ADVERTISEMENT

ರಾಮೋತ್ಸವ: ಅದ್ದೂರಿ ಶೋಭಾಯಾತ್ರೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 5:44 IST
Last Updated 8 ಫೆಬ್ರುವರಿ 2026, 5:44 IST
ಚನ್ನರಾಯಪಟ್ಟಣದಲ್ಲಿ ರಾಮೋತ್ಸವದ ಅಂಗವಾಗಿ ಏರ್ಪಡಿಸಿದ್ದ ಶೋಭಾಯಾತ್ರೆಯಲ್ಲಿ ಜಾನಪದ ಕಲಾತಂಡದೊಂದಿಗೆ ಬಾಲರಾಮಮೂರ್ತಿ ಮೆರವಣಿಗೆ ಶನಿವಾರ ನಡೆಯಿತು
ಚನ್ನರಾಯಪಟ್ಟಣದಲ್ಲಿ ರಾಮೋತ್ಸವದ ಅಂಗವಾಗಿ ಏರ್ಪಡಿಸಿದ್ದ ಶೋಭಾಯಾತ್ರೆಯಲ್ಲಿ ಜಾನಪದ ಕಲಾತಂಡದೊಂದಿಗೆ ಬಾಲರಾಮಮೂರ್ತಿ ಮೆರವಣಿಗೆ ಶನಿವಾರ ನಡೆಯಿತು   

ಚನ್ನರಾಯಪಟ್ಟಣ: ಅಯೋಧ್ಯೆಯಲ್ಲಿ ಬಾಲರಾಮ ಮಂದಿರ ಸ್ಥಾಪನೆಯಾಗಿ ಎರಡು ವರ್ಷ ಸಂದ ಹಿನ್ನೆಯಲ್ಲಿ ರಾಮೋತ್ಸವದ ಅಂಗವಾಗಿ ಶನಿವಾರ ಶೋಭಾಯಾತ್ರೆ ಅದ್ದೂರಿಯಾಗಿ ಜರುಗಿತು.

ಗ್ರಾಮ ದೇವತೆ ವಳಗೇರಮ್ಮ ದೇವಸ್ಥಾನದ ಬಳಿ ಶೋಭಾಯಾತ್ರೆಗೆ ಹೊಸಕೊಪ್ಪಲು ಗ್ರಾಮದ ಶಕ್ತಿಪೀಠದ ಬಸವೇಶ್ವರ ಚೈತನ್ಯಸ್ವಾಮೀಜಿ, ಬಿಜೆಪಿ ಮುಖಂಡ ಸಿ.ಆರ್. ಚಿದಾನಂದ್ ಸೇರಿ ಮುಖಂಡರು ಚಾಲನೆ ನೀಡಿದರು. ಚೆಂಡೆವಾದ್ಯದ ನಾದದೊಂದಿಗೆ ಬಾಲರಾಮನಮೂರ್ತಿ ಇದ್ದ ವಾಹನ ಸಾಗಿತು.

ಬಾಗೂರುರಸ್ತೆ, ಕೋಟೆ, ಹೊಸ ಬಸ್ ನಿಲ್ದಾಣ, ನವೋದಯವೃತ್ತ, ಮೈಸೂರುರಸ್ತೆ, ಆಸ್ಪತ್ರೆ ವೃತ್ತದಲ್ಲಿ ಮೆರವಣಿಗೆ ಸಾಗಿತು. ಶ್ರವಣಬೆಳಗೊಳ ಹೋಬಳಿ ಕುಂಬೇನಹಳ್ಳಿಯ ಸಂಜೀವಿನಿ ಆಂಜನೇಯ, ನುಗ್ಗೇಹಳ್ಳಿ ಕಲ್ಯಾಣಿ ಆಂಜನೇಯಸ್ವಾಮಿ, ಚನ್ನರಾಯಪಟ್ಟಣದ ಮೇಗಲಕೇರಿ ಕಾಡಾಂಜನೇಯಸ್ವಾಮಿಯನ್ನು ಅಲಂಕೃತ ವಾಹನದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಅದೇರೀತಿ ಹನುಮಾನ್ ಸ್ತಬ್ಧ ಚಿತ್ರ ನೋಡುಗರ ಗಮನ ಸೆಳೆಯಿತು.

ವಾಹನಗಳಲ್ಲಿ ಅಂಬೇಡ್ಕರ್, ಬಾಲಗಂಗಾಧರ ತಿಲಕ್, ಸ್ವಾಮೀ ವಿವೇಕಾನಂದ, ಶಿವಾಜಿ, ಕೆಂಪೇಗೌಡ, ಕೇಶವ ಬಲಿರಾಂ ಹೆಡಗೇವಾರ್.ಎಂ.ಎಸ್. ಗೊಳ್ವಾವಲ್ಕರ್, ಕಿತ್ತೂರರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಭಗತ್ ಸಿಂಗ್, ರಾಜಗುರು, ಸುಖದೇವ್, ವೀರಸಾವರ್ಕರ್, ಸುಭಾಷ್ ಚಂದ್ರ ಬೋಸ್  , ನಾಯಕರ ಭಾವಚಿತ್ರಗಳನ್ನು ಅಳವಡಿಸಲಾಗಿತ್ತು. ಜನಪದ ಕಲಾತಂಡಗಳಾದ ಕೋಲಾಟ, ತಮಟೆವಾದ್ಯ, ವೀರಗಾಸೆ , ಕಲಾತಂಡಗಳು ಮೆರವಣಿಗೆಯ ಸೊಬಗು ಹೆಚ್ಚಿಸಿದವು. ಕೇಸರಿ ಬಂಟಿಂಗ್ಸ್ ಅಳವಡಿಸಲಾಗಿತ್ತು, ಭಾಗವಹಿಸಿದ್ದವರು ಕೇಸರಿ ಶಾಲು ಧರಿಸಿದ್ದರು. ಹಿಂದೂಪರ ಸಂಘಟನೆಗಳ ಮುಖಂಡರಾದ ಧರಣೇಶ್, ರವಿ, ರಾಘು   ಪಾಲ್ಗೊಂಡಿದ್ದರು.

ಶೋಭಾಯಾತ್ರೆಯಲ್ಲಿ ಗಿಲ್ಲಿನಟ ಸಿ ಆರ್. ಚಿದಾನಂದ್ ಬಸವೇಶ್ವರ ಚೈತನ್ಯಸ್ವಾಮೀಜಿ ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.