ಚನ್ನರಾಯಪಟ್ಟಣ: ಇಲ್ಲಿನ ಮೈಸೂರು ರಸ್ತೆಯ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಆವರಣದಲ್ಲಿನ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಬಾಗಿಲಿನ ಬೀಗ ಒಡೆದು, ₹1.16 ಲಕ್ಷ ಮೌಲ್ಯದ ಧಾನ್ಯಗಳನ್ನು ಕಳವು ಮಾಡಲಾಗಿದೆ.
ಕಚೇರಿಯ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು, ಅಲ್ಲಿದ್ದ ಒಂದು ಪೆಟ್ಟಿಗೆಯನ್ನು ಒಡೆದಿದ್ದಾರೆ. ನಂತರ ಪಡಿತರ ಸಂಗ್ರಹಿಸಿದ್ದ ಗೋದಾಮಿನ ಬೀಗ ಒಡೆದು, ಅದರಲ್ಲಿದ್ದ ತಲಾ 50 ಕೆ.ಜಿ. ತೂಕದ 46 ಚೀಲ ರಾಗಿ, ತಲಾ 50 ಕೆ.ಜಿ. ತೂಕದ 15 ಚೀಲ ಅಕ್ಕಿ ಹಾಗೂ 480 ಖಾಲಿ ಚೀಲಗಳನ್ನು ಕಳವು ಮಾಡಿದ್ದಾರೆ.
ಸಿಸಿಟಿವಿ ಕ್ಯಾಮೆರಾದಲ್ಲಿ ಕಳವು ದೃಶ್ಯ ಸೆರೆಯಾಗಿದ್ದು, ಅಶೋಕ್ ಲೈಲ್ಯಾಂಡ್ ವಾಹನದೊಂದಿಗೆ ಬಂದಿದ್ದ ಇಬ್ಬರು, ಪಡಿತರ ಧಾನ್ಯ ಕಳವು ಮಾಡಿಕೊಂಡು ಹೋಗಿರುವುದು ಗೊತ್ತಾಗಿದೆ.
ಇದೇ ಆವರಣದಲ್ಲಿ ಇರುವ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಶಾಖಾ ಕಚೇರಿ ಹಾಗೂ ಆಹಾರ ನಿಗಮದ ಕಚೇರಿಯ ಬೀಗ ಒಡೆಯಲು ಯತ್ನಿಸಲಾಗಿದೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.