ಹಾಸನ: ಪುರದಮ್ಮ ದೇವಸ್ಥಾನದ ಅರ್ಚಕ ಎಂದು ಹೇಳಲಾದ ದಯಾನಂದ ಎಂಬುವವನು ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿದ್ದು, ಆತನಿಗೂ, ಪುರದಮ್ಮ ದೇವಸ್ಥಾನಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಬೀಕನಹಳ್ಳಿ ಗ್ರಾಮಸ್ಥ ಪ್ರಕಾಶ್ ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರದಮ್ಮ ದೇವಸ್ಥಾನಕ್ಕೆ ಪೂಜೆಗೆ ಬಂದಿದ್ದ ಮಹಿಳೆಯ ಮೇಲೆ ಮೇಲೆ ದಯಾನಂದ ಎಂಬ ಅರ್ಚಕ ಅತ್ಯಾಚಾರ ಎಸಗಿದ್ದಾನೆ ಎಂಬ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿರುವುದು ವಿಷಾದನೀಯ. ಆದರೆ ಅರಸೀಕೆರೆಯ ದಯಾನಂದ ಎಂಬಾತನಿಗೆ, ದೇವಸ್ಥಾನಕ್ಕೂ ಯಾವುದೇ ಸಂಬಂಧ ಇಲ್ಲ ಎಂದರು.
ಪುರದಮ್ಮ ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ಅಧಿಕೃತವಾಗಿ ಅರ್ಚಕರನ್ನಾಗಿ ಅಶೋಕ ಎಂಬುವವರನ್ನು ತಾಲ್ಲೂಕು ಆಡಳಿತ ನಿಯೋಜನೆ ಮಾಡಿದೆ ಎಂದರು.
ಅತ್ಯಾಚಾರ ಆರೋಪ ಹೊತ್ತಿರುವ ದಯಾನಂದ, ಸಾಮಾನ್ಯ ಭಕ್ತನಾಗಿ ಪುರದಮ್ಮ ದೇವಸ್ಥಾನಕ್ಕೆ ಪೀಠವನ್ನು ಕೊಡುಗೆಯಾಗಿ ನೀಡಿದ್ದ. ಆ ಸಂದರ್ಭದಲ್ಲಿ ದೇವರಿಗೆ ಪೂಜೆ ಮಾಡುವ ವಿಡಿಯೋ ಚಿತ್ರೀಕರಣ ಮಾಡಿದ್ದು, ಅದನ್ನು ಈ ಸಂದರ್ಭದಲ್ಲಿ ಬಳಸಿಕೊಳ್ಳಲಾಗಿದೆ. ಇದನ್ನೇ ಮಾಧ್ಯಮಗಳಲ್ಲಿ ಬಿತ್ತರ ಮಾಡುತ್ತಿದ್ದು, ಆತ ಪುರದಮ್ಮ ದೇವಾಲಯದಲ್ಲಿ ಆರ್ಚಕನಾಗಿ ಕಾರ್ಯ ನಿರ್ವಹಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ದೇವಾಲಯದ ಸುತ್ತ ಅನಧಿಕೃತವಾಗಿ ದೇವರಪೀಠ ಬಾಡಿಗೆ ಕೊಡುವುದು ಹಾಗೂ ಇತರೆ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡುವ ಮೂಲಕ ಭಕ್ತಾದಿಗಳನ್ನು ದಾರಿ ತಪ್ಪಿಸಲಾಗುತ್ತಿದೆ. ಮುಜರಾಯಿ ಇಲಾಖೆ ಸೂಕ್ತ ಕ್ರಮ ಕೈಗೊಂಡು ಅಧಿಕೃತವಾಗಿ ಸಿಬ್ಬಂದಿ ಮತ್ತು ಆಡಳಿತಾಧಿಕಾರಿಗಳನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ಬೀಕನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ರವಿ, ಯಲಗುಂದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದಿನೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.