ADVERTISEMENT

ನ. 2ರಿಂದ ಅಹೋರಾತ್ರಿ ಧರಣಿ: ಎಚ್ಚರಿಕೆ

ತಂಬಾಕಿಗೆ ಸಿಗದ ಬೆಲೆ: ಬೆಳೆಗಾರರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 10:48 IST
Last Updated 30 ಅಕ್ಟೋಬರ್ 2020, 10:48 IST
ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯ ರೈತಭವನದಲ್ಲಿ ನಡೆದ ಬೆಳೆಗಾರರ ಸಂಘದ ಸಭೆಯಲ್ಲಿ ಸೇರಿದ್ದ ಬೆಳೆಗಾರರು
ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯ ರೈತಭವನದಲ್ಲಿ ನಡೆದ ಬೆಳೆಗಾರರ ಸಂಘದ ಸಭೆಯಲ್ಲಿ ಸೇರಿದ್ದ ಬೆಳೆಗಾರರು   

ಕೊಣನೂರು: ಬೆಲೆ ಕುಸಿತದಿಂದ ತಂಬಾಕು ಬೆಳೆಗಾರರಿಗೆ ಆಗುತ್ತಿರುವ ನಷ್ಟಕ್ಕೆ ಆಕ್ರೋಶ ವ್ತಕ್ತಪಡಿಸಿರುವ ಬೆಳೆಗಾರರು ಸೋಮವಾರದಿಂದ (ನ. 2ರಿಂದ) ಅಹೋರಾತ್ರಿ ಪ್ರತಿಭಟನೆ ಆರಂಭಿಸಲು ನಿರ್ಧರಿಸಿದ್ದಾರೆ.

ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆ ಆವರಣದಲ್ಲಿರುವ ರೈತಭವನದಲ್ಲಿ ಗುರುವಾರ ಸೇರಿದ್ದ ತಂಬಾಕು ಬೆಳೆಗಾರರ ಸಂಘದ ಸಭೆಯಲ್ಲಿ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸೀಬಳ್ಳಿ ಯೋಗಣ್ಣಮಾತನಾಡಿ, ‘ಬೆಳೆಗಾರರ ಸಂಘ, ಬೆಳೆಗಾರರು ಮತ್ತು ರೈತ ಸಂಘಟನೆಯ ಸಹಕಾರದೊಂದಿಗೆ ಧರಣಿ ಆರಂಭಿಸಲಾಗುವುದು’ ಎಂದು ಹೇಳಿದರು.

ಸೋಮವಾರ ಬೆಳಿಗ್ಗೆ ಬಸವೇಶ್ವರ ಸರ್ಕಲ್‌ನಿಂದ ಪ್ರತಿಭಟನೆ ಆರಂಭಿಸಿ ಹರಾಜು ಮಾರುಕಟ್ಟೆಯ ಆವರಣಕ್ಕೆ ತೆರಳಿ ಅಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಂಡು ಬೆಢಿಕೆ ಈಡೇರುವವರೆಗೂ ಧರಣಿ ನಡೆಸಲಾಗುವುದು ಎಂದು ಹೇಳಿದರು.

ADVERTISEMENT

‘ಶಾಸಕರು ಆಸಕ್ತಿವಹಿಸಿ ರೈತ ನಿಯೋಗದೊಂದಿಗೆ ತೆರಳಿ ಸರ್ಕಾರದ ಗಮನಸೆಳೆಯಬೇಕು’ ಎಂದು ಕೋರಿದರು.

ಫ್ಲಾಟ್ ಫಾರಂ 7ರ ಬೆಳೆಗಾರರ ಸಂಘದ ಅಧ್ಯಕ್ಷ ನಿಲುವಾಗಿಲು ಈರಣ್ಣ ಮಾತನಾಡಿ, ‘ತಂಬಾಕು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವ ಸಲುವಾಗಿ ಬೆಳೆಗಾರರ ಸಂಘವು ಅಹೋರಾತ್ರಿ ಧರಣಿಗೆ ಸಹಕಾರ ನೀಡಲಿದ್ದು, ರಾಮನಾಥಪುರವಷ್ಟೇ ಅಲ್ಲದೆ ಕಗ್ಗುಂಡಿ, ಕಂಪಲಾಪುರ, ಎಚ್.ಡಿ.ಕೋಟೆ ಮಾರುಕಟ್ಟೆ ವ್ಯಾಪ್ತಿಗೆ ಬರುವ ತಂಬಾಕು ಬೆಳೆಗಾರರು ಮತ್ತು ರೈತ ಮುಖಂಡರನ್ನು ಸಂಪರ್ಕಿಸಿ ಸರ್ಕಾರದ ಗಮನವನ್ನು ಸೆಳೆಯುವಂತೆ ಹೋರಾಟ ರೂಪಿಸಲಾಗುವುದು’ ಎಂದರು.

ಫ್ಲಾಟ್ ಫಾರಂ 63ರ ಬೆಳೆಗಾರರ ಸಂಘದ ಅಧ್ಯಕ್ಷ ಕಾಡನೂರು ಕುಮಾರ್ ಮಾತನಾಡಿ, ‘ಸಾವಿರಾರು ತಂಬಾಕು ಬೆಳೆಗಾರರಿಗೆ ವಿಧಿಸುತ್ತಿರುವ ಜಿಎಸ್‌ಟಿ ಮತ್ತು ದಂಡವನ್ನು ಹಿಂತೆಗೆದುಕೊಳ್ಳಬೇಕು. ಕೋವಿಡ್ ಪರಿಸ್ಥಿತಿಯಲ್ಲಿ ಬೆಳೆಗಾರರನ್ನು ಶೋಷಿಸುತ್ತಿರುವುದು ಖಂಡನೀಯ. ಅಹೋರಾತ್ರಿ ಧರಣಿಗೆ ಬೆಂಬಲಿಸುವುದಾಗಿ’ ತಿಳಿಸಿದರು.

ಸಭೆಯಲ್ಲಿ ರೈತ ಸಂಘದ ಹೊನಗಾನಹಳ್ಳಿ ಜಗದೀಶ್, ರೈತ ಮುಖಂಡ ನೇತ್ರಪಾಲ್, ಪಿರಿಯಾಪಟ್ಟಣ ಶ್ರೀನಿವಾಸ್, ಬೊಮ್ಮೇಗೌಡ, ಬಾಲಣ್ಣ, ಕಣಿಯಾರು ಮಹೇಶ್, ಕರ್ಕಿಕೊಪ್ಪಲು ಮಲ್ಲೇಶ್, ಕಾಡನೂರು ಚೇತನ್, ಶೇಷಪ್ಪ ಮಾತನಾಡಿದರು.

ಬೆಳೆಗಾರರ ಸಂಘದ ಕಾರ್ಯದರ್ಶಿ ಬಿಳಗುಲಿ ಪುಟ್ಟರಾಜು ಮತ್ತು 200ಕ್ಕೂ ಹೆಚ್ಚು ರೈತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.