ADVERTISEMENT

ಹಾಸನ| ರಾಜಿ ಸಾಬೀತುಪಡಿಸಿದರೆ ಶಿಕ್ಷೆಗೆ ಸಿದ್ಧ: ಎಚ್‌.ಡಿ. ರೇವಣ್ಣ

ಮಂಜು ಸೇರ್ಪಡೆ ಪಕ್ಷದ ತೀರ್ಮಾನ: ಎಚ್‌.ಡಿ. ರೇವಣ್ಣ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 5:39 IST
Last Updated 3 ಮಾರ್ಚ್ 2023, 5:39 IST
ಎಚ್‌.ಡಿ. ರೇವಣ್ಣ
ಎಚ್‌.ಡಿ. ರೇವಣ್ಣ   

ಹಾಸನ: 'ನಾನು ಮತ್ತು ಎ.ಮಂಜು ಒಂದು ವರ್ಷದಿಂದ ಸಂಪರ್ಕದಲ್ಲಿದ್ದರೆ, ಅದನ್ನು ಸಾಬೀತುಪಡಿಸಲಿ. ರಾಮಸ್ವಾಮಿ ಏನು ಹೇಳುತ್ತಾರೆ ಆ ಶಿಕ್ಷೆಗೆ ಗುರಿಯಾಗುತ್ತೇನೆ’ ಎಂದು ಶಾಸಕ ಎಚ್‌.ಡಿ. ರೇವಣ್ಣ ಸವಾಲು ಹಾಕಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಎ. ಮಂಜು ಪ್ರಕರಣ ಕೋರ್ಟ್‌ನಲ್ಲಿದೆ. ಈ ಸಂಬಂಧ ನಾನು ರಾಜಿ ಮಾಡಿಕೊಂಡಿದ್ದರೆ ನನಗೆ ಮಂಜುನಾಥ ಸ್ವಾಮಿ ಶಿಕ್ಷೆ ನೀಡಲಿ’ ಎಂದರು.

‘ಯಾವುದೇ ನೆಪ ಇಟ್ಟುಕೊಂಡು ಆರೋಪ ಮಾಡಬಾರದು. ಎ.ಮಂಜು ಪಕ್ಷಕ್ಕೆ ಬಂದರೆ ನಾನು ಬೇಡ ಎನ್ನುವುದಕ್ಕೆ ಆಗುತ್ತದೆಯೇ? ಅದು ಪಕ್ಷದ ನಿರ್ಧಾರ. ಕೆಲವರು ಪಕ್ಷದಲ್ಲೇ ಇದ್ದುಕೊಂಡು ಚಾಕು ಹಾಕಿದರು’ ಎಂದು ಆರೋಪಿಸಿದರು.

ADVERTISEMENT

‘ನಾನು ಅರಕಲಗೂಡು ಕ್ಷೇತ್ರದಲ್ಲಿ ಯಾವುದೇ ಗುಂಪುಗಾರಿಕೆ ಮಾಡಿಲ್ಲ. ಇತ್ತೀಚಿಗೆ ಎ.ಟಿ. ರಾಮಸ್ವಾಮಿ ಅವರಿಗೆ ಟಿಕೆಟ್ ನೀಡಬೇಡಿ ಎಂದು ನನ್ನ ಮನೆಗೆ ನೂರಾರು ಮಂದಿ ಬಂದಿದ್ದರು. ಚರ್ಚಿಸಿ ತೀರ್ಮಾನಿಸುವುದಾಗಿ ಹೇಳಿ ವಾಪಸ್‌ ಕಳುಹಿಸಿದ್ದೇನೆ. ಇದೀಗ ನನ್ನ ವಿರುದ್ಧ ಹೇಳಿಕೆ ನೀಡಿರುವ ರಾಮಸ್ವಾಮಿ ಅವರಿಗೆ ಭಗವಂತ ಒಳ್ಳೆಯದು ಮಾಡಲಿ’ ಎಂದರು.

