ADVERTISEMENT

ಹಾಸನ: ವಿಜೃಂಭಣೆಯ ಮಹಾರಥೋತ್ಸವ

ಮಾಲೇಕಲ್ ತಿರುಪತಿ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇಗುಲದಲ್ಲಿ ಭಕ್ತರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 3:10 IST
Last Updated 11 ಜುಲೈ 2022, 3:10 IST
ಅರಸೀಕೆರೆ ನಗರ ಹೊರವಲಯದ ಮಾಲೇಕಲ್ ತಿರುಪತಿಯಲ್ಲಿ ಲಕ್ಷ್ಮೀ ವೆಂಕಟರಮಣ ಸ್ವಾಮಿ ಮಹಾರಥೋತ್ಸವ ಭಾನುವಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು
ಅರಸೀಕೆರೆ ನಗರ ಹೊರವಲಯದ ಮಾಲೇಕಲ್ ತಿರುಪತಿಯಲ್ಲಿ ಲಕ್ಷ್ಮೀ ವೆಂಕಟರಮಣ ಸ್ವಾಮಿ ಮಹಾರಥೋತ್ಸವ ಭಾನುವಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು   

ಅರಸೀಕೆರೆ: ನಗರ ಹೊರವಲಯದ ಮಾಲೇಕಲ್ ತಿರುಪತಿಯಲ್ಲಿ ಐತಿಹಾ ಸಿಕ, ಲಕ್ಷ್ಮೀವೆಂಕಟರಮಣ ಸ್ವಾಮಿ ಮಹಾರಥೋತ್ಸವ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಭಾನುವಾರ ವಿಜೃಂಭಣೆಯಿಂದ ಜರುಗಿತು.

ಕೋವಿಡ್ 19 ಹಾಗೂ ಲಾಕ್‌ಡೌನ್ ಹಿನ್ನೆಲೆಯಲ್ಲಿ ಎರಡು ಯಾವುದೇ ಭಕ್ತರು ಇಲ್ಲದೆ ಕೇವಲ ಸರಳ ರಥೋತ್ಸವಕ್ಕೆ ಸೀಮಿತವಾಗಿತ್ತು. ಈ ಬಾರಿ ವಾರಾಂತ್ಯ ರಥೋತ್ಸವ ಜರುಗಿದ್ದರಿಂದ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಸತತವಾಗಿ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರು ಬೆಟ್ಟವನ್ನೇರಿ ಲಕ್ಷ್ಮೀವೆಂಕಟರಮಣ ಸ್ವಾಮಿ ಹಾಗೂ ಬೆಟ್ಟದ ತಪ್ಪಲಿನಲ್ಲಿರುವ ಗೋವಿಂದ ರಾಜ ಸ್ವಾಮಿ, ಮಹಾಲಕ್ಷ್ಮಿ ಅಮ್ಮನ ದರ್ಶನ ಪಡೆದು ಪುನೀತರಾದರು. ರಥೋತ್ಸವದ ಸಮಯದಲ್ಲಿ
ಬೆಳಿಗ್ಗೆ 10 ಗಂಟೆಯಿಂದ ಬಿಡುವು ಕೊಟ್ಟ ವರುಣ ರಥೋತ್ಸವ ಮುಗಿದ ತಕ್ಷಣ ಪುನಃ ಸುರಿಯಲಾರಂಭಿಸಿದ. ಆಗ ನೆರೆದಿದ್ದ ಭಕ್ತರಿಂದ ‘ಇದುವೇ ದೇವರ ಮಹಿಮೆ’ ಎಂಬ ಮಾತುಗಳು ಕೇಳಿ ಬಂದವು.

ADVERTISEMENT

ರಥೋತ್ಸವದ ನಿಮಿತ್ತ ದೇವಾಲಯದಲ್ಲಿ, ಕೃಷ್ಣ ಗಂಧೋತ್ಸವ, ಯಾತ್ರಾದಾನೋತ್ಸವ, ಹೂವಿನ ಸೇವೆ, ನಿತ್ಯೋತ್ಸವ, ಪ್ರಾಕಾರೋತ್ಸವ, ಸೂರ್ಯ ಮಂಡಲೋತ್ಸವ, ರಥಮಂಟಪ ಸೇವೆ, ವಸಂತ ಸೇವೆ, ರಥದ ಮೇಲೆ ಪೊಂಗಲ್ ಸೇವೆ, ರಾತ್ರಿ ಪುಷ್ಪ ಗಂಧೋತ್ಸವ, ಉಯ್ಯಾಲೋತ್ಸವ ನೆರವೇರಿದವು.

ಬೆಟ್ಟದ ಮೇಲೆ ನೆಲೆಸಿರುವ ಲಕ್ಷ್ಮೀ ವೆಂಕಟರಮಣ ಸ್ವಾಮಿ ಹಾಗೂ ಬೆಟ್ಟದ ತಪ್ಪಲಿನಲ್ಲಿರುವ ಗೋವಿಂದರಾಜ ಸ್ವಾಮಿ, ಮಹಾಲಕ್ಷ್ಮಿ ದೇವಿ, ಸೂರ್ಯನಾರಾಯಣ ಸ್ವಾಮಿ, ಆಂಜನೇಯ ಸ್ವಾಮಿ, ಕೆಂಚರಾಯ ಸ್ವಾಮಿ, ಗುಂಡಮ್ಮ ದೇವಿ ದೇವರಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಅಲಂಕಾರ ಸೇವೆಗಳು ನೆರವೇರಿದವು.

ಸಂಸದ ಪ್ರಜ್ವಲ್ ರೇವಣ್ಣ, ಶಾಸಕರಾದ ಎಚ್. ಡಿ. ರೇವಣ್ಣ, ಕೆ.ಎಂ. ಶಿವಲಿಂಗೇಗೌಡ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಟಿ.ಎ. ನಾರಾಯಣಗೌಡ ಹಾಗೂ ಹಲವು ಮುಖಂಡರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ವಿಶೇಷ ಬಸ್‌ ಸೌಲಭ್ಯ: ನಗರದ ಸಾರಿಗೆ ಬಸ್ ನಿಲ್ದಾಣದಿಂದ ಮಾಲೇಕಲ್ ತಿರುಪತಿಯವರೆಗೆ ಜಾತ್ರಾ ವಿಶೇಷ ಬಸ್ ಸೌಲಭ್ಯ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಪೊಲೀಸ್ ಬಿಗಿ ಬಂದೋಬಸ್ತ್‌ ಹಾಕಲಾಗಿತ್ತು. ಕೆಲವು ಭಕ್ತರು ನಗರದಿಂದ ದೇವಸ್ಥಾನದವರೆಗೆ ಕಾಲ್ನಡಿಗೆಯಲ್ಲೇ ಬಂದು ರಥೋತ್ಸವಕ್ಕೆ ಮೆರುಗು ತಂದರು.

ಜುಲೈ 3ರಿಂದ ಆರಂಭವಾದ ಜಾತ್ರಾ ಮಹೋತ್ಸವ 17 ದಿನ ಜರುಗಲಿದ್ದು, ಜುಲೈ 19ರಂದು ಸಂಪನ್ನಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.