ADVERTISEMENT

ಕಾರ್ಮಿಕ‌ ಸಂಹಿತೆ ವಿರುದ್ಧ ಪ್ರತಿಭಟನೆ

ನ.26 ರಂದು ಕರಡು ಪ್ರತಿ ಸುಟ್ಟು ವಿರೋಧ: ಸಿಐಟಿಯು ಉಪಾಧ್ಯಕ್ಷ ಧರ್ಮೇಶ್‌

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 3:21 IST
Last Updated 23 ನವೆಂಬರ್ 2025, 3:21 IST
ಹಾಸನದ ಮಹಾವೀರ ವೃತ್ತದಲ್ಲಿ ಶನಿವಾರ ಸಿಐಟಿಯು ನೇತೃತ್ವದಲ್ಲಿ ಶ್ರಮ ಶಕ್ತಿ ನೀತಿಯ ಅಧಿಸೂಚನೆ ಪ್ರತಿಗಳನ್ನು ಸುಟ್ಟು ಪ್ರತಿಭಟನೆ ನಡೆಸಲಾಯಿತು
ಹಾಸನದ ಮಹಾವೀರ ವೃತ್ತದಲ್ಲಿ ಶನಿವಾರ ಸಿಐಟಿಯು ನೇತೃತ್ವದಲ್ಲಿ ಶ್ರಮ ಶಕ್ತಿ ನೀತಿಯ ಅಧಿಸೂಚನೆ ಪ್ರತಿಗಳನ್ನು ಸುಟ್ಟು ಪ್ರತಿಭಟನೆ ನಡೆಸಲಾಯಿತು   

ಹಾಸನ: ಕಾರ್ಮಿಕ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ಕೇಂದ್ರ ಸರ್ಕಾರ 4 ಕರಾಳ ಕಾರ್ಮಿಕ ಸಂಹಿತೆಗಳನ್ನು ನ. 21ರಿಂದ ಜಾರಿ ಮಾಡಿದೆ. ನಗರದ ಮಹಾವೀರ ವೃತ್ತದಲ್ಲಿ ಕೇಂದ್ರ ಸರ್ಕಾರದ ಅಧಿಸೂಚನೆ ಪ್ರತಿಗಳನ್ನು ಸುಟ್ಟು ಶನಿವಾರ ಪ್ರತಿಭಟನೆ ನಡೆಸಲಾಗಿದೆ. ಜನ ವಿರೋಧಿ ಕೇಂದ್ರದ ಕಾರ್ಮಿಕ ಸಂಹಿತೆ ಜಾರಿ ಮಾಡದಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಲಾಗಿದೆ ಎಂದು ಸಿಐಟಿಯು ರಾಜ್ಯ ಘಟಕದ ಉಪಾಧ್ಯಕ್ಷ ಧರ್ಮೇಶ್‌ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನವೆಂಬರ್ 26ರಂದು ನಡೆಯುವ ಸಂವಿಧಾನ ದಿನಾಚರಣೆ ಸಂದರ್ಭದಲ್ಲೂ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಕೆಂದ್ರ ಸರ್ಕಾರದ ಶ್ರಮ ಶಕ್ತಿ ನೀತಿ-2025 ಕರಡು ಪ್ರತಿಗಳನ್ನು ಸುಟ್ಟು ಪ್ರತಿಭಟಿಸಲಾಗುವುದು’ ಎಂದು ತಿಳಿಸಿದರು.

‘ಕೇಂದ್ರ ಸರ್ಕಾರ ಶ್ರಮ ಧರ್ಮ ಎಂದು ಹೇಳಿಕೊಂಡು ಶ್ರಮ ಶಕ್ತಿ ನೀತಿ-2025 ಎಂಬ ರಾಷ್ಟ್ರೀಯ ಕಾರ್ಮಿಕ ಮತ್ತು ಉದ್ಯೋಗ ನೀತಿಯ ಕರಡು ನೀತಿ ಪ್ರಕಟಿಸಿದೆ. ಇದು ಕಾರ್ಮಿಕ ಸಂಹಿತೆ ಜಾರಿಗೊಳಿಸಲು ಒಂದು ಹತಾಶ ಪ್ರಯತ್ನದ ಭಾಗವಾಗಿದ್ದು, ಕಾರ್ಮಿಕ ಕಾನೂನು ಆಡಳಿತದ ನಿಯಂತ್ರಣವನ್ನು ಮುಕ್ತಗೊಳಿಸಿ ದುಡಿಯುವ ಜನರ ಮೇಲೆ ಗುಲಾಮಗಿರಿ ಹೇರಿಕೆ ಮಾಡುವ ಪ್ರಯತ್ನವಾಗಿದೆ’ ಎಂದು ದೂರಿದರು.

