ADVERTISEMENT

ನೋಂದಣಿ ಅವಧಿ 15 ದಿನ ವಿಸ್ತರಿಸಿ: ರೇವಣ್ಣ

ದಕ್ಷಿಣ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2021, 16:18 IST
Last Updated 8 ನವೆಂಬರ್ 2021, 16:18 IST
ಎಚ್‌.ಡಿ. ರೇವಣ್ಣ
ಎಚ್‌.ಡಿ. ರೇವಣ್ಣ   

ಹಾಸನ: ‘ದಕ್ಷಿಣ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಮತದಾರರ ನೋಂದಣಿಯ ಅವಧಿಯನ್ನು 15 ದಿನ ವಿಸ್ತರಿಸಬೇಕು’ ಎಂದು ಶಾಸಕ ಎಚ್.ಡಿ.ರೇವಣ್ಣ ಆಗ್ರಹಿಸಿದರು.

‘10ಕ್ಕೂ ಹೆಚ್ಚು ದಿನ ಸರ್ಕಾರಿ ರಜೆ ಇದ್ದ ಕಾರಣ ಜಿಲ್ಲೆಯಲ್ಲಿ ಶೇ 50ರಷ್ಟು ನೋಂದಣಿ ಮಾಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಗಮನಹರಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗುವುದು. ಕೆಲವರು ಅಂಕಪಟ್ಟಿ ಕಳೆದುಕೊಂಡಿದ್ದರೆ, ಮತ್ತೆ ಕೆಲವರು ಪದವಿ ಪ್ರಮಾಣಪತ್ರ ಪಡೆದುಕೊಂಡಿಲ್ಲ. ಹಲವು ಸಮಸ್ಯೆಗಳಿಂದ ನೋಂದಣಿ ಸಾಧ್ಯವಾಗಿಲ್ಲ. ಹಾಗಾಗಿ ಅವಧಿ ವಿಸ್ತರಣೆ ಮಾಡಬೇಕು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಶಿವಮೊಗ್ಗ ಮಾದರಿಯಲ್ಲಿ ಹಾಸನ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು. ಕೇವಲ ನಾಮಕಾವಸ್ತೆಗೆ ರನ್‌ ವೇ ಮಾಡಿ, ಜಟಕಾ ಗಾಡಿ ನಿಲ್ಲಿಸುವ ವಿಮಾನ ನಿಲ್ದಾಣ ಬೇಡ. ಈ ಬಗ್ಗೆ ಸಂಬಂಧಪಟ್ಟ ಸಚಿವರಿಗೆ ರಾಜ್ಯಸಭಾ ಸದಸ್ಯ ಎಚ್‌.ಡಿ.ದೇವೇಗೌಡ ಪತ್ರ ಬರೆದಿದ್ದಾರೆ. ಕಾರ್ಗೋ ವಿಮಾನಗಳ ಸಂಚಾರದಿಂದ ಕಾಫಿ, ಆಲೂಗಡ್ಡೆ ರಫ್ತು ಮಾಡಲು ಅವಕಾಶ ಇದೆ’ ಎಂದರು.

ADVERTISEMENT

‘ಹಾಸನ ನಗರದ ಹೊಸ ಬಸ್‌ ನಿಲ್ದಾಣದ ಬಳಿಯ ಚನ್ನಪಟ್ಟಣ ಕೆರೆಯನ್ನು ₹36 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ₹144 ಕೋಟಿ ಅನುದಾನವನ್ನು ಕೆರೆ ಅಭಿವೃದ್ಧಿಗೆ ನೀಡಿದ್ದರು. ಮೂಲ ಯೋಜನೆಯಂತೆ ಅಭಿವೃದ್ಧಿ ಪಡಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.