ADVERTISEMENT

ಹಾಸನ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಜ್ಜು

127 ಕೇಂದ್ರ, 20,826 ವಿದ್ಯಾರ್ಥಿಗಳು, ಸಾರಿಗೆ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 12:15 IST
Last Updated 18 ಜುಲೈ 2021, 12:15 IST
ಕೆ.ಎಸ್.ಪ್ರಕಾಶ್‌
ಕೆ.ಎಸ್.ಪ್ರಕಾಶ್‌   

ಹಾಸನ: ಜುಲೈ 19 ಮತ್ತು 22 ರಂದು ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ
ಮಾಡಿಕೊಂಡಿದ್ದು, 127 ಕೇಂದ್ರಗಳಲ್ಲಿ 20,826 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.

10,727 ಬಾಲಕರು, 10,099 ಬಾಲಕಿಯರು ಪರೀಕ್ಷೆ ಬರೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ
ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷಾ ದಿನಗಳಲ್ಲಿ ವಿದ್ಯಾರ್ಥಿಗಳ ಆಗಮನಕ್ಕೂ ಮೊದಲು
ಮತ್ತು ಪರೀಕ್ಷೆ ಮುಗಿದ ನಂತರ ಎಲ್ಲ ಕೊಠಡಿಗಳನ್ನು ಸ್ಯಾನಿಟೈಸ್‌ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಸರಳಗೊಳಿಸಿ, ಎರಡು ದಿನಗಳಿಗೆ ಸೀಮಿತಗೊಳಿಸಲಾಗಿದೆ. 19ರಂದು ಕೋರ್‌ ವಿಷಯಗಳಾದ ವಿಜ್ಞಾನ, ಗಣಿತ ಮತ್ತು ಸಮಾಜ ವಿಜ್ಞಾನ ವಿಷಯ ಹಾಗೂ 22 ರಂದು ಕನ್ನಡ, ಇಂಗ್ಲಿಷ್‌, ಹಿಂದಿ ಸೇರಿದಂತೆ ಭಾಷಾ ವಿಷಯಗಳ ಪರೀಕ್ಷೆ ನಡೆಸಲಾಗುವುದು. ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಡೆಯಲಿದೆ. ಈ ಬಾರಿ ಬಹು ಆಯ್ಕೆಪ್ರಶ್ನೆ ಆಧಾರಿತ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ.\

ADVERTISEMENT

ಪರೀಕ್ಷಾ ಕೆಂದ್ರಗಳಲ್ಲಿ 3765 ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಈ ಪೈಕಿ 2825 ಸಿಬ್ಬಂದಿಗೆ
ಕೋವಿಡ್ ಮೊದಲನೇ ಡೋಸ್‌ ನೀಡಲಾಗಿದ್ದು, ಉಳಿದ ಸಿಬ್ಬಂದಿಗೆ ಎರಡನೇ ಡೋಸ್ ನೀಡಲಾಗಿದೆ.

ಪ್ರತಿ ಕೇಂದ್ರಗಳಲ್ಲಿಯೂ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಒಬ್ಬ
ಶುಶ್ರೂಷಕ ಅಧಿಕಾರಿಯನ್ನು ನಿಯೋಜಿಸಲಾಗಿದ್ದು, ಪರೀಕ್ಷಾರ್ಥಿಗಳ ಸಹಾಯಕ್ಕಾಗಿ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌
ಸದಸ್ಯರು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಕಳೆದ ವರ್ಷ ಜಿಲ್ಲೆಯಲ್ಲಿ 90 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಈ ವರ್ಷ 37 ಹೆಚ್ಚುವರಿ
ಕೇಂದ್ರಗಳನ್ನು ತೆರೆಯಲಾಗಿದೆ. ಪ್ರತಿ ಡೆಸ್ಕ್‌ನಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಕೂರಲು ಅವಕಾಶವಿದೆ.

ಪ್ರತಿ ಪರೀಕ್ಷಾ ಕೆಂದ್ರಗಳಲ್ಲಿ ಇಬ್ಬರೂ ಆಶಾ ಕಾರ್ಯಕರ್ತೆಯರಿದ್ದು ಪರೀಕ್ಷೆಗೆ ಹಾಜರಾಗುವ ಎಲ್ಲಾ
ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಹಾಗೂ ಸ್ಯಾನಿಟೈಸ್ ಮಾಡಲಾಗುವುದು. ಸೋಂಕಿನ ಲಕ್ಷಣವಿರುವ
ವಿದ್ಯಾರ್ಥಿಗಳಿಗೆ ಪ್ರತಿ ಕೇಂದ್ರಗಳಲ್ಲಿ ಎರಡು ಪ್ರತ್ಯೇಕ ಕೊಠಡಿಗಳನ್ನು ಮೀಸಲಿರಿಸಿ ಪರೀಕ್ಷೆ ಬರೆಯಲು
ಅವಕಾಶ ಮಾಡಲಾಗಿದೆ.

ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ಆಯಾ ಕ್ಷೇತ್ರದ ಶಾಸಕರು, ಸ್ಕೌಟ್ಸ್‌ ಮತ್ತು ಗೈಡ್ಸ್ ಹಾಗೂ
ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ವತಿಯಿಂದ ಉಚಿತವಾಗಿ ಸರ್ಜಿಕಲ್‌ ಮಾಸ್ಕ್ ವಿತರಿಸಲಾಗುತ್ತದೆ.

ನಗರ ಹಾಗೂ ಗ್ರಾಮೀಣ ಪ್ರದೇಶಗಳಿಂದ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಲ್ಲಾ
ಮಾರ್ಗಗಳಲ್ಲಿ ಬಸ್ ಸಂಚಾರವಾಗಲಿದ್ದು, ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿದರೆ ಉಚಿತ ಪ್ರಯಾಣ
ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.