ADVERTISEMENT

ಈ ಕರಡು ನೀತಿಯು ಮನುಸ್ಮೃತಿ ಮತ್ತು ಇತರ ಧರ್ಮಶಾಸ್ತ್ರಗಳ ಆಧಾರದ ಮೇಲೆ ಕೆಲಸದ ನೈತಿಕ ಮೌಲ್ಯಗಳಿಂದ ಸ್ಫೂರ್ತಿ ಪಡೆಯುವ ಶ್ರಮ ಧರ್ಮದ ನಾಗರಿಕತೆಯ ನೀತಿಗಳಲ್ಲಿ ಬೇರೂರಿದೆ ಎಂದು ಹೇಳುತ್ತದೆ. ಮತ್ತೊಮ್ಮೆ ಅಸಮಾನತೆಯನ್ನು ಕಾನೂನುಬದ್ಧಗೊಳಿಸುವ ಮತ್ತು ಕಾರ್ಮಿಕರ ಹಕ್ಕು ಆಧಾರಿತ ವಿಧಾನವನ್ನು ನಿಗ್ರಹಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.

ಸಿಐಟಿಯು ಜಿಲ್ಲಾ ಘಟಕದ ಖಜಾಂಚಿ ಅರವಿಂದ್, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಂಜುಳಾ, ಕೆ.ಟಿ. ಹೊನ್ನೇಗೌಡ, ಸೌಮ್ಯಾ ಇದ್ದರು.

ರಾಜ್ಯ ಸಮ್ಮೇಳನ ಯಶಸ್ವಿ

ನಗರದಲ್ಲಿ ನ.13ರಿಂದ 15ರವರೆಗೆ ನಡೆದ ಸಿಐಟಿಯು 16ನೇ ರಾಜ್ಯ ಸಮ್ಮೇಳನ ಯಶಸ್ವಿಯಾಗಿದ್ದು ಯಶಸ್ಸಿಗೆ ಶ್ರಮಿಸಿದ ಮತ್ತು ಸಹಕಾರ ನೀಡಿದ ಎಲ್ಲರಿಗೂ ಜಿಲ್ಲಾ ಸಮಿತಿ ಧನ್ಯವಾದ ಸಲ್ಲಿಸುತ್ತದೆ ಎಂದು ಧರ್ಮೇಶ್ ತಿಳಿಸಿದರು. 3 ದಿನ ನಡೆದ ಸಮ್ಮೇಳನದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ವಿವಿಧ ಕಾರ್ಮಿಕ ಸಂಘಗಳ 339 ಕಾರ್ಮಿಕ ಪ್ರತಿನಿಧಿಗಳು ಸೌಹಾರ್ದ ಪ್ರತಿನಿಧಿಗಳು ಅತಿಥಿಗಳು ಹಾಗೂ ಸ್ವಯಂ ಸೇವಕರು ಸೇರಿ ಒಟ್ಟು 450 ಜನರು ಭಾಗವಹಿಸಿದ್ದರು ಎಂದರು. ಕಾರ್ಮಿಕರು ರೈತರು ಕೂಲಿಕಾರರು ದಲಿತರು ಮಹಿಳೆಯರು ಮಕ್ಕಳು ಹಾಗೂ ಅಲ್ಪಸಂಖ್ಯಾತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ವಿರುದ್ಧ ಅವರ ಹಕ್ಕುಗಳಿಗಾಗಿ ಹೋರಾಟ ಮತ್ತು ಕಾರ್ಯಕ್ರಮ‌ಗಳನ್ನು ರೂಪಿಸುವ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ವಿವರಿಸಿದರು. ಈ ರಾಜ್ಯ ಸಮ್ಮೇಳನದಲ್ಲಿ ಮುಂದಿನ‌ 3 ವರ್ಷಗಳ ಅವಧಿಗೆ 39 ಪದಾಧಿಕಾರಿಗಳು ಮತ್ತು 139 ಸದಸ್ಯರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.