ADVERTISEMENT

ಇಂದು ಹಾಸನದಲ್ಲಿ ಸಮಾವೇಶ: ಸ್ವಾಭಿಮಾನಿಯೋ, ಜನಕಲ್ಯಾಣವೋ

ಕಾರ್ಯಕರ್ತರಲ್ಲಿ ಮುಂದುವರಿದ ಗೊಂದಲ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2024, 23:30 IST
Last Updated 4 ಡಿಸೆಂಬರ್ 2024, 23:30 IST
ಸಮಾವೇಶ ನಡೆಯುವ ಸ್ಥಳದಲ್ಲಿ ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿಯವರ ಕಟೌಟ್‌ಗಳನ್ನು ನಿಲ್ಲಿಸಲಾಗಿದೆ.
ಸಮಾವೇಶ ನಡೆಯುವ ಸ್ಥಳದಲ್ಲಿ ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿಯವರ ಕಟೌಟ್‌ಗಳನ್ನು ನಿಲ್ಲಿಸಲಾಗಿದೆ.   

ಹಾಸನ: ‘ಸ್ವಾಭಿಮಾನಿ ಸಮಾವೇಶವೋ’ ಅಥವಾ ‘ಜನಕಲ್ಯಾಣ ಸಮಾವೇಶವೋ’ ಎಂಬ ಗೊಂದಲದ ನಡುವೆಯೇ ಇಲ್ಲಿನ ಎಸ್‌.ಎಂ. ಕೃಷ್ಣ ಬಡಾವಣೆಯ ಮೈದಾನವು ಬೃಹತ್‌ ಸಭೆಗೆ ಸಜ್ಜಾಗಿದೆ.

ಕೆಪಿಸಿಸಿ ಹಾಗೂ ಸ್ವಾಭಿಮಾನಿ ಸಂಘಟನೆಗಳ ಆಶ್ರಯದಲ್ಲಿ ಜೆಡಿಎಸ್‌ ‘ನೆಲ’ದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆದಿಯಾಗಿ ಸಚಿವ ಸಂಪುಟವೇ ಪಾಲ್ಗೊಳ್ಳಲಿದ್ದು, ಕಾಂಗ್ರೆಸ್‌ ಶಕ್ತಿ ಪ್ರದರ್ಶನ ನಡೆಯಲಿದೆ. ಹಾಸನವಷ್ಟೇ ಅಲ್ಲದೆ ಹಳೇ ಮೈಸೂರು ಭಾಗದ ವಿವಿಧ ಜಿಲ್ಲೆಗಳ ಸಾವಿರಾರು ಕಾರ್ಯಕರ್ತರು ಮತ್ತು ಸಿದ್ದರಾಮಯ್ಯ ಅಭಿಮಾನಿಗಳು ಭಾಗಿಯಾಗಲಿದ್ದಾರೆ.

ಮುಡಾ ನಿವೇಶನಗಳ ಹಂಚಿಕೆ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರಕ್ಕೆ ತಿರುಗೇಟು ನೀಡಲು ಸಿದ್ದರಾಮಯ್ಯ ಬೆಂಬಲಿತ ಸಚಿವರು, ‘ಶೋಷಿತ ಸಮುದಾಯಗಳ ಒಕ್ಕೂಟಗಳ ವತಿಯಿಂದ ಸ್ವಾಭಿಮಾನಿ ಸಮಾವೇಶ ಆಯೋಜಿಸಲಾಗುವುದು’ ಎಂದು ಹೇಳಿದ್ದರು. ಆದರೆ, ನಂತರ ‘ಪಕ್ಷ ಹಾಗೂ ಸರ್ಕಾರವನ್ನು ಹೊರತುಪಡಿಸಿ ಸಮಾವೇಶ ನಡೆಸಿದರೆ, ತಪ್ಪು ಸಂದೇಶ ಹೋಗಲಿದೆ‘ ಎಂದು ಪ್ರತಿಪಾದಿಸಿ ಅನಾಮಧೇಯ ಪತ್ರವೊಂದು ಎಐಸಿಸಿಗೆ ರವಾನೆಯಾಗಿತ್ತು.

ADVERTISEMENT

ಅದನ್ನು ಗಂಭೀರವಾಗಿ ಪರಿಗಣಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಚರ್ಚಿಸಿ, ಪಕ್ಷದ ನೇತೃತ್ವದಲ್ಲಿಯೇ ಸಮಾವೇಶ ಆಯೋಜಿಸಲು ಸೂಚಿಸಿದ್ದರು.

