ADVERTISEMENT

ವರಮಹಾಲಕ್ಷ್ಮಿ ಹಬ್ಬ | ಹಾಸನ: ಬೆಲೆ ಏರಿಕೆ ನಡುವೆ ಖರೀದಿ ಜೋರು

ವರಮಹಾಲಕ್ಷ್ಮಿ ಹಬ್ಬದ ತಯಾರಿ: ಮಾರುಕಟ್ಟೆಯಲ್ಲಿ ಜನಜಂಗುಳಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 1:44 IST
Last Updated 8 ಆಗಸ್ಟ್ 2025, 1:44 IST
ಹಾಸನದ ಮಾರುಕಟ್ಟೆಯಲ್ಲಿ ಖರೀದಿಯಲ್ಲಿ ನಿರತರಾಗಿದ್ದ ಜನ.
ಹಾಸನದ ಮಾರುಕಟ್ಟೆಯಲ್ಲಿ ಖರೀದಿಯಲ್ಲಿ ನಿರತರಾಗಿದ್ದ ಜನ.   

ಹಾಸನ: ಶ್ರಾವಣ ಮಾಸದ ಮೊದಲ ಹಬ್ಬ ವರಮಹಾಲಕ್ಷ್ಮಿ ಹಬ್ಬಕ್ಕೆ ಬೆಲೆ ಏರಿಕೆ ನಡುವೆಯೂ ನಗರದಲ್ಲಿ ಗುರುವಾರ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿ ನಡೆಯಿತು.

ನಗರದ ಪ್ರಮುಖ ಕಟ್ಟೆನಕೆರೆ ಮಾರುಕಟ್ಟೆ, ಸಹ್ಯಾದ್ರಿ ಸರ್ಕಲ್, ಮಹಾವೀರ ವೃತ್ತ, ಸಂತೆಪೇಟೆ ರಸ್ತೆ, ಸ್ಲೇಟರ್ಸ್ ಹಾಲ್ ವೃತ್ತ, ಗಣೇಶ ದೇವಸ್ಥಾನ ವೃತ್ತ, ಸಾಲಗಾಮೆ ರಸ್ತೆ ಸೇರಿದಂತೆ ಪ್ರಮುಖ ಬಡಾವಣೆಯ ಸರ್ಕಲ್‌ಗಳಲ್ಲಿ ವ್ಯಾಪಾರ ಜೋರಾಗಿಯೇ ಇತ್ತು.

ಹಬ್ಬದ ನಿಮಿತ್ತ ಹೂ - ಹಣ್ಣುಗಳ ದರ ಗಗನಕ್ಕೆ ಏರಿದ್ದರೂ, ಜನರ ಉತ್ಸಾಹ ಕಡಿಮೆ ಇರಲಿಲ್ಲ, ಬಾಳೆ ಹಣ್ಣು, ಸೇಬು, ಹೂವು, ದ್ರಾಕ್ಷಿ, ತೆಂಗಿನ ಕಾಯಿ ಹೀಗೆ ಹಲವು ಸಾಮಗ್ರಿಗಳನ್ನು ಖರೀದಿ ಹೆಚ್ಚಿತ್ತು. ಮನೆಗಳಲ್ಲಿ ಪ್ರತಿಷ್ಠಾಪನೆಗೊಳ್ಳುವ ಲಕ್ಷ್ಮಿ ದೇವಿಯ ಅಲಂಕಾರಕ್ಕೆ, ಮನೆಗೆ ಬಂದ ಮಹಿಳೆಯರಿಗೆ ನೀಡುವ ಬಾಗಿನಕ್ಕೆ ಹೂವುಗಳು ಬೇಕೇ ಬೇಕು. ಹೀಗಾಗಿ ವಾರದಿಂದಲೇ ಹೂವಿನ ಬೆಲೆ ಗಗನ ಮುಖಿಯಾಗಿದೆ.

