬೇಲೂರಿನಲ್ಲಿ ಪ್ರತಿಭಟನೆ
ಬೇಲೂರು: ‘ ಕೇಂದ್ರ ಸರ್ಕಾರ 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ, 4 ಸಂಹಿತೆಗಳಾಗಿ ಬದಲಾಯಿಸಿ ಕಾರ್ಮಿಕರನ್ನು ಜೀತದಾಳುಗಳನ್ನಾಗಿ ಮಾಡುತ್ತಿದ್ದು, 4 ಸಂಹಿತೆಗಳನ್ನು ಕೂಡಲೇ ವಾಪಸ್ ಪಡೆಯಬೇಕು’ ಎಂದು ಕರ್ನಾಟಕ ಪ್ರಾಂತ ರೈತಸಂಘದ ಜಿಲ್ಲಾಘಟಕದ ಅಧ್ಯಕ್ಷ ಎಚ್.ಆರ್.ನವೀನ್ ಕುಮಾರ್ ಆಗ್ರಹಿಸಿದರು.
ಇಲ್ಲಿನ ನಾ.ಸು.ಹರ್ಡಿಕರ್ ವೃತ್ತದಲ್ಲಿ ಸಿಐಟಿಯು ಬುಧವಾರ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಸಮಾಜಿಕ ಭದ್ರತೆಯನ್ನು ಖಾತ್ರಿಪಡಿಸಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಕಾಮಕ್ಷಿ ಮಾತನಾಡಿ, ಐಸಿಡಿಎಸ್ ನಿಂದ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದರು. ಸಂಘದ ತಾಲ್ಲೂಕು ಘಟಕದ ಪ್ರದಾನ ಕಾರ್ಯದರ್ಶಿ ಮಂಜುಳ, ಬಿಸಿಯೂಟ ನೌಕರರ ಸಂಘದ ಪ್ರದಾನ ಕಾರ್ಯದರ್ಶಿ ನೇತ್ರ, ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಈರಯ್ಯ, ಪ್ರಧಾನ ಕಾರ್ಯದರ್ಶಿ ನಂದೀಶ್, ಪ್ರಮುಖರಾದ ಸೌಭಾಗ್ಯ ಭಾಗವಹಿಸಿದ್ದರು.
ರಾಜ್ಯದಲ್ಲಿ ರೈತರಿಗೆ ಮಾರಕವಾಗಿರುವ ಎಪಿಎಂಸಿ ಕಾಯ್ದೆ ಭೂ ಸ್ವಾಧೀನ ಕಾಯ್ದೆಯನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕುಚಂದ್ರಹಾಸ ಸಿಐಟಿಯು ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.