
ಹಾಸನ: ವೈಚಾರಿಕ ಮನೋಧರ್ಮದವರಾಗಿದ್ದ ಬೆಸಗರಹಳ್ಳಿ ರಾಮಣ್ಣ ಅವರು, ಸದಾ ಮಾನವೀಯತೆಗಾಗಿ ಹಂಬಲಿಸಿದವರು ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಸೀ.ಚ.ಯತೀಶ್ವರ ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನ ಕನ್ನಡ ಸಂಘ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ಮಂಗಳವಾರ ಕಾಲೇಜಿನಲ್ಲಿ ಆಯೋಜಿಸಿದ್ದ ಚಕೋರ ಉಪನ್ಯಾಸ ಮಾಲಿಕೆ -7ರ ‘ಡಾ.ಬೆಸಗರಹಳ್ಳಿ ರಾಮಣ್ಣ ಅವರ ಬದುಕು ಬರಹ’ ಕುರಿತು ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಕನ್ನಡ ನಾಡು ಕಂಡ ಅಪೂರ್ವ ಕಥೆಗಾರ, ಕಾದಂಬರಿಕಾರ ಮತ್ತು ಪ್ರಬಂಧಕಾರರಾಗಿದ್ದ ಬೆಸಗರಹಳ್ಳಿ ರಾಮಣ್ಣನವರು, ಗ್ರಾಮೀಣ ಬದುಕನ್ನು ತಮ್ಮ ಸೂಕ್ಷ್ಮ ಸಂವೇದನೆಯ ಮೂಲಕ ಕಲಾತ್ಮಕವಾದ ನೆಲೆಯಲ್ಲಿ ಚಿತ್ರಿಸಿದವರು. ಹಳ್ಳಿಗಳ ಜನಜೀವನ ಅಲ್ಲಿನ ಸಾಂಪ್ರದಾಯಿಕ ಆಚರಣೆಗಳು, ಜನಪದ ಸಂಸ್ಕೃತಿ, ಜಾತ್ರೆ, ಉತ್ಸವಗಳು ಮತ್ತು ಜಾತೀಯತೆ ಇತ್ಯಾದಿಗಳನ್ನು ಧ್ಯಾನಸ್ಥ ಸ್ಥಿತಿಯಲ್ಲಿ ಸಾಹಿತ್ಯದ ಪರಿಧಿಯಲ್ಲಿ ತಂದವರು’ ಎಂದು ವಿವರಿಸಿದರು.
ಸಾಮಾಜಿಕ ಆರೋಗ್ಯ ಕಾಪಾಡುವ ದೃಷ್ಟಿಯಲ್ಲಿ ಚಿಂತಿಸಿದವರು ಎಂದು ಸ್ಮರಿಸಿದರು.
ಕವಯತ್ರಿ ಡಾ.ಸುಜಾತಾ ಎಚ್.ಆರ್., ‘ಬೆಸಗರಹಳ್ಳಿ ರಾಮಣ್ಣ ಅವರ ಕಿರು ಪರಿಚಯ ಮಾಡಿದರು. ವಿದ್ಯಾರ್ಥಿಗಳು ಹೆಚ್ಚು ಸಮಯ ಪುಸ್ತಕಗಳೊಂದಿಗೆ ಒಡನಾಟ ಇಟ್ಟುಕೊಳ್ಳಬೇಕು’ ಎಂಬ ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್. ಪೂರ್ಣಿಮಾ, ‘ನನ್ನ ತಂದೆ ಬೆಸಗರಹಳ್ಳಿ ರಾಮಣ್ಣ ಹೇಗೆ ಬದುಕಿದರೋ, ಹಾಗೆಯೇ ಬರೆದರು. ಹೇಗೆ ಬರೆದರೋ ಹಾಗೆಯೆ ಬದುಕಿದರು. ಮೂಲತಃ ವೈದ್ಯರಾಗಿ ಅವರು ಸಾಹಿತ್ಯ ಕೃಷಿಯಲ್ಲಿ 27 ವರ್ಷಗಳ ಕಾಲ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು’ ಎಂದು ಸ್ಮರಿಸಿದರು.
ಐಕ್ಯೂಎಸಿ ಸಂಯೋಜಕ ಡಾ.ಪಾಪಯ್ಯ ವೇದಿಕೆಯಲ್ಲಿದ್ದರು. ಕನ್ನಡ ವಿಭಾಗದ ಉಪನ್ಯಾಸಕಿ ಹೇಮಲತಾ ಎಚ್.ಕೆ. ಸ್ವಾಗತಿಸಿದರು. ಡಾ.ಮಂಜುಳಾ ಎಸ್. ವಂದಿಸಿದರು. ಮಹಾಲಕ್ಷ್ಮಿ ಜಿ.ಟಿ. ನಿರೂಪಿಸಿದರು.
ನನ್ನ ತಂದೆ ಬೆಸಗರಹಳ್ಳಿ ರಾಮಣ್ಣ ಹೇಗೆ ಬದುಕಿದರೋ, ಹಾಗೆಯೇ ಬರೆದರು. ಹೇಗೆ ಬರೆದರೋ ಹಾಗೆಯೇ ಬದುಕಿದರುಬಿ.ಆರ್. ಪೂರ್ಣಿಮಾ, ಜಿಲ್ಲಾ ಪಂಚಾಯಿತಿ ಸಿಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.