
ಚನ್ನರಾಯಪಟ್ಟಣ: ‘ಯಾವುದೇ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಬೇಕು’ ಎಂದು ಸಾಹಿತಿ ಚಟ್ಟನಹಳ್ಳಿ ಮಹೇಶ್ ಹೇಳಿದರು.
ತಾಲ್ಲೂಕು ಸರ್ಕಾರಿ ನೌಕರ ಸಂಘ, ರೆಡ್‌ಕ್ರಾಸ್ ತಾಲ್ಲೂಕು ಘಟಕ, ಸ್ವಯಂ ಪ್ರೇರಿತ ರಕ್ತದಾನ ಕೇಂದ್ರ, ಹಾಸನದ ಜನಪ್ರಿಯ ಆಸ್ಪತ್ರೆಯ ಸಹಯೋಗದಲ್ಲಿ ಪಟ್ಟಣದಲ್ಲಿ ಶನಿವಾರ ಸರ್ಕಾರಿ ನೌಕರರ ಭವನದಲ್ಲಿ ಏರ್ಪಡಿಸಿದ್ದ ಆರೋಗ್ಯ ಉಚಿತ ತಪಾಸಣಾ ಮತ್ತು ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
‘ಸರ್ಕಾರಿ ನೌಕರರು ಉತ್ತಮವಾಗಿ ಕೆಲಸ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಕಾಯಕವೇ ಕೈಲಾಸ ಎಂಬುದನ್ನು ಮರೆಯಬಾರದು’ ಎಂದರು.
ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ‘ಸರ್ಕಾರಿ ಕೆಲಸ ದೇವರ ಕೆಲಸ ಇದ್ದಂತೆ. ಕಚೇರಿ ಕೆಲಸಕ್ಕಾಗಿ ಆಗಮಿಸುವ ಸಾರ್ವಜನಿಕರ ಸಮಸ್ಯೆಯನ್ನು ಸೌಜನ್ಯದಿಂದ ಆಲಿಸಿ ಸ್ಪಂದಿಸಬೇಕು. ನೌಕರರು ಮಾಡುವ ಉತ್ತಮ ಕೆಲಸದಿಂದ ತಾಲ್ಲೂಕು ಪ್ರಗತಿಪಥದತ್ತ ಸಾಗುತ್ತದೆ. ನೌಕರರು ಆರೋಗ್ಯದ ಕಡೆ ಗಮನಹರಿಸಬೇಕು. ಆರೋಗ್ಯವೇ ಭಾಗ್ಯ ಎಂಬುದನ್ನು ನೌಕರರು ತಿಳಿದಿರಬೇಕು’ ಎಂದರು.
‘ಆರೋಗ್ಯ ಚೆನ್ನಾಗಿದ್ದರೆ ಗುಣಮಟ್ಟದ ಸೇವೆ ಒದಗಿಸಲು ಸಾಧ್ಯ. ಒತ್ತಡ ನಿವಾರಣೆಯಾಗಬೇಕಾದರೆ ನಿತ್ಯ ವಾಯುವಿಹಾರ, ಧ್ಯಾನ, ಯೋಗಾಸನ, ಪ್ರಾಣಾಯಾಮ ಮತ್ತು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಹೇಳಿದರು.
‘ರಾಜ್ಯದಲ್ಲಿ 6 ಲಕ್ಷ ಹುದ್ದೆಗಳು ಖಾಲಿ ಇವೆ, ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಜನರಿಗೆ ಉತ್ತಮ ಸೇವೆ ಒದಗಿಸಲು ಸಾಧ್ಯವಾಗುತ್ತದೆ ಎಂದ ಅವರು, ಪ್ರಧಾನಮಂತ್ರಿ ಆವಾಸ್ ಯೋಜನೆಯ ಅನುಷ್ಠಾನದಲ್ಲಿ ಜಿಲ್ಲೆಯಲ್ಲಿ ಚನ್ನರಾಯಪಟ್ಟಣ ತಾಲ್ಲೂಕು ಪ್ರಥಮ ಸ್ಥಾನದಲ್ಲಿದೆ. ತಾಲ್ಲೂಕಿಗೆ ಎರಡು ಕೆಪಿಎಸ್ ಶಾಲೆ ಮಂಜೂರಾಗಿದೆ’ ಎಂದು ತಿಳಿಸಿದರು.
ತಹಶೀಲ್ದಾರ್ ಜಿ.ಎಸ್. ಶಂಕರಪ್ಪ ಮಾತನಾಡಿ, ‘ಸರ್ಕಾರಿ ನೌಕರರು ಪೂರ್ವ ತಯಾರಿ ಮಾಡಿಕೊಂಡರೆ ಕೆಲಸದಲ್ಲಿ ಒತ್ತಡ ಇರುವುದಿಲ್ಲ. ಪೂರ್ವ ತಯಾರಿ ಮಾಡಿಕೊಳ್ಳದಿದ್ದರೆ ಒತ್ತಡ ಹೆಚ್ಚಾಗಿ ರಕ್ತದೊತ್ತಡ, ಮಧುಮೇಹ ಉಂಟಾಗುತ್ತದೆ. ಒತ್ತಡ ನಿವಾರಿಸಬೇಕಾದರೆ ಕ್ರೀಡೆಯಲ್ಲಿ ಭಾಗವಹಿಸಬೇಕು’ ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಕೃಷ್ಣೇಗೌಡ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್. ಹರೀಶ್, ಡಿವೈಎಸ್ಪಿ ಕುಮಾರ್.ಎನ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ದೀಪಾ, ತಾಲ್ಲೂಕು ಆರೋಗ್ಯಾಧಿಕಾರಿ ಪಿ.ತೇಜಸ್ವಿನಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೆ.ಎನ್. ಅನಿಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಎ.ಎಸ್. ಇಂದ್ರಾ, ಜಿಲ್ಲಾ ಸರ್ಕಾರಿ ನೌಕರ ಸಂಘದ ಕಾರ್ಯದರ್ಶಿ ಡಾ.ಲಕ್ಷ್ಮೀಕಾಂತ್, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಆರ್. ಮಂಜುನಾಥ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.