ಅದರಂತೆ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್‌ ಅವರ ಉಸ್ತುವಾರಿಯಲ್ಲೇ ಸಮಾವೇಶ ನಡೆಯುತ್ತಿದೆ. ‘ಇದು ಸ್ವಾಭಿಮಾನಿ ಅಲ್ಲ, ಜನಕಲ್ಯಾಣ ಸಮಾವೇಶ’ ಎಂದು ಅವರು ಕೆಲವು ದಿನಗಳ ಹಿಂದೆ ಹಾಸನದಲ್ಲಿಯೇ ಘೋಷಿಸಿದ್ದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಿಂದ ಜನಕಲ್ಯಾಣಕ್ಕಾಗಿ ಆರಂಭಿಸಿರುವ ಯೋಜನೆಗಳ ಕುರಿತು ಜನರಿಗೆ ಮನವರಿಕೆ ಮಾಡಲು ಹಾಗೂ ಜನರಿಂದ ಸಲಹೆಗಳನ್ನು ಸ್ವೀಕರಿಸಲು ಆಯೋಜಿಸಲಾಗುತ್ತಿದೆ’ ಎಂದಿದ್ದರು.

ಎಷ್ಟು ಮಂದಿ ಭಾಗಿ?;

ಆರಂಭದಲ್ಲಿ ‘ಹಳೆ ಮೈಸೂರು ಭಾಗದ ಎಲ್ಲ ಜಿಲ್ಲೆಗಳಿಂದ ಸುಮಾರು 2 ಲಕ್ಷ ಜನರನ್ನು ಸೇರಿಸುವುದಾಗಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹೇಳಿದ್ದರು. ಆದರೆ, ನಗರಕ್ಕೆ ಭೇಟಿ ನೀಡಿದ್ದ ಡಿ.ಕೆ. ಶಿವಕುಮಾರ್, ‘ಸಮಾವೇಶ ಹಾಸನಕ್ಕಷ್ಟೇ ಸೀಮಿತವಾಗಿದ್ದು, ಅಕ್ಕಪಕ್ಕದ ಜಿಲ್ಲೆಗಳಿಂದ ಜನ ಬರಬಹುದು’ ಎಂದಿದ್ದರು.

ಇದೀಗ ‘ನೆರೆಯ ತುಮಕೂರು, ಮೈಸೂರು, ಮಂಡ್ಯ ಸೇರಿದಂತೆ ಇತರ ಜಿಲ್ಲೆಗಳಿಂದಲೂ ಜನ ಬರುವ ನಿರೀಕ್ಷೆ ಇದೆ. ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದ ಮಾದರಿಯಲ್ಲಿಯೇ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ’ ಎಂಬುದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಅವರ ನುಡಿ.

ಈ ನಡುವೆಯೇ, ‘ಇದು ಹಳೆಯ ಮೈಸೂರು ಭಾಗದ ಸಮಾವೇಶವೋ, ಹಾಸನ ಜಿಲ್ಲೆಯ ಸಮಾವೇಶವೋ, ಸ್ವಾಭಿಮಾನಿ ಸಮಾವೇಶವೋ, ಜನಕಲ್ಯಾಣ ಸಮಾವೇಶವೋ’ ಎಂದು ಪಕ್ಷದ ಕಾರ್ಯಕರ್ತರ ನಡುವೆ ಚರ್ಚೆ ನಡೆದಿದೆ.

ಸಮಾವೇಶದ ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳಲ್ಲಿ ಯಾರ ಹೆಸರು ಹಾಕಬೇಕು? ಹಾಕಬಾರದು? ಎಂಬ ಬಗ್ಗೆಯೂ ಸ್ಥಳೀಯ ಮುಖಂಡರಲ್ಲಿ ಗೊಂದಲವೂ ಏರ್ಪಟ್ಟಿದೆ.

70 ಸಾವಿರ ಆಸನಗಳ ವ್ಯವಸ್ಥೆ; ಮೂರು ವೇದಿಕೆ ನಿರ್ಮಾಣ ಭದ್ರತೆಗೆ ಸುಮಾರು 2 ಸಾವಿರ ಪೊಲೀಸರ ನಿಯೋಜನೆ ಸಮಾವೇಶದಲ್ಲಿ ಸಿಎಂ, ಡಿಸಿಎಂ, 19ಕ್ಕೂ ಅಧಿಕ ಸಚಿವರು ಭಾಗಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿಯೇ ಈ ಸಮಾವೇಶ ನಡೆಯಲಿದ್ದು ಸುಮಾರು 1 ಲಕ್ಷ ಜನ ಸೇರುವ ನಿರೀಕ್ಷೆ ಇದೆ.
ಕೆ.ಎನ್. ರಾಜಣ್ಣ ಜಿಲ್ಲಾ ಉಸ್ತುವಾರಿ ಸಚಿವ

ಸಿ.ಎಂ ಸ್ಥಾನ ಹಂಚಿಕೆ: ಆಗಿದೆಯೇ ‘ಒಪ್ಪಂದ’?