‘ಎಚ್.ಡಿ. ದೇವೇಗೌಡರನ್ನು ಜಿಲ್ಲೆ, ಮನೆಯಿಂದ ಹೊರಗೆ ಕಳಿಸಿದರು ಎಂದು ಹೇಳಿದ್ದಾರೆ. ಆ ವಿಚಾರವನ್ನು ಬಹಿರಂಗ ಪಡಿಸಲು ಎರಡು ವರ್ಷ ಬೇಕೇ’ ಎಂದು ಪ್ರಶ್ನಿಸಿದ ರೇವಣ್ಣ, ‘ಸೀಟ್‌ಗಾಗಿ ಯಾರ ಮನೆ ಬಾಗಿಲು ಹೋಗಲ್ಲ ಎಂದು ಹೇಳಿದ್ದ ರಾಮಸ್ವಾಮಿ, ಎರಡು ವರ್ಷದಿಂದ ಕಾಂಗ್ರೆಸ್ ಬಾಗಿಲನ್ನು ತಟ್ಟುತ್ತಿರುವುದು ಎಲ್ಲರಿಗೂ ಗೊತ್ತಿದೆ. ನಾವು ಪ್ರಜ್ವಲ್ ಅವರನ್ನು ಚುನಾವಣೆಗೆ ನಿಲ್ಲಿಸುವ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಂಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ಶಿವಲಿಂಗೇಗೌಡರು ಆಣೆ ಮಾಡಲಿ: ‘ಅರಸೀಕೆರೆ ಶಾಸಕ ಶಿವಲಿಂಗೇಗೌಡರಿಗೂ ದೇವರು ಒಳ್ಳೆಯದು ಮಾಡಲಿ. 15 ವರ್ಷ ಜೆಡಿಎಸ್ ಪಕ್ಷದಲ್ಲಿ ಅಧಿಕಾರ ಅನುಭವಿಸಿದ್ದಾರೆ. ನಾನು ದೇವರಾಣೆಗೂ ಈ ಪಕ್ಷವನ್ನು ಬಿಡಲ್ಲ ಎಂದು ಕುಮಾರಸ್ವಾಮಿ ಅವರ ಮನೆಯಲ್ಲಿ ಹೇಳಿದ್ದರು. ರಾಗಿ ಕಳ್ಳತನ ವಿಚಾರದಲ್ಲಿ ಧರ್ಮಸ್ಥಳ ಹೋಗಿ ಮಂಜುನಾಥ ಸ್ವಾಮಿಯ ಆಣೆ ಮಾಡಿದ ಶಿವಲಿಂಗೇಗೌಡರು, ಈ ವಿಚಾರದಲ್ಲೂ ಆಣೆ ಮಾಡಲಿ’ ಎಂದು ಸವಾಲು ಹಾಕಿದರು.

‘ಕುಮಾರಸ್ವಾಮಿ, ದೇವೇಗೌಡರನ್ನು ನೋಡಿ ಮತ ಹಾಕುವುದಿಲ್ಲ ಎಂದು ಶಿವಲಿಂಗೇಗೌಡರು ಹೇಳಿದ್ದರು. ಆದರೆ, ನಾನೇ ನನ್ನ ಮಗನ ರಾಜೀನಾಮೆ ಕೊಡಿಸಿ ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡುವುದಾಗಿ ಶಿವಲಿಂಗೇಗೌಡರಿಗೆ ಹೇಳಿದ್ದೆ’ ಎಂದು ಸಮರ್ಥಿಸಿಕೊಂಡರು.

ಡಿಕೆಶಿ ವಿರುದ್ದ ವಾಗ್ದಾಳಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ರೇವಣ್ಣ, ‘ನನಗೆ ಆರಡಿ, ಮೂರಡಿ ಜಾಗ ಸಾಕು. ನನಗೆ ಕಾರಿನಲ್ಲಿ ಕುಳಿತರೂ ನಿದ್ದೆ ಬರುತ್ತದೆ. ಬೇಕಾದರೆ ಶಿವಕುಮಾರ್‌ ಅವರೇ ಇನ್ನೂ ಎರಡು ಅಡಿ ಹೆಚ್ಚಾಗಿ ಜಾಗ ಬಳಸಿಕೊಳ್ಳಲಿ’ ಎಂದು ಲೇವಡಿ ಮಾಡಿದರು.

‘ನನ್ನ ಮನೆಗಾಗಿ ಫ್ಲೈ ಓವರ್ ಮಾಡಿಕೊಂಡಿದ್ದೇನೆಯೇ? ಪರಿಸ್ಥಿತಿ ನೋಡಿ ಮಾತನಾಡಬೇಕು. ಒಂದು ಪಕ್ಷದ ಅಧ್ಯಕ್ಷ ಈ ರೀತಿ ಮಾತನಾಡಬಾರದು, ಅವನಿಗೆ ಮಾನ ಮರ್ಯಾದೆ ಇದೆಯೇ’ ಎಂದು ಏಕವಚನದಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಅವರು ಧೃತರಾಷ್ಟ್ರನನ್ನು ಇಟ್ಟುಕೊಂಡರು. ಆದ್ದರಿಂದ ಕಳೆದ ಬಾರಿ ಸರ್ಕಾರ ರಚನೆ ವೇಳೆ ಸಂಕಷ್ಟ ಎದುರಿಸಿದರು. ರಾಮ- ಆಂಜನೇಯನನ್ನು ಇಟ್ಟುಕೊಂಡಿದ್ದರೆ, ಭುಜಕ್ಕೆ ಭುಜ ಕೊಡುತ್ತಿದ್ದರು ಎಂದರು.

ಬೆಳಗಾದರೆ ಕುಮಾರಸ್ವಾಮಿ ಅವರ ದರ್ಶನ ಮಾಡುತ್ತಿದ್ದ, ಜೋಡೆತ್ತು ಎಂದು ಹೇಳುತ್ತಿದ್ದ ವ್ಯಕ್ತಿ ಇದೀಗ ಯಾವ ಮಟ್ಟಕ್ಕೆ ಮಾತನಾಡುತ್ತಿದ್ದಾರೆ ನೋಡಿ ಎಂದು ಕಿಡಿ ಕಾರಿದರು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.