ADVERTISEMENT

ರೈಲ್ವೆ ಖಾಸಗೀಕರಣ ಕೈ ಬಿಡಿ

ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಸಿಐಟಿಯು ಮನವಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 13:43 IST
Last Updated 17 ಜುಲೈ 2020, 13:43 IST
ರೈಲ್ವೆ ಖಾಸಗೀಕರಣ ಕೈ ಬಿಡುವಂತೆ ಆಗ್ರಹಿಸಿ ಸಿಐಟಿಯು ಕಾರ್ಯಕರ್ತರು ರೈಲು ನಿಲ್ದಾಣ ಎದುರು ಪ್ರತಿಭಟನೆ ನಡೆಸಿದರು.
ರೈಲ್ವೆ ಖಾಸಗೀಕರಣ ಕೈ ಬಿಡುವಂತೆ ಆಗ್ರಹಿಸಿ ಸಿಐಟಿಯು ಕಾರ್ಯಕರ್ತರು ರೈಲು ನಿಲ್ದಾಣ ಎದುರು ಪ್ರತಿಭಟನೆ ನಡೆಸಿದರು.   

ಹಾಸನ: ರೈಲ್ವೆ ಖಾಸಗೀಕರಣ ಕೈ ಬಿಡುವಂತೆ ಆಗ್ರಹಿಸಿ ‘ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌’ (ಸಿಐಟಿಯು) ಕಾರ್ಯಕರ್ತರು ಶುಕ್ರವಾರ ರೈಲು ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.

ಕೊರೊನಾ ಲಾಕ್‌ಡೌನ್‌ನಿಂದಾಗಿ ನಾಲ್ಕು ತಿಂಗಳಿಂದ ದೇಶದ ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಸಂಪತ್ತುಗಳನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುವ ಕೆಲಸಕ್ಕೆ ಕೈಹಾಕಿರುವುದು ಸರಿಯಲ್ಲ. ಜಗತ್ತಿನಲ್ಲೇ ಅತಿದೊಡ್ಡ ಸಂಪರ್ಕ ಜಾಲ ಹೊಂದಿರುವ ಭಾರತೀಯ ರೈಲ್ವೆಯನ್ನು ತುಂಡರಸಿ ಖಾಸಗೀಕರಣ ಮಾಡಲು ಕೇಂದ್ರ ತೀರ್ಮಾನಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರೈಲ್ವೆ ಖಾಸಗೀಕರಣಗೊಂಡರೆ ಪ್ರಯಾಣಿಕರಿಗೆ ಸಿಗುತ್ತಿದ್ದ ಶೇಕಡಾ 43 ರಷ್ಟು ಸಬ್ಸಿಡಿ ರದ್ದಾಗಲಿದೆ. ಹೊರಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಂಡು ಖಾಸಗಿಯವರು ಲಾಭ ಮಾಡಿಕೊಳ್ಳಲಿದ್ದಾರೆ. ಮಹಿಳೆಯರು, ದಲಿತರು, ಅಂಗವಿಕಲರು ಹಾಗೂ ಕ್ರೀಡಾಪಟುಗಳಿಗೆ ನೇಮಕಾತಿಗಳಲ್ಲಿ ಸಿಗುತ್ತಿದ್ದ ಮೀಸಲಾತಿಗಳು ರದ್ದಾಗಲಿವೆ. ಅಲ್ಲದೇ ಸರಕು ಸಾಮಾಗ್ರಿಗಳ ಸಾಗಾಣಿಕೆ ವೆಚ್ಚಗಳು ಏರಿಕೆಯಾಗಲಿವೆ. ಇದರಿಂದ ಕೃಷಿ ಮತ್ತು ಕೈಗಾರಿಕಾ ವಲಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

109 ರೈಲು ನಿಲ್ದಾಣಗಳನ್ನು ಖಾಸಗಿಯವರ ನಿರ್ವಹಣೆಗೆ ಒಪ್ಪಿಸಿ, 151 ಖಾಸಗಿ ರೈಲುಗಳನ್ನು ಓಡಿಸುವ ನಿರ್ಧಾರದಿಂದ ಕೇಂದ್ರ ಹಿಂದೆ ಸರಿಯಬೇಕು. ಭಾರತೀಯ ರೈಲ್ವೆ ಭಾರತೀಯರ ಜೀವನಾಡಿ. ಅದನ್ನು ಖಾಸಗಿಯವರ ಕೈಗೆ ಕೊಟ್ಟು ಜನಸಾಮಾನ್ಯ ರಹಿತ ಬಲಿಕೊಡುತ್ತಿರುವುದು ಸರಿಯಲ್ಲ. ಖಾಸಗಿ ರೈಲುಗಳ ಟಿಕೆಟ್‌ ದರ ದುಬಾರಿಯಾಗಿದ್ದು, ಸಾಮಾನ್ಯ ಜನರು ಪ್ರಯಾಣಿಸಲು ಆಗುವುದಿಲ್ಲ. ಅತಿ ಕಡಿಮೆ ದರದಲ್ಲಿ ದೂರದ ಊರುಗಳಿಗೆ ಪ್ರಯಾಣ ಮಾಡಲು, ಸರಕು ಸಾಗಣೆಗೆ ರೈಲುಗಳು ಬಹಳ ಸಹಕಾರಿಯಾಗಿವೆ. ಖಾಸಗೀಕರಣಗೊಂಡರೆ ಎಲ್ಲವೂ ದುಬಾರಿಯಾಗುತ್ತದೆ ಎಂದು ಹೇಳಿದರು.

‘ದೇಶದ ಸಂಪತ್ತು ಮಾರಾಟ ಮಾಡಲು ಸರ್ಕಾರ ಲಾಕ್‌ಡೌನ್‌ ಬಳಸಿಕೊಳ್ಳುತ್ತಿದೆ. ಜನರು ಒಟ್ಟಿಗೆ ಸೇರುವಂತಿಲ್ಲ, ಪ್ರತಿಭಟನೆ ಮಾಡುವಂತಿಲ್ಲ, ಅಧಿವೇಶನ ನಡೆಸುತ್ತಿಲ್ಲ, ವಿರೋಧ ಪಕ್ಷಗಳ ಚಟುವಟಿಕೆಗೆ ಅವಕಾಶವಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲ ವಿರೋಧ ಹತ್ತಿಕ್ಕಿ ಲಾಭದಾಯಕ ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡಲು ಕೇಂದ್ರ ಮುಂದಾಗಿದೆ. ಇದು ಲಕ್ಷಾಂತರ ಮಂದಿ ಉದ್ಯೋಗದ ಪ್ರಶ್ನೆಯಾಗಿದೆ. ದೇಶದ್ರೋಹಿ ಕೆಲಸ ಕೈ ಬಿಡದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಜಿಲ್ಲಾಧ್ಯಕ್ಷ ಧರ್ಮೇಶ್ ಎಚ್ಚರಿಸಿದರು.

ಬಳಿಕ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಬರೆದ ಮನವಿ ಪತ್ರವನ್ನು ಇಲ್ಲಿನ ರೈಲು ನಿಲ್ದಾಣದ ಅಧಿಕಾರಿಗೆ ಅವರಿಗೆ ಸಲ್ಲಿಸಿದರು.ಪ್ರಧಾನ ಕಾರ್ಯದರ್ಶಿಎಂ.ಬಿ. ಪುಷ್ಪ, ಖಜಾಂಚಿ ಜಿ.ಪಿ. ಸತ್ಯನಾರಾಯಣ, ಕಾರ್ಯದರ್ಶಿ ಅರವಿಂದ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.