
ಹಿಂದೂಗಳ ಸಹನೆ, ತಾಳ್ಮೆ ಪರೀಕ್ಷಿಸಬೇಡಿ | ದೌರ್ಜನ್ಯ, ಹಲ್ಲೆ ಪ್ರಕರಣ ನಿಯಂತ್ರಿಸಲು ಕ್ರಮ ಕೈಗೊಳ್ಳಿ | ಬಾಂಗ್ಲಾದಲ್ಲಿ ಹಿಂದೂಗಳಿಗೆ ಸುರಕ್ಷಿತ ವಾತಾವರಣ ನಿರ್ಮಿಸಿ
ಹಾಸನ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಹತ್ಯಾಕಾಂಡ ಹಾಗೂ ದೌರ್ಜನ್ಯ ಖಂಡಿಸಿ ವಿಶ್ವ ಹಿಂದೂ ಪರಿಷತ್, ಬಿಜೆಪಿ ಹಾಗೂ ಹಿಂದುತ್ವ ಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಮಹಾವೀರ ವೃತ್ತ, ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಪ್ರತಿಭಟನಕಾರರು, ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಧರಣಿ ನಡೆಸಿದರು.
ಈ ವೇಳೆ ಸಂಘಟನೆಗಳ ಮುಖಂಡರು ಮಾತನಾಡಿ, ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಹಿಂದೂ ಧರ್ಮದ ಯುವಕ ದೀಪು ಚಂದ್ರ ದಾಸ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಖಂಡನೀಯ ಮತ್ತು ಅಮಾನವೀಯ ಕೃತ್ಯ ಎಂದು ಕಿಡಿಕಾರಿದರು.
ಇಂತಹ ಘಟನೆಗಳು ಬಾಂಗ್ಲಾದೇಶದಲ್ಲಿ ಪದೇ ಪದೇ ನಡೆಯುತ್ತಿದ್ದು, ಹಿಂದೂ ಸಮುದಾಯದ ಜನರು ಭಯಭೀತಿಯಲ್ಲಿ ವಾಸಿಸುವಂತಾಗಿದೆ. ಅವರ ಜೀವ ಹಾಗೂ ಆಸ್ತಿ ರಕ್ಷಣೆಗೆ ಅಲ್ಲಿನ ಸರ್ಕಾರ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೆಲ ವರ್ಷಗಳಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ಹಲ್ಲೆ, ದೌರ್ಜನ್ಯಗಳು ಮರುಕಳಿಸುತ್ತಲೇ ಇವೆ. ಅಂತರ ರಾಷ್ಟ್ರೀಯ ಮಟ್ಟದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ರಾಜತಾಂತ್ರಿಕ ಪ್ರತಿನಿಧಿಗಳು ಹಸ್ತಕ್ಷೇಪ ಮಾಡಬೇಕು. ಕೂಡಲೇ ಹಿಂದೂಗಳ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಒಂದೆಡೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆಯುತ್ತಿದ್ದು, ಭಾರತ ದೇಶದೊಳಗೆ ಅಕ್ರಮವಾಗಿ ವಲಸೆ ಬಂದಿರುವ ಬಾಂಗ್ಲಾದೇಶದ ಜನರು ದೇಶದ ನಾನಾ ರಾಜ್ಯಗಳಲ್ಲಿ ನೆಲೆಸಿದ್ದಾರೆ. ಇಂತಹ ಅಕ್ರಮ ವಲಸಿಗರನ್ನು ತಕ್ಷಣ ಗುರುತಿಸಿ, ಗಡೀಪಾರು ಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಕೂಡಲೇ ನಮ್ಮ ಮನವಿಗೆ ಸ್ಪಂದಿಸಿ, ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹಿಂದುತ್ವ ಪರ ಸಂಘಟನೆಗಳು ಉಗ್ರ ಹೋರಾಟ ನಡೆಸಲಿವೆ ಎಂದು ಎಚ್ಚರಿಸಿದರು.
ವಿಶ್ವ ಹಿಂದೂ ಪರಿಷತ್ ಮುಖಂಡರಾದ ವಿಜಯಕುಮಾರ್, ಮಹಿಪಾಲ್, ಬಿಜೆಪಿ ಪ್ರಕೋಷ್ಠದ ರಾಜ್ಯ ಸಂಚಾಲಕ ನಾಗೇಶ್, ಬಜರಂಗದಳದ ಲೋಕೇಶ್, ಅಭಿಲಾಶ್, ಹಿಂದುತ್ವ ಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಬಾಂಗ್ಲಾದೇಶದಲ್ಲಿ ಹಿಂದೂ ವಿರೋಧಿ ಕೃತ್ಯ ನಿಯಂತ್ರಿಸಲು ಕೇಂದ್ರ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು. ಬಾಂಗ್ಲಾ ವಲಸಿಗರನ್ನು ಕೂಡಲೇ ಗಡೀಪಾರು ಮಾಡಲು ರಾಜ್ಯ ಸರ್ಕಾರ ಮುಂದಾಗಬೇಕು.ಸಿದ್ದೇಶ್ ನಾಗೇಂದ್ರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.