ಹಾಸನ: ಮಾಜಿ ಸಚಿವ, ವಾಲ್ಮೀಕಿ ಸಮುದಾಯದ ನಾಯಕ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿರುವುದನ್ನು ಖಂಡಿಸಿ, ಜಿಲ್ಲಾ ವಾಲ್ಮೀಕಿ ಸಮುದಾಯ ಹಾಗೂ ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ಹಾಗೂ ತಮಟೆ ಚಳವಳಿ ನಡೆಯಿತು.
ನಗರದ ಹೇಮಾವತಿ ಪ್ರತಿಮೆ ಎದುರು ಸಂಘಟಿತರಾದ ವಾಲ್ಮೀಕಿ ಸಮುದಾಯ ಹಾಗೂ ದಲಿತ ಪರ ಸಂಘಟನೆಯ ಮುಖಂಡರು ಹಾಗೂ ಸದಸ್ಯರು, ರಾಜಣ್ಣ ಅವರ ವಜಾ ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ರಾಜಣ್ಣ ಅವರ ಭಾವಚಿತ್ರ ಹಾಗೂ ಸಂಘಟನೆಯ ಬಾವುಟ ಹಿಡಿದು, ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮರವಣಿಗೆ ನಡೆಸಿದರು.
ಈ ವೇಳೆ ವಾಲ್ಮೀಕಿ ಸಮುದಾಯದ ಮುಖಂಡರು ಮಾತನಾಡಿ, ‘ರಾಜಕೀಯ ಹಾಗೂ ಸಹಕಾರ ಕ್ಷೇತ್ರದಲ್ಲಿ ದಲಿತ, ಹಿಂದುಳಿದ, ಬಡವರ ಹಾಗೂ ರೈತಾಪಿ ವರ್ಗಗಳಿಗೆ ರಾಜಣ್ಣ ಅವರ ಕೊಡುಗೆ ಹೆಚ್ಚಿದೆ. ಅಂಬೇಡ್ಕರ್ ಅವರ ಸಂವಿಧಾನ ತತ್ವಗಳಿಗೆ ಅನುಗುಣವಾಗಿ ರಾಜಕೀಯ ಮಾಡಿಕೊಂಡು ಬಂದಿರುವ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿರುವುದು ವಾಲ್ಮೀಕಿ ಹಾಗೂ ದಲಿತ ಸಮುದಾಯಕ್ಕೆ ಮಾಡಿರುವ ಅನ್ಯಾಯ’ ಎಂದು ದೂರಿದರು.
‘ರಾಜಣ್ಣ ಅವರು ಕ್ಷಮಿಸಲಾರದ ತಪ್ಪೇನೂ ಮಾಡಿಲ್ಲ. ಅವರಿಗೆ ನೋಟಿಸ್ ನೀಡಿ ಎಚ್ಚರಿಕೆ ನೀಡಬಹುದಾಗಿತ್ತು. ಆದರೆ ಸಚಿವ ಸ್ಥಾನದಿಂದ ಕೈಬಿಟ್ಟಿರುವುದು ಸರಿಯಲ್ಲ. ರಾಜ್ಯ ಸರ್ಕಾರ ಕೂಡಲೇ ರಾಜಣ್ಣ ಅವರನ್ನು ಮರಳಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.
ದಲಿತ ಮುಖಂಡ ಎಚ್.ಕೆ. ಸಂದೇಶ್ ಮಾತನಾಡಿ, ರಾಜಣ್ಣ ಅವರು ಮಾತಿನ ಭರದಲ್ಲಿ ಆ ರೀತಿ ಹೇಳಿಕೆ ನೀಡಿದ್ದಾರೆ. ಮಧುಗಿರಿಯಂತಹ ಮೀಸಲು ಕ್ಷೇತ್ರದಲ್ಲಿ ಎರಡು ಬಾರಿ ಗೆಲುವು ಸಾಧಿಸಿ ಮಂತ್ರಿಯಾಗಿದ್ದರು. ಕೂಡಲೇ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ವಾಲ್ಮೀಕಿ ಸಮುದಾಯದ ಮುಖಂಡರಾದ ಸೋಮಶೇಖರ್, ಹನುಮಪ್ಪ, ಮಧು ನಾಯಕ, ಶಿವಪ್ಪ ನಾಯಕ, ಕುಮಾರ್, ವಿಜಯಕುಮಾರ್, ಕೃಷ್ಣಕುಮಾರ್, ಸರಸ್ವತಿ, ಜಾನಕಿ, ಸೇರಿದಂತೆ ನೂರಾರು ಮಂದಿ ವಾಲ್ಮೀಕಿ ಹಾಗೂ ದಲಿತ ಸಮುದಾಯದ ಸದಸ್ಯರು ಭಾಗವಹಿಸಿದ್ದರು.
ರಾಜಣ್ಣ ವಜಾ ಮಾಡಿರುವುದು ಸರಿಯಲ್ಲ. ಕೂಡಲೇ ಕಾಂಗ್ರೆಸ್ ನಾಯಕರು ಮನಸ್ಸು ಸರಿ ಮಾಡಿಕೊಳ್ಳಬೇಕು. ರಾಜ್ಯದ ಸಣ್ಣ ಸಣ್ಣ ಜಾತಿಗಳ ಬೆಂಬಲ ಕಳೆದುಕೊಳ್ಳಬಾರದು.ಕೃಷ್ಣದಾಸ್ ದಲಿತ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.