ADVERTISEMENT

ಹೇಮಾವತಿ ಜಲಾಶಯ ಸಂತ್ರಸ್ತರಿಂದ ಪ್ರತಿಭಟನೆ

ಪೋಡಿ ಮಾಡಿಕೊಡಲು ಆಲೂರು, ಅರಕಲಗೂಡು ರೈತರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 5:24 IST
Last Updated 1 ಮಾರ್ಚ್ 2023, 5:24 IST
ಹೇಮಾವತಿ ಅಣೆಕಟ್ಟೆ ಸಂತ್ರಸ್ತರ ಹೋರಾಟ ಸಮಿತಿ ವತಿಯಿಂದ ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಹೇಮಾವತಿ ಅಣೆಕಟ್ಟೆ ಸಂತ್ರಸ್ತರ ಹೋರಾಟ ಸಮಿತಿ ವತಿಯಿಂದ ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.   

ಹಾಸನ: ಹೇಮಾವತಿ ಜಲಾಶಯದ ಮುಳುಗಡೆ ಸಂತ್ರಸ್ತರಿಗೆ ಪೋಡಿ, ಜಮೀನು ದಾಖಲೆಗಳನ್ನು ಸರಿಪಡಿಸಿಕೊಡಬೇಕು ಎಂದು ಒತ್ತಾಯಿಸಿ ಹೇಮಾವತಿ ಅಣೆಕಟ್ಟೆ ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ ಆಲೂರು, ಅರಕಲಗೂಡು ತಾಲ್ಲೂಕಿನ ರೈತರು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಮಿತಿ ಅಧ್ಯಕ್ಷ ಎಸ್‌.ಕೃಷ್ಣ, ಹೇಮಾವತಿ ಆಣೆಕಟ್ಟೆಯಿಂದ ಮನೆ ಮತ್ತು ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಆಲೂರು ತಾಲ್ಲೂಕಿನ ಫಾರೆಸ್ಟ್ ಮತ್ತಿತರ ಸ್ಥಳಗಳಲ್ಲಿ ಜಮೀನು ಮಂಜೂರಾತಿ ಮಾಡಿಸಲಾಗಿದೆ. 1970 ರ ದಶಕದಲ್ಲಿ ಜಮೀನು ಮಂಜೂರು ಮಾಡಿ ಸಾಗುವಳಿ ಚೀಟಿಯನ್ನು ಮಾತ್ರ ನೀಡಲಾಗಿದೆ ಎಂದು ಹೇಳಿದರು.

ನಮಗೆ ಪಹಣಿ ಸರಿಪಡಿಸಿ, ಖಾತೆಯನ್ನು ಇದುವರೆಗೂ ನೀಡಿಲ್ಲ. ಮುಳುಗಡೆ ಸಂತ್ರಸ್ತರಿಗೆ ಮಂಜೂರು ಮಾಡಿರುವ ಜಮೀನನ್ನು ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ಜಮೀನಿನ ಪೋಡಿ ಮಾಡದ ಕಾರಣ ಸರ್ಕಾರದಿಂದ ಸಿಗುವ ಯಾವುದೇ ಸವಲತ್ತುಗಳು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

ADVERTISEMENT

ನಮ್ಮ ಸಮಸ್ಯೆ ಕುರಿತು ಸಂಬಂಧಪಟ್ಟ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಡಿ.17 ರಂದು ಬಸವೇಶಪುರ ಗ್ರಾಮದಲ್ಲಿ ನಡೆದ ಜಿಲ್ಲಾಕಾರಿ ನಡೆ ಹಳ್ಳಿಯ ಕಡೆ ಸಭೆಯಲ್ಲಿ ಜಿಲ್ಲಾಧಿಕಾರಿ, ಶಾಸಕರು, ತಹಶೀಲ್ದಾರರು ಮತ್ತು ಡಿಡಿಎಲ್‌ಆರ್‌ಗೆ ಈ ವಿಷಯದ ಬಗ್ಗೆ ವಿವರವಾಗಿ ವಿವರಿಸಲಾಗಿತ್ತು. ಸಂತ್ರಸ್ತರ ಮನವಿಗೆ ಅಧಿಕಾರಿಗಳು ಸಹ ಒಪ್ಪಿದ್ದರು. ಆದರೆ ಅಧಿಕಾರಿಗಳು ಇದುವರೆಗೂ ಸ್ಪಂದಿಸುತ್ತಿಲ್ಲ. ದಾಖಲೆ ಕಳೆದುಹೋಗಿವೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಹೇಮಾವತಿ ಜಲಾಶಯ ಮುಳುಗಡೆ ಸಂತ್ರಸ್ತರ ಹಕ್ಕೊತ್ತಾಯಕ್ಕಾಗಿ ಹೇಮಾವತಿ ಜಲಾಶಯ ಸಂತಸ್ತರ ಹೋರಾಟ ಸಮಿತಿ ವತಿಯಿಂದ ಹಲವು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಆಲೂರು ಮತ್ತು ಅರಕಲಗೂಡು ತಹಶೀಲ್ದಾರ್ ಕಚೇರಿ ಎದುರು ಸಂತ್ರಸ್ತರೆಲ್ಲ ಸೇರಿ ಪ್ರತಿಭಟನೆ ನಡೆಸಿದರೂ ಸಮರ್ಪಕ ಉತ್ತರ ದೊರಕಿಲ್ಲ ಎಂದು ಆಪಾದಿಸಿದರು.

ಈಗಾಗಲೇ ಸರ್ಕಾರದಿಂದ ಸಂತ್ರಸ್ತರಿಗೆ ನೀಡಿರುವ ಜಮೀನಿನಲ್ಲಿ ಕೃಷಿಯನ್ನು ಮಾಡುತ್ತಿರುವ ಅರ್ಹರಿಗೆ, ಪೋಡಿ ಮಾಡದ ಹಿನ್ನೆಲೆಯಲ್ಲಿ ತೊಂದರೆಯಾಗಿದೆ. ಸರ್ಕಾರದಿಂದಲೂ ಪೋಡಿ ಮಾಡುವಂತೆ 8 ಸುತ್ತೊಲೆ ಮೂಲಕ ನಿರ್ದೇಶನವಿದ್ದರೂ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳುವ ವಿಫಲವಾಗಿದೆ. ಆದಷ್ಟು ಕೂಡಲೇ ನಮ್ಮ ಮನವಿಗೆ ಸ್ಪಂದಿಸಿ, ನೂರಾರು ರೈತರ ಜಮೀನುಗಳನ್ನು ಸರ್ವೆ ಮಾಡಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಮಂಜೇಗೌಡ, ಮಂಜುನಾಥ್ ದತ್ತ, ಗಣೇಶ್, ಕೃಷ್ಣಗೌಡ, ನಾಗೇಶ್, ಮಲ್ಲೇಶ್, ಮಂಜೇಶ್, ಆಲೂರು, ಅರಕಲಗೂಡು ತಾಲ್ಲೂಕಿನ ಸಂತ್ರಸ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.