ADVERTISEMENT

ಗಂಡಸಿ ಎಪಿಎಂಸಿ ಗೋದಾಮಿನಿಂದ ಖಾಸಗಿ ಗೋದಾಮಿಗೆ ರಾಗಿ ಅಕ್ರಮ ಸಾಗಣೆ: ಲಾರಿ ವಶ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 16:43 IST
Last Updated 9 ಸೆಪ್ಟೆಂಬರ್ 2020, 16:43 IST
ಅರಸೀಕೆರೆ ತಾಲ್ಲೂಕಿನ ಗಂಡಸಿ ಎಪಿಎಂಸಿ ಮಾರುಕಟ್ಟೆ ಗೋದಾಮಿನಿಂದ ಖಾಸಗಿ ಗೋದಾಮಿಗೆ ಅಕ್ರಮವಾಗಿ ರಾಗಿ ಚೀಲಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ
ಅರಸೀಕೆರೆ ತಾಲ್ಲೂಕಿನ ಗಂಡಸಿ ಎಪಿಎಂಸಿ ಮಾರುಕಟ್ಟೆ ಗೋದಾಮಿನಿಂದ ಖಾಸಗಿ ಗೋದಾಮಿಗೆ ಅಕ್ರಮವಾಗಿ ರಾಗಿ ಚೀಲಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ   

ಅರಸೀಕೆರೆ: ತಾಲ್ಲೂಕಿನ ಗಂಡಸಿ ಎಪಿಎಂಸಿ ಮಾರುಕಟ್ಟೆ ಗೋದಾಮಿನಿಂದ ಸುಮಾರು 400 ಚೀಲ ರಾಗಿಯನ್ನು ಗ್ರಾಮದ ಖಾಸಗಿ ಗೋದಾಮಿಗೆ ಅಕ್ರಮವಾಗಿ ಸಾಗಿಸಲಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದರಿಂದ ರಾಗಿ ಚೀಲ ಮತ್ತು ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.

ಗಂಡಸಿ ಎಪಿಎಂಸಿ ಮಾರುಕಟ್ಟೆ ಗೋದಾಮಿನಿಂದ ಖಾಸಗಿ ಗೋದಾಮಿಗೆ ಸಾಗಿಸಿದ ರಾಗಿಯನ್ನು ದಾಸ್ತಾನು ಮಾಡುತ್ತಿದ್ದ ವೇಳೆ ಗ್ರಾಮದ ಕೆಲವರು ಈ ಬಗ್ಗೆ ಪ್ರಶ್ನಿಸಿದರು. ಈ ವೇಳೆ ರಾಗಿ ತುಂಬುತ್ತಿದ್ದವರು ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಈ ಬಗ್ಗೆ ಅನುಮಾನಗೊಂಡ ಗ್ರಾಮಸ್ಥರು ಅಧಿಕಾರಿಗಳೇ ಖಾಸಗಿಯವರಿಗೆ ಅಕ್ರಮವಾಗಿ ಮಾರಾಟ ಮಾಡಲು ಸಾಗಿಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು, ರೈತ ಮುಖಂಡರು, ಜೆಡಿಎಸ್ ಹಾಗೂ ಬಿಜೆಪಿಯ ಮುಖಂಡರು ಆಗ್ರಹಿಸಿದ್ದಾರೆ.

ಅರಸೀಕೆರೆ ಎಪಿಎಂಸಿ ಮಾಜಿ ಅಧ್ಯಕ್ಷ ಜಯರಾಮ್ ಮಾತನಾಡಿ, ಗಂಡಸಿ ಎಪಿಎಂಸಿ ಮಾರುಕಟ್ಟೆಯಲ್ಲಿ ಈ ಹಿಂದೆ ‘ನಾಫೆಡ್’ ಖರೀದಿ ಕೇಂದ್ರದ ಮೂಲಕ 3,86,000 ಕೆಜಿಯಷ್ಟು ರಾಗಿ ಖರೀದಿಸಲಾಗಿತ್ತು. ಈಗ ಅಕ್ರಮವಾಗಿ ಸಾಗಿಸುತ್ತಿದ್ದ ರಾಗಿ ಚೀಲಗಳಿಗೆ ಸಂಬಂಧಿಸಿದಂತೆ ಎಪಿಎಂಸಿ ಮಾರುಕಟ್ಟೆಯಲ್ಲಿ ಸೂಕ್ತ ದಾಖಲೆ ಪರಿಶೀಲಿಸಬೇಕು. ಎಪಿಎಂಸಿ ಗೋದಾಮಿನಲ್ಲಿ ಶೇಖರಣೆಯಾಗಿರುವ ರಾಗಿ ಚೀಲಗಳ ದಾಸ್ತಾನನ್ನೂ ಪರಿಶೀಲಿಸಬೇಕು. ವ್ಯತ್ಯಾಸ ಕಂಡು ಬಂದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.