
ಬಂಧನ (ಸಾಂದರ್ಭಿಕ ಚಿತ್ರ)
ಹಾಸನ: ನಗರದಲ್ಲಿ ಅಂಗವಿಕಲ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಂಬಂಧ ತನಿಖೆ ನಡೆಸುತ್ತಿರುವ ವೇಳೆ, ವೇಶ್ಯಾವಾಟಿಕೆ ಜಾಲವೊಂದು ಪತ್ತೆಯಾಗಿದ್ದು, ಇಬ್ಬರನ್ನು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ಬಂಧನಕ್ಕಾಗಿ ತೆರಳಿದ್ದ ಹಾಸನ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು, ನಗರದ ಪ್ರದೇಶದ ಮನೆಯೊಂದರಲ್ಲಿ ಸಂತ್ರಸ್ತ ಮಹಿಳೆಯನ್ನು ರಕ್ಷಿಸಿದರು. ಬಳಿಕ ಸಂತ್ರಸ್ತೆಯನ್ನು ವಿಚಾರಣೆ ನಡೆಸಿದಾಗ, ಅಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಈ ಮಾಹಿತಿ ಆಧರಿಸಿ ತಕ್ಷಣ ಕಾರ್ಯಾಚರಣೆ ನಡೆಸಿದ ಮಹಿಳಾ ಠಾಣೆ ಇನ್‌ಸ್ಪೆಕ್ಟರ್ ಪಾಲಾಕ್ಷಪ್ರಭು, ಸಿಬ್ಬಂದಿ ಭಾನುಪ್ರಕಾಶ್, ಸಂಜಯ್ ಹಾಗೂ ತೇಜಸ್ವಿ, ವೇಶ್ಯಾವಾಟಿಕೆ ಜಾಲದ ಕಿಂಗ್‌ಪಿನ್‌ಗಳಾದ ಆಯೀಷ್ ಮತ್ತು ಪ್ರಮೀಳಾ ಎಂಬುವವರನ್ನು ಬಂಧಿಸಿದ್ದಾರೆ. ಇದೇ ವೇಳೆ ನಾಲ್ವರು ಸಂತ್ರಸ್ತೆಯರನ್ನು ಪೊಲೀಸರು ರಕ್ಷಿಸಿದ್ದಾರೆ.
ಬಂಧಿತ ಆಯೀಷ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ಹಾಸನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಯೀಷ್ ಈ ಹಿಂದೆಯೂ ವೇಶ್ಯಾವಾಟಿಕೆ ದಂಧೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.