ಹೊಳೆನರಸೀಪುರ: ಜಗತ್ತಿನ್ನಲ್ಲಿ ಮಠಗಳು ಇಲ್ಲದಿದ್ದರೆ ಲಕ್ಷಾಂತರ ವಿದ್ಯಾರ್ಥಿಗಳು ಅವಿದ್ಯಾವಂತರಾಗಿ ಉಳಿಯುತ್ತಿದ್ದರು. ಅಷ್ಟೇ ಜನರು ಹಸಿವಿನಿಂದ ಕಂಗಾಲಾಗುತ್ತಿದ್ದರು ಎಂದು ನಿವೃತ್ತ ಕನ್ನಡ ಉಪನ್ಯಾಸಕ ಎಂ. ಮಹೇಶ ಹೇಳಿದರು.
ತಾಲ್ಲೂಕಿನ ದೊಡ್ಡಕಾಡನೂರು ಜೆಎಸ್‍ಎಸ್ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ 110ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
‘ರಾಜೇಂದ್ರ ಸ್ವಾಮೀಜಿ ಅವರು ಜಗವೆಲ್ಲ ನಗುತ್ತಿರಲಿ, ಜಗದಳುವು ನನಗಿರಲಿ ಎಂಬ ರೀತಿಯಲ್ಲಿ ಹಸಿವಿನಿಂದ ಬಳಲಿ ಬಂದ ಅಪಾರ ಬಡ ವಿದ್ಯಾರ್ಥಿಗಳಿಗೆ ಅನ್ನದಾನ ಮಾಡಿದರು. ಸ್ವಾಮೀಜಿ ಅವರು ಚಿನ್ನ ಲೇಪನ ಮಾಡಿದ್ದ ರುದ್ರಾಕ್ಷಿ, ಉಂಗುರ ಮಾರಾಟ ಮಾಡಿ ಜೆಎಸ್‍ಎಸ್ ವಿದ್ಯಾರ್ಥಿನಿಲಯ ಆರಂಭಿಸಿದ್ದು, ಜೆಎಸ್‍ಎಸ್ ಸಂಸ್ಥೆ ರಾಷ್ಟ್ರ, ಅಂತರರಾಷ್ಟ್ರ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿದ್ದು, ಅವರ ಸೇವೆ ಅಜರಾಮರವಾಗಿದೆ’ ಎಂದು ಹೇಳಿದರು.
‘ಮೊದಲ ವರ್ಷ 12 ವಿದ್ಯಾರ್ಥಿಗಳು ವಿದ್ಯಾರ್ಥಿನಿಲಯಕ್ಕೆ ಪ್ರವೇಶ ಪಡೆಯುತ್ತಾರೆ. ಆನಂತರ ಶಾಲಾ, ಪದವಿಪೂರ್ವ, ಪದವಿ ಕಾಲೇಜುಗಳು, ತಾಂತ್ರಿಕ, ವೈದ್ಯಕೀಯ ಶಿಕ್ಷಣ ಸಂಸ್ಥೆಗಳು, ಮಹಿಳೆಯರ, ಅಂಗವಿಕಲರ, ಪಾಲಿಟೆಕ್ನಿಕ್‌ಗಳನ್ನು ತೆರೆದು ಅಂದಿನಿಂದ ಇಂದಿನವರೆಗೂ ಲಕ್ಷಾಂತರ ವಿದ್ಯಾರ್ಥಿಗಳ ಜೀವನವನ್ನು ಬೆಳಕಾಗಿಸಿದ್ದಾರೆ’ ಎಂದರು.
ಟಿ. ಮಾಯಗೌಡನಹಳ್ಳಿ ರಾಜಪುರ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ರಾಜೇಂದ್ರ ಸ್ವಾಮೀಜಿಗಳ ಸಾಧನೆ, ಪರಿಶ್ರಮವನ್ನು ಸ್ಮರಿಸಿದರು.
ನಿವೃತ್ತ ಪ್ರಾಂಶುಪಾಲ ಎಸ್.ಎನ್ ಹೇರಂಬರಾವ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಚೌಡಯ್ಯ ಕಟ್ನವಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ಮಾತನಾಡಿದರು.
ಎಂ ಸೋಮಣ್ಣ ನಿರೂಪಿಸಿದರು. ಎಂ. ಲೋಕೇಶ್ ಸ್ವಾಗತಿಸಿದರು, ಪಿ. ಸುರೇಶ್ ವಂದಿಸಿದರು. ಗ್ರಾಮದ ಮುಖಂಡರಾದ ಚನ್ನಬಸಪ್ಪ, ಈಶ್ವರ್, ಮಹಾದೇವಪ್ಪ, ತೇಜುಸ್ವಾಮಿ, ಏಕಾಂತಪ್ಪ, ರವಿ, ಕುಮಾರ್, ರೇವಣ್ಣ ನಾಯಕ್, ಉಪನ್ಯಾಸಕರಾದ ಮಹೇಶ, ಸೋಮಣ್ಣ ರೇಣುಕಾ ಎಸ್ ತಿಗರೇರ, ಬಸವರಾಜು, ಸೋಮಶೇಖರಪ್ಪ ಭಾಗವಹಿಸಿದ್ದರು.
Highlights - ರಾಜೇಂದ್ರ ಸ್ವಾಮೀಜಿಗಳ ಭಾವಚಿತ್ರ ಮೆರವಣಿಗೆ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಹೆಚ್ಚು ಅಂಕ ಪಡೆದ ಅಂಕಿತಾ, ಶಿವಮ್ಮ ಅವರಿಗೆ ಸನ್ಮಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.