ADVERTISEMENT

ಶುಲ್ಕ ಹೆಚ್ಚಳಕ್ಕೆ ವಿರೋಧ; ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 15:04 IST
Last Updated 4 ಡಿಸೆಂಬರ್ 2021, 15:04 IST
ಹಾಸನದ ಹೇಮಾವತಿ ಪ್ರತಿಮೆ ಎದುರು ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು
ಹಾಸನದ ಹೇಮಾವತಿ ಪ್ರತಿಮೆ ಎದುರು ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು   

ಹಾಸನ: ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ₹10 ಸಾವಿರಹೆಚ್ಚಿಸಿರುವುದನ್ನು ವಿರೋಧಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದ ಹೇಮಾವತಿಪ್ರತಿಮೆ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕಗಳನ್ನು ಸರ್ಕಾರಗಳು ಮನಬಂದಂತೆ ಹೆಚ್ಚಿಸುತ್ತಿರುವುದು ಸರಿಯಲ್ಲ. ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ದಿಢೀರ್‌ ಹತ್ತು ಸಾವಿರ ರೂಪಾಯಿ ಹೆಚ್ಚಿಸಿರುವುದನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಕೋವಿಡ್ ಲಾಕ್‌ ಡೌನ್‌ ನಿಂದಾಗಿ ಆರ್ಥಿಕ ಬಿಕ್ಕಟ್ಟಿನ ಜತೆಗೆ ಲಕ್ಷಾಂತರ ವಿದ್ಯಾರ್ಥಿಗಳಶೈಕ್ಷಣಿಕ ಜೀವನದಲ್ಲಿ ಹಲವು ಏರುಪೇರುಗಳು ಸಂಭವಿಸಿದೆ. ಈ ಸಮಸ್ಯೆಗಳ ನಡುವೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಕನಸನ್ನು ಸಂಪೂರ್ಣ ಕೈಬಿಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಏಕಾಏಕಿ ಶುಲ್ಕ ಏರಿಕೆ ನಿರ್ಧಾರ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ಅತಿ ದೊಡ್ಡ ಪ್ರಹಾರ ಮಾಡಿದಂತೆ ಎಂದು ಆರೋಪಿಸಿದರು.

ADVERTISEMENT

ಪದವಿ ಕೋರ್ಸ್‌ಗೆ ಪ್ರತಿ ವರ್ಷಕ್ಕಿಂತ 50 ಸಾವಿರ ಹೆಚ್ಚಿಗೆ ವಿದ್ಯಾರ್ಥಿಗಳು ಸರ್ಕಾರಿಪದವಿ ಕಾಲೇಜುಗಳಲ್ಲಿ ದಾಖಲಾತಿ ಪಡೆದಿದ್ದಾರೆ. ಪಿಯುಸಿ ದಾಖಲಾತಿ ಸಹ ಗಣನೀಯವಾಗಿಏರಿಕೆ ಆಗಿದೆ. ಆದ್ದರಿಂದ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಹೆಚ್ಚಿಗೆ ಮಾಡುವ ತಕ್ಷಣದಅವಶ್ಯಕತೆಇದೆ ಎಂದು ಅಭಿಪ್ರಾಪಟ್ಟರು.

ಸರ್ಕಾರವು ಹೆಚ್ಚುವರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಿ, ಹೆಚ್ಚುವರಿ ಬೋಧಕರ ನೇಮಕಾತಿ, ಮೂಲಸೌಕರ್ಯ, ಗ್ರಂಥಾಲಯ, ಪ್ರಯೋಗಾಲಯಗಳನ್ನು ನಿರ್ಮಿಸಬೇಕಿತ್ತು. ಇದರ ಬದಲಾಗಿ ಶುಲ್ಕ ಏರಿಕೆ ಮಾಡಿರುವುದು ಕಡು ಬಡ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ತೊಂದರೆ ಆಗಲಿದೆ ಎಂದು ದೂರಿದರು.

ಕೂಡಲೇ ಸರ್ಕಾರ ಈ ಶುಲ್ಕ ಏರಿಕೆ ವಾಪಸ್ ಪಡೆಯಬೇಕು. ಇತರೆ ವರ್ಷದ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ಪಡೆಯುತ್ತಿರುವುದನ್ನು ಕೂಡಲೇ ನಿಲ್ಲಿಸಲು ಆದೇಶ ನೀಡಬೇಕು ಎಂದು ಆಗ್ರಹಿಸಿದರು.

ಎಐಡಿಎಸ್‌ಒ ಜಿಲ್ಲಾ ಸಮಿತಿಯ ಸಹ ಸಂಚಾಲಕಿ ಚೈತ್, ಸದಸ್ಯರಾದ ಸುಶ್ಮಿತಾ, ದೀಕ್ಷಾ, ಚಿರಂತ್, ಇಂಪನ, ವಿದ್ಯಾರ್ಥಿಗಳಾದ ಕುಶ್ಮಿತಾ, ಮದನ್, ಅಜಯ್, ಚೇತನ್, ಚೈತ್ರಾ, ಅನಿಲ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.