ADVERTISEMENT

ಕಾಫಿ ಬೆಳೆಗಾರರ ನೋಂದಣಿ ಅವಶ್ಯಕ

ಯುರೋಪಿಯನ್ ಯೂನಿಯನ್‌ ಕಾನೂನಿಗೆ ತಕ್ಕಂತೆ ಕ್ರಮ: ಪ್ರದೀಪ್ ‌

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 4:19 IST
Last Updated 20 ಸೆಪ್ಟೆಂಬರ್ 2025, 4:19 IST
ಹೆತ್ತೂರು ಹೋಬಳಿಯ ವಳಲಹಳ್ಳಿಯಲ್ಲಿ ಶುಕ್ರವಾರ ಕಾಫಿ ಬೆಳೆಗಾರರ ನೋಂದಣಿ ಅಭಿಯಾನದಲ್ಲಿ ಪ್ರದೀಪ್‌ ಮಾತನಾಡಿದರು
ಹೆತ್ತೂರು ಹೋಬಳಿಯ ವಳಲಹಳ್ಳಿಯಲ್ಲಿ ಶುಕ್ರವಾರ ಕಾಫಿ ಬೆಳೆಗಾರರ ನೋಂದಣಿ ಅಭಿಯಾನದಲ್ಲಿ ಪ್ರದೀಪ್‌ ಮಾತನಾಡಿದರು   

ಹೆತ್ತೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕಾಫಿಗೆ ಬೇಡಿಕೆ ಕಾಪಾಡಿಕೊಳ್ಳಲು ಕಾಫಿ ಬೆಳೆಗಾರರ ನೋಂದಣಿ ಅಗತ್ಯವಿದೆ ಎಂದು ಕಾಫಿ ಮಂಡಳಿ ತಾಲ್ಲೂಕು ಕಿರಿಯ ಸಂಪರ್ಕ ಅಧಿಕಾರಿ ಪ್ರದೀಪ್ ತಿಳಿಸಿದರು.

ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದಲ್ಲಿ ಶುಕ್ರವಾರ ನಡೆದ ಕಾಫಿ ಬೆಳೆಗಾರರ ನೋಂದಣಿ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಕಾಫಿ ಯುರೋಪ್ ದೇಶಕ್ಕೆ ಶೇ 70ರಷ್ಟು ರಫ್ತಾಗುತ್ತಿದೆ ಎಂದರು.

ಯುರೋಪಿಯನ್ ಯೂನಿಯನ್ ಅರಣ್ಯನಾಶ ನಿಯಂತ್ರಣ ಕಾಯ್ದೆಯ ಪ್ರಕಾರ 2020ರ ಡಿಸೆಂಬರ್ 31ರ ನಂತರ ಅರಣ್ಯನಾಶ ಅಥವಾ ಅರಣ್ಯ ಅವನತಿ ಮಾಡಿದ ಭೂಮಿಯಿಂದ ಬೆಳೆದ ನಿರ್ದಿಷ್ಟ ಉತ್ಪನ್ನಗಳನ್ನು ಅಲ್ಲಿನ ಮಾರುಕಟ್ಟೆಗೆ ತರಲಾಗುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ. ಇದರಿಂದ ಭಾರತದ ಕಾಫಿಗೆ ದೊಡ್ಡ ಹೊಡೆತ ಬೀಳಬಹುದು. ಹಾಗಾಗಿ ನೋಂದಣಿ ಅಗತ್ಯವಾಗಿದ್ದು, ರಾಜ್ಯದಾದ್ಯಂತ ಅಭಿಯಾನ ಆರಂಭಿಸಲಾಗಿದೆ ಎಂದರು.

ADVERTISEMENT

ಇಂಡಿಯಾ ಕಾಫಿ ಆ್ಯಪ್ ಮೂಲಕ ಬೆಳೆಗಾರರು ತಮ್ಮ ಆಧಾರ್ ಕಾರ್ಡ್, ಕಾಫಿ ತೋಟದ ಪಹಣಿ ಹಾಗೂ ಮೊಬೈಲ್ ನಂಬರ್ ಮೂಲಕ ಮೊದಲು ಒಟಿಪಿ ಪಡೆದುಕೊಂಡು ನೋಂದಣಿ ಮಾಡಿಕೊಳ್ಳಬೇಕು. ನಂತರ ಕಾಫಿ ತೋಟವನ್ನು ಜಿಪಿಆರ್‌ಎಸ್ ಮೂಲಕ ನೋಂದಣಿ ಮಾಡಬೇಕು. ಡಿಸೆಂಬರ್ 31ರ ಒಳಗೆ ಎಲ್ಲ ಬೆಳೆಗಾರರು ನೋಂದಣಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಲ್ಲೂಕು ಕಾಫಿ ಮಂಡಳಿಯ ವಿಸ್ತರಣಾಧಿಕಾರಿ ಶ್ವೇತಾ, ರೋಜಮಹಲ್ ಬೇಬಿ, ಎಚ್‌ಡಿಪಿಎ ಮಾಜಿ ಸಂಘಟನಾ ಕಾರ್ಯದರ್ಶಿ ಕೆ.ಪಿ. ಕೃಷ್ಣೆಗೌಡ, ವಳಲಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘ ಅಧ್ಯಕ್ಷ ದರ್ಶನ್, ಗೌರವಾಧ್ಯಕ್ಷ ರಮೇಶ್, ಉಪಾಧ್ಯಕ್ಷ ರುದ್ರೇಶ್, ಸಂಘದ ಪದಾಧಿಕಾರಿಗಳು, ಬೆಳೆಗಾರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.