ಡಿ.ಕೆ. ಶಿವಕುಮಾರ್‌ ಹೇಳಿಕೆ ಬಗ್ಗೆ ಕೆ.ಆರ್. ಪೇಟೆಯಲ್ಲಿ (ಮಂಡ್ಯ) ಸುದ್ದಿಗಾರರು ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಯಾವ ಒಪ್ಪಂದವೂ ಆಗಿಲ್ಲ. ಹೈಕಮಾಂಡ್‌ ತೆಗೆದುಕೊಳ್ಳುವ ತೀರ್ಮಾನದಂತೆ ನಡೆದುಕೊಳ್ಳುತ್ತೇವೆ’ ಎಂದರು.   ಈ ಬಗ್ಗೆ ಪ್ರತಿಕ್ರಿಯಿಸಿದ  ಶಿವಕುಮಾರ್ ‘ಮುಖ್ಯಮಂತ್ರಿ ಹೇಳಿದ ಮೇಲೆ ಅದೇ ಅಂತಿಮ. ಅದರ ಬಗ್ಗೆ ಮರುಪ್ರಶ್ನೆಯೇ ಇಲ್ಲ’ ಎಂದರು. ಅಷ್ಟೇ ಅಲ್ಲ ‘ನಾನು ಮುಖ್ಯಮಂತ್ರಿಯವರ ಕುರ್ಚಿ ಹಾಗೂ ಪಕ್ಷಕ್ಕೆ ಸದಾ ನಿಷ್ಠ’ ಎಂದೂ ಹೇಳಿದರು.  ‘ಮುಖ್ಯಮಂತ್ರಿ ಹೇಳಿದ ಮೇಲೆ ನನ್ನ ಯಾವುದೇ ತಕರಾರು ಇಲ್ಲ. ಅವರು ಹೇಳಿದ್ದೇ ಅಂತಿಮ. ಅವರ ಹೇಳಿಕೆ ನಂತರ ಈ ವಿಚಾರವಾಗಿ ಯಾವುದೇ ವಾದ ಚರ್ಚೆ ಇಲ್ಲ’ ಎಂದು ಸ್ಪಷ್ಟಪಡಿಸಿದರು. ಆದರೆ ಸಂದರ್ಶನದಲ್ಲಿ ‍ಪ್ರಸ್ತಾಪಿಸಲಾಗಿದ್ದ ವಿಷಯದ ಕುರಿತು ಒಂದಕ್ಷರವನ್ನೂ ಶಿವಕುಮಾರ್‌ ಮಾತನಾಡಲಿಲ್ಲ. ಒಪ್ಪಂದ ಹೈಕಮಾಂಡ್‌ಗಷ್ಟೇ ಗೊತ್ತು: ಜಾರಕಿಹೊಳಿ ‘ಮುಖ್ಯಮಂತ್ರಿ ಕುರ್ಚಿ ಕುರಿತ ಒಪ್ಪಂದ ದೆಹಲಿಯಲ್ಲಿ ಹೈಕಮಾಂಡ್ ಮಟ್ಟದಲ್ಲಿ ನಡೆದಿರಬಹುದು. ಅವರಿಗಷ್ಟೇ ಗೊತ್ತು ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ‘ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಐದು ವರ್ಷ ಇರುತ್ತಾರೆ ಎಂದು ಡಿ.ಕೆ. ಸುರೇಶ್ ಅವರೇ ಹೇಳಿದ್ದಾರೆ. ಆದರೆ ಮುಖ್ಯಮಂತ್ರಿ ವಿಚಾರದ ಒಪ್ಪಂದದ ಬಗ್ಗೆ ಗೊತ್ತಿಲ್ಲ. ಆ ವಿಚಾರವನ್ನು ಹೈಕಮಾಂಡ್ ನಿರ್ಧರಿಸುತ್ತದೆ’ ಎಂದರು. ‘2028ಕ್ಕೆ ನಾನು ಮುಖ್ಯಮಂತ್ರಿ ಆಕಾಂಕ್ಷಿ ಎಂದಷ್ಟೆ ಹೇಳುತ್ತಿದ್ದೇನೆ. ನನ್ನಂತೆ ಆಕಾಂಕ್ಷಿಗಳು ಇರುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.