ADVERTISEMENT

ಲಕ್ಷ್ಮಿ ಆರಾಧನೆಗೆ ಬೇಕಾದ ಗಾಜಿನ ಬಳೆ, ಅರಿಶಿನ– ಕುಂಕುಮ, ಪೂಜಾ ಸಾಮಗ್ರಿ, ಬೆಳ್ಳಿಯ ಲಕ್ಷ್ಮೀ ಮುಖವಾಡ ಮೊದಲಾದವುಗಳ ಖರೀದಿಗಾಗಿ ಮಹಿಳೆಯರು ಮುಗಿಬಿದ್ದಿದ್ದರು. ಬಳೆಗಳ ಅಂಗಡಿ ಹಾಗೂ ಫ್ಯಾನ್ಸಿ ಸ್ಟೋರ್‌ಗಳು ಮಹಿಳೆಯರುರಿಂದ ತುಂಬಿದ್ದವು.

ವಿವಿಧ ಬಗೆಯ ಲಕ್ಷ್ಮೀ ಮುಖವಾಡಗಳು, ಕಮಲದ ಹೂವಿನ ಮಾದರಿಯ ಅಚ್ಚುಗಳು ಮಾರುಕಟ್ಟೆಯಲ್ಲಿ ಕಂಡುಬಂದವು. ತಾವರೆ ಹೂವಿಗೆ ಬೇಡಿಕೆ ಹೆಚ್ಚಾಗಿದ್ದು, ಬೆಲೆಯೂ ದುಬಾರಿಯಾಗಿತ್ತು.

ಈ ವಾರ ತರಕಾರಿಗಳ ಬೆಲೆಯಲ್ಲಿ ಹೆಚ್ಚು ವ್ಯತ್ಯಾಸ ಆಗಿಲ್ಲ. ಟೊಮೆಟೊ, ಈರುಳ್ಳಿ ಇಳಿಕೆ ಹಾದಿಯಲ್ಲಿದ್ದರೆ, ಇತರೆ ತರಕಾರಿ ಧಾರಣೆ ಮಾತ್ರ ಅಲ್ಪ ಏರಿಕೆ ಕಂಡಿದೆ. ಸೊಪ್ಪುಗಳು ಅಗ್ಗವಾಗಿಯೇ ಮುಂದುವರಿದಿವೆ.

ಹಾಸನದ ಮಾರುಕಟ್ಟೆಯಲ್ಲಿ ಗುರುವಾರ ಕಂಡು ಬಂದ ಜನಸಂದಣಿ
ಈ ಬಾರಿ ವರಮಹಾಲಕ್ಷ್ಮಿ ಹಬ್ಬಕ್ಕೆ ಖರೀದಿ ಮಾಡುತ್ತಿದ್ದು ಎಲ್ಲ ಬೆಲೆಯೂ ಹೆಚ್ಚಾಗಿದೆ. ಆದರೆ ಮೊದಲ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು. ಹಾಗಾಗಿ ಸಾಮಗ್ರಿ ಖರೀದಿಸುತ್ತಿದ್ದೇವೆ.
ಯುಮುನಾ ವಿದ್ಯಾನಗರದ ನಿವಾಸಿ
ಮಳೆಯಿಂದಾಗಿ ಈ ಬಾರಿ ಹಣ್ಣು ಹೂವಿನ ಪೂರೈಕೆ ಕಡಿಮೆಯಾಗಿದೆ. ಅಲ್ಲದೇ ಬೇಡಿಕೆ ಹೆಚ್ಚಾಗಿರುವುದರಿಂದ ಹೂವು–ಹಣ್ಣಿನ ಬೆಲೆಯೂ ಹೆಚ್ಚಾಗಿದೆ. ಖರೀದಿಸುವುದು ಅನಿವಾರ್ಯ.
ಪರಮೇಶ್ ರವೀಂದ್ರ ನಗರ ನಿವಾಸಿ
ಗುರುವಾರ ಅಪಾರ ಸಂಖ್ಯೆಯ ಜನರು ಮಾರುಕಟ್ಟೆಗೆ ಬಂದಿದ್ದರು. ಬೆಲೆ ಅಧಿಕವಾಗಿರುವುದು ಜನರು ಚೌಕಾಶಿ ಮಾಡುವುದು ಸಾಮಾನ್ಯ. ನಾವು ಹೆಚ್ಚಿನ ಬೆಲೆ ಕೊಡಬೇಕಾಗಿದ್ದು ದರ ಹೆಚ್ಚಿಸಲೇಬೇಕು.
ಶೇಖರ್‌ ಹಣ್ಣಿನ ವ್ಯಾಪಾರಿ

