ಹಾಸನ: ನಗರದ ಪುರದಮ್ಮ ದೇವಸ್ಥಾನಕ್ಕೆ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆ, ರಾಜ್ಯದಿಂದಲ್ಲೂ ಹೆಚ್ಚಿನ ಭಕ್ತರು ಬರುತ್ತಾರೆ. ಅಗತ್ಯ ಮೂಲಭೂತ ಸೌಕರ್ಯಗಳ ಕಲ್ಪಿಸುವಂತೆ ಶಾಸಕ ಸ್ವರೂಪ್ ಪ್ರಕಾಶ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಾಸನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪುರದಮ್ಮ ದೇವಸ್ಥಾನದ ಹಣವನ್ನು ಇತರೆ ಕಾಮಗಾರಿಗಳಿಗೆ ಬಳಕೆ ಮಾಡಬಾರದು. ದೇವಸ್ಥಾನದ ಮೂಲಸೌಕರ್ಯ ಹಾಗೂ ದೇವಸ್ಥಾನದ ಅಭಿವೃದ್ದಿಗೆ ಮಾತ್ರ ಬಳಕೆ ಮಾಡಬೇಕು. ಸ್ಥಳೀಯರು ಸಮುಖದಲ್ಲಿ ದೇವಸ್ಥಾನದ ಹುಂಡಿ ಎಣಿಕೆ ಮಾಡಬೇಕು ಎಂದು ತಿಳಿಸಿದರು.
ನಗರದ ಸುಭಾಷ್ ಚೌಕದಲ್ಲಿರುವ ಮಲ್ಲೇಶ್ವರ ದೇವಸ್ಥಾನದ ಜೀರ್ಣೋದ್ದಾರ ಹಾಗೂ ದೇವಿಗೆರೆ ದೇವಸ್ಥಾನದಲ್ಲಿ ಟೆಂಡರ್ ಕರೆದು ಪಾರ್ಕಿಂಗ್ ಶುಲ್ಕ ನಿಗದಿ ಪಡಿಸಬೇಕು ಎಂದರು.
ಬಗರ್‌ಹುಕುಂನಲ್ಲಿ ಅರ್ಜಿ ಸಲ್ಲಿಸಿರುವವರಿಗೆ ಮಂಜೂರಾತಿಗೆ ಕ್ರಮ ವಹಿಸಬೇಕು. ದುರಸ್ತಿ ಸಂಬಂಧಿಸಿದಂತೆ ಕಂದಾಯ ಸಚಿವರು ನಿರ್ದೇಶನದಂತೆ ಕನಿಷ್ಠ 2 ದಾಖಲೆಗಳಿರುವ ಹಾಗೂ ದಾಖಲೆಗಳು ಇಲ್ಲದಿರುವ ಸಂದರ್ಭದಲ್ಲಿ ಮೀಸಿಂಗ್ ಸಮಿತಿಯ ಮುಂದೆ ಇಟ್ಟು ಪರಿಶೀಲಿಸಿ ತುರ್ತಾಗಿ ದುರಸ್ತಿ ಮಾಡುವಂತೆ ತಿಳಿಸಿದರು.
ಮಹಾನಗರ ಪಾಲಿಕೆಗೆ ಸೇರ್ಪಡೆಯಾಗಿರುವ ನೂತನ ಗ್ರಾಮಗಳಿಗೆ ಇ-ಸ್ವತ್ತು ನೀಡಲು, ವಾಣಿಜ್ಯ ಮಳಿಗೆಗಳಿಗೆ ಹರಾಜು ಪ್ರಕ್ರಿಯೆ ಸಂಬಂಧಿಸಿದಂತೆ ಹಾಗೂ ಇತರ ವಿಷಯಗಳ ಕುರಿತು ಶಾಸಕರು ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿ, ಪುರದಮ್ಮ ದೇವಸ್ಥಾನದ ಭಕ್ತರ ಅನುಕೂಲಕ್ಕಾಗಿ ಶೌಚಾಲಯ ನಿರ್ಮಿಸಬೇಕು. ಕಸದ ನಿರ್ವಹಣೆ , ಕುಡಿಯುವ ನೀರಿನ ವ್ಯವಸ್ಥೆ ಸಂಬಂಧಿಸಿದಂತೆ ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಸಭೆ ನಡೆಸುವಂತೆ ತಿಳಿಸಿದರು. ದೇವರ ಹೆಸರಿನಲ್ಲಿ ನೀಡುವ ಕಾಣಿಕೆಗಳನ್ನು ಪರಿಶೀಲಿಸಬೇಕು. ದೇವಿಗೆರೆ ದೇವಸ್ಥಾನದಲ್ಲಿ ಆವರಣದಲ್ಲಿ ಪಾರ್ಕಿಂಗ್ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಬೇಕು. ದೇವಸ್ಥಾನದ ಶಿಥಿಲಾವಸ್ಥೆ ಸರಿಪಡಿಸಿ, ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದರು.
ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ರುದ್ರಮುನಿ, ಮಹಾನಗರ ಪಾಲಿಕೆಯ ಆಯುಕ್ತ ಕೃಷ್ಣಮೂರ್ತಿ, ತಹಶೀಲ್ದಾರ್ ಗೀತಾ, ಮುಜರಾಯಿ ಇಲಾಖೆಯ ತಹಶೀಲ್ದಾರ್ ಲತಾ ಹಾಗೂ ಮತಿತ್ತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.