ADVERTISEMENT

ಸಂಚಾರಿ ಪೊಲೀಸರ ವಿರುದ್ಧ ಪ್ರತಿಭಟನೆ

ಎನ್‌.ಆರ್‌.ವೃತ್ತದಲ್ಲಿ ಲಾರಿ ಡಿಕ್ಕಿಯಾಗಿ ಹಿರಿಯ ವಕೀಲ ಸಾವು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 14:23 IST
Last Updated 7 ಸೆಪ್ಟೆಂಬರ್ 2021, 14:23 IST
ಹಾಸನದ ಎನ್‌.ಆರ್‌. ವೃತ್ತದಲ್ಲಿ ವಕೀಲರು ರಸ್ತೆತಡೆ ನಡೆಸಿದರು.
ಹಾಸನದ ಎನ್‌.ಆರ್‌. ವೃತ್ತದಲ್ಲಿ ವಕೀಲರು ರಸ್ತೆತಡೆ ನಡೆಸಿದರು.   

ಹಾಸನ: ನಗರದ ಎನ್‌.ಆರ್‌. ವೃತ್ತದಲ್ಲಿ ಮಂಗಳವಾರ ಲಾರಿ ಡಿಕ್ಕಿಯಾಗಿ ವಕೀಲ ನಜೀರ್‌ ಅಹಮ್ಮದ್‌ (65) ಮೃತಪಟ್ಟ ಹಿನ್ನೆಲೆಯಲ್ಲಿ ವಕೀಲರು ರಸ್ತೆತಡೆ ನಡೆಸಿ, ಸಂಚಾರಿ ಪೊಲೀಸರ ವಿರುದ್ಧ ಘೋಷಣೆ ಕೂಗಿದರು.

ನಜೀರ್ ಅಹಮ್ಮದ್ ಅವರು ಬೈಕ್‌ನಲ್ಲಿ ನ್ಯಾಯಾಲಯಕ್ಕೆ ಹೋಗುವಾಗ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಅವರ ಮೇಲೆ ಲಾರಿ ಚಕ್ರ ಹರಿದು, ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವಿಗೀಡಾದರು.

ಅಪಘಾತಕ್ಕೆ ಸಂಚಾರಿ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಮೂರ್ತಿ ನೇತೃತ್ವದಲ್ಲಿ ವಕೀಲರು ನ್ಯಾಯಾಲಯ ಕಲಾಪಗಳಿಂದ ಹೊರಗುಳಿದು ಎನ್.ಆರ್. ವೃತ್ತದಲ್ಲಿ ರಸ್ತೆತಡೆ ನಡೆಸಿದರು. ಈ ವೇಳೆ ವಕೀಲರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ವೃತ್ತ ನಿರೀಕ್ಷಕ ರೇಣುಕಾ ಪ್ರಸಾದ್ ಅವರು ಏರು ಧ್ವನಿಯಲ್ಲಿ ಮಾತನಾಡಿದಾಗ ಸಿಟ್ಟಿಗೆದ್ದ ವಕೀಲರು, ಸಿಪಿಐ ವಿರುದ್ಧ ಘೋಷಣೆ ಕೂಗಿದರು.

ADVERTISEMENT

‘ನಗರದ ಹೃದಯಭಾಗ ಎನ್.ಆರ್‌. ವೃತ್ತದಲ್ಲಿ ವಾಹನ ದಟ್ಟಣೆ ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಬದಲಿಗೆ ಸಂಚಾರಿ ಪೊಲೀಸರು ನಗರದಾದ್ಯಂತ ವಾಹನಗಳ ದಾಖಲೆ ತಪಾಸಣೆ ಹೆಸರಿನಲ್ಲಿ ತಮ್ಮ ಬೊಕ್ಕಸ ತುಂಬಿಸಿ ಕೊಳ್ಳುತ್ತಿದ್ದಾರೆ. ಭಾರಿ ವಾಹನಗಳು ನಗರ ಪ್ರವೇಶ ನಿಷೇಧಿಸಬೇಕು. ಈ ಹಿಂದೆಯೂ ಇದೇ ಸ್ಧಳದಲ್ಲಿ ಅನೇಕ ಅಪಘಾತಗಳ ಸಂಭವಿಸಿದ್ದು, ಪೊಲೀಸ್ ಇಲಾಖೆ ವಾಹನ ದಟ್ಟಣೆ ನಿಯಂತ್ರಿಸುವಲ್ಲಿ ವಿಫಲವಾಗಿದೆ’ ’ ಎಂದು ಪ್ರತಿಭಟನಕಾರರು ಆರೋಪಿಸಿದರು.

ಸ್ಥಳಕ್ಕೆ ಬಂದ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್‌. ನಂದಿನಿ ವಕೀಲರ ಜೊತೆಗೆ ಮಾತುಕತೆ ನಡೆಸಿದರಾದರೂ ಪ್ರಯೋಜನವಾಗಲಿಲ್ಲ. ಬಳಿಕ ಜಿಲ್ಲಾ ಪೊಲೀಸ್‌ ವರೀಷ್ಠಾಧಿಕಾರಿ ಆರ್‌.ಶ್ರೀನಿವಾಸ್‌ಗೌಡ ಭೇಟಿ ನೀಡಿ, ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ಮಾಡಿದ ಮನವಿಗೆ ವಕೀಲರು ಸ್ಪಂದಿಸಿ, ಪ್ರತಿಭಟನೆ ಹಿಂತೆಗೆದುಕೊಂಡರು.

ನಗರದಲ್ಲಿ ಮತ್ತೆ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರಿಗೆ ವಕೀಲರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಮೂರ್ತಿ, ಮಾಜಿ ಅಧ್ಯಕ್ಷ ಜೆ.ಪಿ. ಶೇಖರ್‌‌, ದೇವರಾಜೇಗೌಡ, ವಕೀಲರ ಸಂಘದ ಜಿಲ್ಲಾ ಸಂಚಾಲಕ ಎಚ್.ಆರ್. ರಂಗನಾಥ್, ಉಪಾಧ್ಯಕ್ಷ ಕೆ.ಕೆ. ಮೋಹನ್ ಕುಮಾರ್, ಮಾಜಿ ಕಾರ್ಯದರ್ಶಿ ಪ್ರಸನ್ನ ದಾಸರಕೊಪ್ಪಲು, ಶ್ರೀನಿವಾಸ್ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.