ವರಮಹಾಲಕ್ಷ್ಮಿಯೇ ಧರೆಗಿಳಿದಾಗ!

ಸಾರ್ವಜನಿಕರು ಮಹಾಲಕ್ಷ್ಮಿ ಪೂಜೆಯ ಸಿದ್ಧತೆಯಲ್ಲಿ ಇರುವಾಗ ಮಹಾಲಕ್ಷ್ಮಿಯೇ ಧರೆಗೆ ಇಳಿದು ಬಂದರೆ ಹೇಗಾದೀತು? ನಗರದ ಸಿಟಿ ಬಸ್ ನಿಲ್ದಾಣ ಹಾಗೂ ಹೂವಿನ ಮಾರುಕಟ್ಟೆಯಲ್ಲಿ ಜನರು ಮಹಾಲಕ್ಷ್ಮಿಯನ್ನು ಕಣ್ತುಂಬಿಕೊಳ್ಳುವ ಅವಕಾಶ ಲಭ್ಯವಾಗಿತ್ತು. ನಗರದ ಖಾಸಗಿ ಮೇಕಪ್ ಅಕಾಡೆಮಿ ವತಿಯಿಂದ ಯಮುನಾ ಮೇಕ್ ಓವರ್ ಫೇಸ್‌ಬುಕ್ ಪೇಜ್‌ನವರು ನಗರದ ಸಂತ ಜೋಸೆಫ್ ಕಾಲೇಜಿನ ವಿದ್ಯಾರ್ಥಿನಿ ಭೂಮಿಕಾ ಅವರಿಗೆ ವರಮಹಾಲಕ್ಷ್ಮಿ ಅಲಂಕಾರ ಮಾಡಿದ್ದರು. ಅಚ್ಚುಕಟ್ಟಾಗಿ ಹತ್ತಾರು ಒಡವೆ ಹೂ ಕೆಂಪನೆಯ ಸೀರೆ ಕೈಯಲ್ಲಿ ತ್ರಿಶೂಲ ತಲೆಗೆ ಕಿರೀಟ ಹಾಕಿ ಮೇಕಪ್ ಮಾಡಿಕೊಂಡು ನಗರದ ಸಿಟಿ ಬಸ್ ನಿಲ್ದಾಣ ಹಾಗೂ ಹೂವಿನ ಮಾರುಕಟ್ಟೆಯಲ್ಲಿ ಕೆಲ ಸಮಯ ಓಡಾಡುತ್ತಾ ಜನರನ್ನು ಆಕರ್ಷಿಸಿದರು. ಈ ಸಂದರ್ಭದಲ್ಲಿ ಹಿರಿಯ ನಾಗರಿಕರು ದೇವತೆಯೇ ಧರೆಗೆ ಇಳಿದಿದ್ದಾಳೆ ಎಂಬಂತೆ ಭೂಮಿಕಾ ಅವರಿಗೆ ಕೈ ಮುಗಿಯುವುದು ಅವರಿಂದ ಆಶೀರ್ವಾದ ಪಡೆಯುವ ಫೋಟೋ ಸೆಲ್ಫಿ ತೆಗೆದುಕೊಂಡ ಪ್ರಸಂಗವು ನಡೆಯಿತು.

ಮಹಾಲಕ್ಷ್ಮಿಯ ವೇಷಧರಿಸಿದ ಭೂಮಿಕಾ ಬಸ್‌ನಿಂದ ಇಳಿಯುತ್ತಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.