ADVERTISEMENT

ಲಕ್ಷಾಂತರ ಮಕ್ಕಳಿಗೆ ದಾರಿದೀಪವಾದ ರಾಜೇಂದ್ರ ಶ್ರೀ: ಕಲ್ಯಾಣ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 6:08 IST
Last Updated 23 ಸೆಪ್ಟೆಂಬರ್ 2025, 6:08 IST
ಹೊಳೆನರಸೀಪುರ ತಾಲ್ಲೂಕಿನ ತೇಜೂರು ಸಿದ್ಧರಾಮೇಶ್ವರ ಮಠದಲ್ಲಿ ಭಾನುವಾರ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ 110ನೇ ಜಯಂತ್ಯುತ್ಸವ ನೆರವೇರಿತು 
ಹೊಳೆನರಸೀಪುರ ತಾಲ್ಲೂಕಿನ ತೇಜೂರು ಸಿದ್ಧರಾಮೇಶ್ವರ ಮಠದಲ್ಲಿ ಭಾನುವಾರ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ 110ನೇ ಜಯಂತ್ಯುತ್ಸವ ನೆರವೇರಿತು    

ಹೊಳೆನರಸೀಪುರ: ಸುತ್ತೂರು ಮಠದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಹಾಗೂ ಅನ್ನದಾಸೋಹ ನಡೆಸಿ ಲಕ್ಷಾಂತರ ವಿದ್ಯಾರ್ಥಿಗಳ ಜೀವನಕ್ಕೆ ದಾರಿ ದೀಪವಾದರು’ ಎಂದು ತೇಜೂರು ಸಿದ್ದರಾಮೇಶ್ವರ ಮಠದ ಕಲ್ಯಾಣ ಸ್ವಾಮೀಜಿ ಬಣ್ಣಿಸಿದರು.

ಭಾನುವಾರ ಮಠದಲ್ಲಿ ಆಯೋಜಿಸಿದ್ದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ 110ನೇ ಜಯಂತ್ಯುತ್ಸವ, ಮಹಾಲಯ ಅಮವಾಸ್ಯೆಯ ವಿಶೇಷ ಪೂಜೆ ಹಾಗೂ ಚಿಂತನಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಶಿಕ್ಷಣ ಹಾಗೂ ಜ್ಞಾನದಿಂದ ಸಮಾಜದ ಎಲ್ಲರ ಉದ್ಧಾರ ಸಾಧ್ಯ ಎಂದು ನಂಬಿದ್ದ ಸ್ವಾಮೀಜಿ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಹಸಿವು ಇರುವಾಗ ಕಲಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತಿದ್ದ ಶ್ರೀಗಳು ಅನ್ನ ದಾಸೋಹದ ಜೊತೆಗೆ ಶಿಕ್ಷಣವನ್ನು ನೀಡಿದರು. ಶ್ರೀಗಳು ಸಮಾಜಕ್ಕೆ ನೀಡಿದ ಸೇವೆ ಅವಿಸ್ಮರಣೀಯ’ ಎಂದು ಹೇಳಿದರು.

ADVERTISEMENT

‘ಶ್ರೀಗಳು 12ನೇ ವಯಸ್ಸಿನಲ್ಲೇ ಸುತ್ತೂರು ವೀರ ಸಿಂಹಾಸನ ಮಠದ 23ನೇ ಪೀಠಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿ ನಂತರ ತಮ್ಮ ಗುರುಗಳಾದ ಮಂತ್ರ ಮಹರ್ಷಿ ಪಟ್ಟದ ಶಿವರಾತ್ರಿ ಸ್ವಾಮೀಜಿಯವರ ನಿರ್ದೇಶನದಂತೆ ಕ್ಯಾತನಹಳ್ಳಿ ಪೂಜ್ಯರ ಒಡನಾಡಿಯಾಗಿ ವಿದ್ಯಾಭ್ಯಾಸ ಮಾಡಿದ್ದರು. 1941ರಲ್ಲಿ ಮಠದ ಸಂಪೂರ್ಣ ಹೊಣೆಹೊತ್ತ ಶ್ರೀಗಳು ಮೊಟ್ಟ ಮೊದಲು ಅನಾಥ ಮಕ್ಕಳ ಶಾಲೆ ತೆರೆದರು. ನಂತರ 1950ರಲ್ಲಿ ಕಾಲೇಜನ್ನು ತೆರೆದು ಗ್ರಾಮೀಣ ಪ್ರದೇಶದ ವಂಚಿತ ಸಮುದಾಯಕ್ಕೆ ಶಿಕ್ಷಣ ನೀಡಿದರು. 1954ರಲ್ಲಿ ಜೆಎಸ್‍ಎಸ್ ವಿದ್ಯಾಪೀಠ ಸ್ಥಾಪಿಸಿದರು’ ಎಂದು ಸ್ಮರಿಸಿದರು.

‘ರಾಜೇಂದ್ರ ಶ್ರೀಗಳು ಏಕಕಾಲದಲ್ಲಿ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಹಾಗೂ ಶೈಕ್ಷಣಕ ಸೇವೆಗಳನ್ನು ನಿರಂತರವಾಗಿ ಮಾಡಿದರು. ಸ್ವಾರ್ಥ, ಅಸೂಯೆಗಳಿಲ್ಲದ ಅವರ ಸೇವಾಪರ ಚಿಂತನೆಯ ಪ್ರತೀಕವೇ ಜಗತ್ತಿನಾದ್ಯಂತ ಇಂದು ಬೃಹದಾಕಾರವಾಗಿ ಬೆಳೆದಿರುವ ಜೆಎಸ್‍ಎಸ್ ಸಂಸ್ಥೆ. ಸಂಸ್ಥೆ ಪ್ರಾರಂಭಿಸಿದ ದಿನಗಳಲ್ಲಿ ಹಾಸ್ಟೆಲ್ ಮಕ್ಕಳ ದಾಸೋಹಕ್ಕೆ ಹಣವಿಲ್ಲದೇ ತಮ್ಮ ಬಂಗಾರದ ಕರಡಿಗೆಯನ್ನು (ಇಷ್ಟಲಿಂಗ ಇಡುವ ಬೆಳ್ಳಿ ಪೆಟ್ಟಿಗೆ) ಮಾರಾಟ ಮಾಡಿ, ಆ ಹಣದಲ್ಲಿ ದಾಸೋಹ ನಡೆಸಿದರು’ ಎಂದು ಹೇಳಿದರು.

‘ಅಂದಿನ ಮೈಸೂರಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ರಾಜೇಂದ್ರ ಸ್ವಾಮೀಜಿ ಅವರು ಸಮಾಜಕ್ಕೆ ನೀಡಿದ ಸೇವೆಯನ್ನು ಗುರುತಿಸಿ ಸ್ವಾಮೀಜಿಗಳಿಗೆ 1970ರಲ್ಲಿ 'ರಾಜಗುರು ತಿಲಕ' ಬಿರುದನ್ನು ನೀಡಿ ಗೌರವಿಸಿದರು’ ಎಂದು ಹೇಳಿದರು.

ಚಿಂತನಗೋಷ್ಠಿ, ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ, ಸಿದ್ದರಾಮೇಶ್ವರ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ ನಂತರ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ನೀಡಿದರು. ಕಾರ್ಯಕ್ರಮದಲ್ಲಿ ಮಠದ ನೂರಾರು ಭಕ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.