
ಪ್ರಜಾವಾಣಿ ವಾರ್ತೆ
ಅರಕಲಗೂಡು: ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಪ್ರಗತಿಪರ ರೈತರ ತಂಡ ಬುಧವಾರ ತಾಲ್ಲೂಕಿನ ಮಗ್ಗೆಮನೆ ಗ್ರಾಮದ ಪ್ರಗತಿಪರ ರೈತ ಎಂ.ಸಿ. ರಂಗಸ್ವಾಮಿ ಅವರ ತೋಟಕ್ಕೆ ಭೇಟಿ ನೀಡಿ ಸಂವಾದ ನಡೆಸಿದರು.
ಹಾಸನ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರೂ ಆಗಿರುವ ರಂಗಸ್ವಾಮಿ ಅವರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ದೊರೆತಿದ್ದು, ಬೀದರಿನಿಂದ ಚಾಮರಾಜನಗರವರೆಗೆ ಎಲ್ಲ ಜಿಲ್ಲೆಗಳಿಂದ ತಲಾ ಇಬ್ಬರು ನಿರ್ದೇಶಕರು ಹಾಗೂ ಪ್ರಗತಿಪರ ರೈತರನ್ನು ಒಳಗೊಂಡ ತಂಡ, ತೋಟ, ಮುದಗನೂರು ಸಮಗ್ರ ಕೃಷಿ ಪ್ರದೇಶ ಹಾಗೂ ಸಾವಿರ ಹಸುಗಳ ತಾಂತ್ರಿಕ ಹೈನುಗಾರಿಕಾ ಘಟಕವನ್ನು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಕಾರ್ಯಾಧ್ಯಕ್ಷ ನಗರ ಮಹಾದೇವಪ್ಪ, ಹಲವು ವರ್ಷಗಳ ನಂತರ ಕೃಷಿ ಕ್ಷೇತ್ರಕ್ಕೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ವಿಷಯ. ರಂಗಸ್ವಾಮಿ ಅವರ ಸಮಗ್ರ ಕೃಷಿ ಪದ್ಧತಿ, ಅನುಭವ ಹಾಗೂ ತಾಂತ್ರಿಕತೆ, ಕೃಷಿ, ಹೈನುಗಾರಿಕೆ ಮತ್ತು ತೋಟಗಾರಿಕೆಯನ್ನು ಒಂದೇ ಕಡೆ ಸೇರಿಸಿ ಕೃಷಿ ವಿಶ್ವವಿದ್ಯಾಲಯದಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಪೂರ್ಣ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ನಿರೀಕ್ಷೆಗಿಂತ ಹೆಚ್ಚು ಆದಾಯ ಗಳಿಸುವುದರ ಜೊತೆಗೆ ಪರಿಸರ ಸಂರಕ್ಷಣೆಯಲ್ಲೂ ಮಹತ್ವದ ಕೊಡುಗೆ ನೀಡಿದ್ದಾರೆ. ಒಂದೇ ಬೆಳೆಯಿಂದ ಜೀವನ ಸಾಗುವುದಿಲ್ಲ ಎಂಬುದನ್ನು ಅವರು ತಮ್ಮ ಕಾರ್ಯದ ಮೂಲಕ ಸಾಬೀತುಪಡಿಸಿದ್ದಾರೆ ಎಂದರು.
ಸಾವಿರಾರು ಶ್ರೀಗಂಧ, ರಕ್ಷಾ ಚಂದನ ಸೇರಿದಂತೆ ವಿವಿಧ ಮರ ಕೃಷಿ, ಅಡಿಕೆ, ತೆಂಗು, ಕಾಫಿ, ಏಲಕ್ಕಿ, ಕಾಳುಮೆಣಸು, ವಿವಿಧ ಹಣ್ಣಿನ ಗಿಡಗಳು, ಐದು ಕೆರೆಗಳಲ್ಲಿ ಮೀನು ಸಾಕಾಣಿಕೆ ನಡೆಸಿರುವುದು ವಿಶೇಷವಾಗಿದೆ ಎಂದು ಹೇಳಿದರು.
ನಿಕಟಪೂರ್ವ ಅಧ್ಯಕ್ಷ ಮಂಜುನಾಥಗೌಡ ಮಾತನಾಡಿ, ರಂಗಸ್ವಾಮಿ ಅವರ ಸಮಗ್ರ ಕೃಷಿ ಇಡೀ ರಾಜ್ಯದ ರೈತರಿಗೆ ಮಾರ್ಗದರ್ಶಕವಾಗಿದೆ. ರೈತರು ಇಲ್ಲಿ ಭೇಟಿ ನೀಡಿ ಅನುಭವ ಪಡೆದುಕೊಂಡರೆ ಕೃಷಿಯಲ್ಲಿ ಹೊಸ ಪರಿವರ್ತನೆ ಸಾಧ್ಯ. ಇಲ್ಲಿನ ಡೈರಿ ಉತ್ಪನ್ನಗಳ ಗುಣಮಟ್ಟ ಅತ್ಯುತ್ತಮವಾಗಿದೆ ಎಂದು ತಿಳಿಸಿದರು.
ಎಂ.ಸಿ. ರಂಗಸ್ವಾಮಿ ಮಾತನಾಡಿ, ರಾಜ್ಯದ ವಿವಿಧ ಜಿಲ್ಲೆಗಳ ಕೃಷಿಕ ಸಮಾಜದ ನಿರ್ದೇಶಕರು ಹಾಗೂ ರೈತರು ತಮ್ಮ ತೋಟಕ್ಕೆ ಭೇಟಿ ನೀಡಿರುವುದು ಜೀವನದ ಅಮೂಲ್ಯ ಕ್ಷಣ. ಸಮಗ್ರ ಕೃಷಿ ಪದ್ಧತಿಯನ್ನು ಕುಟುಂಬ ಸಮೇತರಾಗಿ ಕೈಗೊಂಡಿದ್ದು, ಗುಣಮಟ್ಟದ ಹೈನುಗಾರಿಕೆ ಉತ್ಪನ್ನಗಳನ್ನು ಮಾರುಕಟ್ಟೆಗೆ ಒದಗಿಸುತ್ತಿದ್ದೇವೆ. ರೈತರು, ವಿದ್ಯಾರ್ಥಿಗಳು ಹಾಗೂ ಕೃಷಿ ಆಸಕ್ತರು ಇಲ್ಲಿ ಭೇಟಿ ನೀಡಿ ಮಾರ್ಗದರ್ಶನ ಪಡೆಯಬಹುದು ಎಂದು ಹೇಳಿದರು.
ನಿವೃತ್ತ ಐಎಎಸ್ ಅಧಿಕಾರಿ ಡಾ.ರಾಮೇಗೌಡ, ಕೃಷ್ಣೇಗೌಡ, ಶಿರೀನ್ ರಂಗಸ್ವಾಮಿ ಹಾಗೂ ಕೃಷಿಕ ಸಮಾಜದ ನಿರ್ದೇಶಕರು, ಪ್ರಗತಿಪರ ರೈತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.