ADVERTISEMENT

ರಾಮನಾಥಪುರ, ಕೊಣನೂರು ಹೋಬಳಿಯಲ್ಲಿ 32 ಮನೆ ಕುಸಿತ

ಮನೆಗಳಿಗೆ ನುಗ್ಗಿದ ಮಳೆಯ ನೀರು: ದವಸ– ಧಾನ್ಯ, ಬಟ್ಟೆಗಳು ನಾಶ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 12:40 IST
Last Updated 18 ಅಕ್ಟೋಬರ್ 2021, 12:40 IST
ಭಾರಿ ಮಳೆಯಿಂದಾಗಿ ಕೊಣನೂರು ಹೋಬಳಿಯ ಸಿದ್ದಾಪುರದಲ್ಲಿ ಧರ್ಮೇಗೌಡ ಅವರ ಮನೆ ಕುಸಿದಿದೆ
ಭಾರಿ ಮಳೆಯಿಂದಾಗಿ ಕೊಣನೂರು ಹೋಬಳಿಯ ಸಿದ್ದಾಪುರದಲ್ಲಿ ಧರ್ಮೇಗೌಡ ಅವರ ಮನೆ ಕುಸಿದಿದೆ   

ಕೊಣನೂರು: ಹದಿನೈದು ದಿನದಿಂದ ನಿತ್ಯ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ರಾಮನಾಥಪುರ ಹೋಬಳಿಯಲ್ಲಿ 30 ಮತ್ತು ಕೊಣನೂರು ಹೋಬಳಿಯಲ್ಲಿ 2 ಮನೆಗಳ ಗೋಡೆಗಳು ಕುಸಿದಿವೆ.

ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಮುಚ್ಚಿದ್ದ ರಸ್ತೆ ಗುಂಡಿಗಳು ಮಳೆ ನೀರಿನ ಸೆಳೆತಕ್ಕೆ ಮತ್ತೆ ಬಾಯ್ದೆರೆದಿವೆ. ಅತಿಯಾದ ತೇವಾಂಶದಿಂದ ಮನೆಗಳು ಕುಸಿಯಲಾರಂಭಿಸಿದ್ದು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.

ಭಾನುವಾರ ರಾತ್ರಿ ಕೊಣನೂರು ಹೋಬಳಿಯ ಸಿದ್ದಾಪುರದ ಧರ್ಮೇಗೌಡ ಮತ್ತು ರಮೇಶ್ ಅವರ ಮನೆಗಳ ಗೋಡೆಗಳು ಕುಸಿದಿವೆ.

ADVERTISEMENT

ರಾಮನಾಥಪುರ ಹೋಬಳಿಯ ವ್ಯಾಪ್ತಿಯಲ್ಲಿ ಹೆಚ್ಚಿದ ಮಳೆಯಿಂದಾಗಿ ಬಿಳಗುಲಿ ಗ್ರಾಮದ ಪುಟ್ಟರಾಜು ಎಂಬುವರಿಗೆ ಸೇರಿದ ಬ್ಯಾರಲ್ ಮನೆ ಕುಸಿದು ಅಡಿಯಲ್ಲಿ ಸಿಲುಕಿದ ಕರುವೊಂದು ಮೃತಪಟ್ಟಿದೆ.

ಕೇರಳಾಪುರದಲ್ಲಿ 2 ಮನೆ, ಜಿಟ್ಟೇನಹಳ್ಳಿಯಲ್ಲಿ 2 , ಬೋರೆಕೊಪ್ಪಲಿನಲ್ಲಿ 1, ಬಸವಾಪಟ್ಟಣದಲ್ಲಿ 2, ಬೆಟ್ಟಸೋಗೆಯಲ್ಲಿ 1, ರಾಮನಕೊಪ್ಪಲಿನಲ್ಲಿ 2, ರುದ್ರಪಟ್ಟಣದಲ್ಲಿ 5, ಆನಂದೂರಿನಲ್ಲಿ 2, ಕಂಠಾಪುರದಲ್ಲಿ 1, ಮಧುರನಹಳ್ಳಿಯಲ್ಲಿ 2 ಮನೆಗಳು, ಹನ್ಯಾಳು ಮತ್ತಿತರೆಡೆ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಮನೆಗಳು ಬಿದ್ದಿವೆ ಎಂದು ಕಂದಾಯ ನಿರೀಕ್ಷಕ ಸಿ.ಸ್ವಾಮಿ ತಿಳಿಸಿದ್ದಾರೆ.

ಭಾರಿ ಮಳೆಯಿಂದಾಗಿ ನೀರು ಬಸವಾಪಟ್ಟಣದಲ್ಲಿ 5, ಬ್ಯಾಡರಕೊಪ್ಪಲಿನಲ್ಲಿ 6, ಬೆಟ್ಟಸೋಗೆ ಗ್ರಾಮದಲ್ಲಿ 2 ಮನೆಗಳಿಗೆ ನುಗ್ಗಿದ್ದರಿಂದ ಆಹಾರ ಧಾನ್ಯಗಳು, ಬಟ್ಟೆ ಮತ್ತು 1 ರಾಗಿ ಹಿಟ್ಟಿನ ಗಿರಣಿಯ ಯಂತ್ರವು ಹಾಳಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ನಿರೀಕ್ಷಕ ಸಿ.ಸ್ವಾಮಿ, ‘ಮನೆ ಕಳೆದುಕೊಂಡವರಿಗೆ ತಾತ್ಕಾಲಿವಾಗಿ ಅಕ್ಕಪಕ್ಕದ ಮನೆಯಲ್ಲಿ ಆಶ್ರಯ ಪಡೆಯಲು ತಿಳಿಸಿ, ಹಾನಿ ಕುರಿತು ಈಗಾಗಲೇ ತಹಶೀಲ್ದಾರರಿಗೆ ತಿಳಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.