ADVERTISEMENT

ಹಾಸನ ಜಿಲ್ಲೆಯಲ್ಲಿ ತಗ್ಗಿದ ಮಳೆ ಆರ್ಭಟ

ಹೇಮಾವತಿ ಜಲಾಶಯಕ್ಕೆ 16 ಸಾವಿರ ಕ್ಯುಸೆಕ್ ಒಳ ಹರಿವು

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 16:35 IST
Last Updated 18 ಜೂನ್ 2021, 16:35 IST
ಹೆತ್ತೂರು ಸಮೀಪದ ಆಡ್ರಹಳ್ಳಿ ರಸ್ತೆಗೆ ವಿದ್ಯತ್ ಕಂಬಗಳು ಅಡ್ಡಲಾಗಿ ಬಾಗಿರುವುದು
ಹೆತ್ತೂರು ಸಮೀಪದ ಆಡ್ರಹಳ್ಳಿ ರಸ್ತೆಗೆ ವಿದ್ಯತ್ ಕಂಬಗಳು ಅಡ್ಡಲಾಗಿ ಬಾಗಿರುವುದು   

ಹಾಸನ: ಐದು ದಿನಗಳಿಂದ ಜಿಲ್ಲಾದಾದ್ಯಂತ ಎಡೆಬಿಡದೆ ಸುರಿದ ಮಳೆ ಶುಕ್ರವಾರ ಕೆಲ ಕಾಲ ಬಿಡುವು ನೀಡಿತು. ಬೆಳಿಗ್ಗೆ ಜಿಲ್ಲೆಯ ವಿವಿಧೆಡೆ ತುಂತುರು ಮಳೆ ಸುರಿಯತಾದರೂಸಂಜೆವರೆಗೂ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು.

ಹಾಸನ ನಗರ ಮತ್ತು ಸುತ್ತಮುತ್ತಲ ಪ್ರದೇಶ, ಸಕಲೇಶಪುರ, ಆಲೂರು ಭಾಗದಲ್ಲಿ ಜಿಟಿಜಿಟಿ ಮಳೆಯಾಯಿತು. ತುಂತುರು ಮಳೆ ನಡುವೆಯೇ ಗ್ರಾಹಕರು ಅಗತ್ಯವಸ್ತುಗಳನ್ನು ಖರೀದಿಸಿದರು. ಮಳೆಯಿಂದಾಗಿ ಬೀದಿಬದಿ ತರಕಾರಿ ವ್ಯಾಪಾರಕ್ಕೆ ತೊಂದರೆ ಉಂಟಾಯಿತು.

ಸಕಲೇಶಪುರ ಭಾಗದಲ್ಲಿ ಮಳೆಯಿಂದಾಗಿ ಇದುವರೆಗೂ ನೂರಾರು ಮರಗಳುಧರೆಗುರುಳಿದ್ದು, ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ. ಹೆತ್ತೂರು ಗ್ರಾಮದ ಸಮೀಪ ಅಲ್ಪಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದೆ. ಹಲವು ಕಡೆ ಭತ್ತದ ಗದ್ದೆಗಳುಜಲಾವೃತಗೊಂಡಿವೆ.

ADVERTISEMENT

ಸಕಲೇಶಪುರ ಪಟ್ಟಣ, ಬಾಳ್ಳುಪೇಟೆ, ಬೆಳಗೋಡು,ಹಾನುಬಾಳು, ಮಾರನಹಳ್ಳಿ, ಶುಕ್ರವಾರಸಂತೆ,ಹೆತ್ತೂರು , ಹೊಸೂರು, ಯಸಳೂರು ಹಾಗೂ ಆಲೂರು ತಾಲ್ಲೂಕಿನ ಕೆ.ಹೊಸಕೋಟೆಯಲ್ಲಿಜೋರು ಮಳೆಯಾಗಿದೆ.

ಜಲಾನಯನ ಪ್ರದೇಶಗಳಾದ ಮೂಡಿಗೆರೆ ಮತ್ತು ಸಕಲೇಶಪುರದಲ್ಲಿ ಜೋರುಮಳೆಯಾಗುತ್ತಿರುವುದರಿಂದ ಹೇಮಾವತಿ ಜಲಾಶಯಕ್ಕೆ ಒಳಹರಿವು ಮತ್ತಷ್ಟುಹೆಚ್ಚಾಗಿದೆ. 2922 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 2886.92 ಅಡಿ ನೀರಿತ್ತು. ಸದ್ಯ 16,266 ಕ್ಯುಸೆಕ್ ಒಳಹರಿವಿದ್ದು, 200 ಕ್ಯುಸೆಕ್‌ ಹೊರಬಿಡಲಾಗುತ್ತಿದೆ.

ವಿದ್ಯುತ್‌ ಸಂಪರ್ಕ ಕಡಿತ

ಹೆತ್ತೂರು: ಹೋಬಳಿಯಲ್ಲಿ ಶುಕ್ರವಾರ ಮಳೆ ಸ್ವಲ್ಪ ಬಿಡುವು ನೀಡಿ ಮತ್ತೆ ಸುರಿಯಿತು.ಧಾರಾಕಾರ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಹರಿದಿದ್ದು, ಗದ್ದೆ ಬಯಲು ಜಲಾವೃತಗೊಂಡಿವೆ. ಹಲವು ಕಡೆಗಳಲ್ಲಿ ಗಾಳಿಯಿಂದ ಮರಗಳು ವಿದ್ಯುತ್ ಮಾರ್ಗದ ಮೇಲೆ ಉರುಳಿ ಬಿದ್ದು, ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ವಿದ್ಯುತ್‌ ಸಂಪರ್ಕ ಕಲ್ಪಿಸಲು ಸೆಸ್ಕ್‌ ಸಿಬ್ಬಂದಿ ಪರದಾಡುತ್ತಿದ್ದಾರೆ.

ರಭಸದ ಮಳೆಯೊಂದಿಗೆ ಗಾಳಿಯೂ ಬಿರುಸಾಗಿದ್ದು, ಸಮೀಪದ ಆಡ್ರಹಳ್ಳಿಯಲ್ಲಿ ವಿದ್ಯತ್ ಕಂಬಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಇದರಿಂದ ಮಾರ್ಗದ ಸಂಚಾರ ಸ್ಥಗಿತಗೊಂಡಿತ್ತು. ಸಂಜೆ ವೇಳೆಗೆ ಕಂಬಗಳನ್ನು ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಹೇಮಾವತಿ ಉಪನದಿಗಳಾದ ಐಗೂರು, ಯಡಕೇರಿ ಅತ್ತಿಗನಹಳ್ಳಿ, ಮಾಗಲು ಹೊಳೆ ಹಾಗೂ ಹಿನ್ನೀರಿನಲ್ಲಿ ಮೀನು ಶಿಕಾರಿ ಹೆಚ್ಚಾಗಿದೆ.

ಗ್ರಾಮೀಣ ಭಾಗಗಳಿಂದ ಅಗತ್ಯ ವಸ್ತುಗಳ ಖರೀದಿಗೆ ಹೆಚ್ಚಿನ ಜನರು ಪಟ್ಟಣಕ್ಕೆ ಬಂದಿದ್ದರು. ಇದರಿಂದ ವಾಹನ ದಟ್ಟಣೆ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.