ADVERTISEMENT

15 ತಿಂಗಳ ಬಾಕಿ ವೇತನಕ್ಕೆ ಒತ್ತಾಯ

ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಗ್ರಾ.ಪಂ. ನೌಕರರ ಧರಣಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 15:55 IST
Last Updated 15 ಜುಲೈ 2021, 15:55 IST
ಹಾಸನ ಜಿಲ್ಲಾ ಪಂಚಾಯಿತಿ ಎದುರು ಸಿಐಟಿಯು ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ನೌಕರರು ಪ್ರತಿಭಟನೆ ನಡೆಸಿದರು
ಹಾಸನ ಜಿಲ್ಲಾ ಪಂಚಾಯಿತಿ ಎದುರು ಸಿಐಟಿಯು ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ನೌಕರರು ಪ್ರತಿಭಟನೆ ನಡೆಸಿದರು   

ಹಾಸನ: ಹದಿನೈದು ತಿಂಗಳ ಬಾಕಿ ವೇತನ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ನೌಕರರು ಗುರುವಾರ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ವೇತನ ಪಾವತಿಸದಿರುವ ಬಗ್ಗೆ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದರೂ ವೇತನ ಸಿಗುತ್ತಿಲ್ಲ. 15ನೇ ಹಣಕಾಸಿನ ವೇತನ ಬಾಬ್ತು ಹಣವನ್ನು ಕಡಿತ ಮಾಡಿ ಸಿಬ್ಬಂದಿ ವೇತನ ಖಾತೆಗೆ ಜಮಾ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಗ್ರಾಮ ಲೆಕ್ಕಿಗ, ಗುಮಾಸ್ತ ಹುದ್ದೆಯಿಂದ ಗ್ರೇಡ್-2 ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆ ನೇರ ನೇಮಕಾತಿಗೆ ಆರ್ಥಿಕ ಇಲಾಖೆ ಸಹಮತ ನೀಡಿದೆ. ಇದರಿಂದ 20-25 ವರ್ಷಗಳಿಂದ ಸೇವೆ ಮಾಡಿ ನಿವೃತ್ತಿಯ ಅಂಚಿನಲ್ಲಿರುವ ಸಾವಿರಾರು ನೌಕರರಿಗೆ ತೀವ್ರ ಅನ್ಯಾಯವಾಗಿದೆ. ಆದ್ದರಿಂದ ನೌಕರ ವಿರೋಧಿ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ADVERTISEMENT

ಗ್ರಾಮ ಪಂಚಾಯಿತಿ ಸಿಬ್ಬಂದಿ 25-30 ವರ್ಷಗಳಿಂದ ಸೇವೆ ಮಾಡಿದ್ದರೂ ಸೇವಾನಿಯಮಾವಳಿಗಳಿಲ್ಲ. ತೀವ್ರ ಅನಾರೋಗ್ಯಕ್ಕೆ ತುತ್ತಾದರೆ, ಅಕಾಲಿಕ ಮರಣವಾದರೆ ಯಾವುದೇಸವಲತ್ತುಗಳಿಲ್ಲ. ಆದೇಶಗಳಿದ್ದರೂ ಪಂಚಾಯಿತಿ ಅಧಿಕಾರಿಗಳು ಜಾರಿ ಮಾಡುವುದಿಲ್ಲ.ನಿವೃತ್ತಿಯಾದರೂ ಬರಿಗೈಯಲ್ಲಿ ಕಳುಹಿಸಲಾಗುತ್ತದೆ. ಆದ್ದರಿಂದ ವೃಂದ ಮತ್ತು ನೇಮಕಾತಿನಿಯಮಗಳಿಗೆ ತಿದ್ದುಪಡಿ ತರಬೇಕು ಎಂದು ಮನವಿ ಮಾಡಿದರು.

ಕೋವಿಡ್‌ನಿಂದ ಮೃತಪಟ್ಟ ನೌಕರರ ಕುಟುಂಬಗಳಿಗೆ ₹30 ಲಕ್ಷ ವಿಮೆ ಪಾವತಿಸಬೇಕು. ಕೋವಿಡ್ ನಿರ್ವಹಣೆ ಕೆಲಸಗಳಲ್ಲಿ ತೊಡಗಿರುವ ಗ್ರಾಮ ಪಂಚಾಯಿತಿ, ಕೋವಿಡ್ ಮುಂಚೂಣಿ ಕಾರ್ಮಿಕರಿಗೆ ಹೆಚ್ಚುವರಿಯಾಗಿ ತಿಂಗಳಿಗೆ ₹10 ಸಾವಿರ ಪ್ರೋತ್ಸಾಹ ಧನ ನೀಡಬೇಕು ಎಂದು ಆಗ್ರಹಿಸಿದರು.

ಸರ್ಕಾರದ ಆದೇಶದಂತೆ ಗ್ರಾಮ ಪಂಚಾಯಿತಿ ನೌಕರರಿಗೆ ತುಟ್ಟಿಭತ್ಯೆ ಸಹಿತ ಕನಿಷ್ಟ ವೇತನ
ಪಾವತಿಸದ ಪಿಡಿಒ ಮತ್ತು ಚುನಾಯಿತ ಸಮಿತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.
ನಿವೃತ್ತ ಹಾಗೂ ನಿಧನರಾದ ನೌಕರ ಕುಟುಂಬದವರಿಗೆ ಕೂಡಲೇ ನಿವೃತ್ತಿ ಉಪಧನ
ಪಾವತಿಸಬೇಕು ಹಾಗೂ ಅನುಕಂಪ ಆಧಾರದ ನೇಮಕಾತಿಗಳಿಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ.ಪರಮೇಶ್ವರ್‌ ಅವರಿಗೆ ಮನವಿ ಸಲ್ಲಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಪ್ರಧಾನ
ಕಾರ್ಯದರ್ಶಿ ಕೆ.ಟಿ. ಹೊನ್ನೇಗೌಡ, ಜಿಲ್ಲಾ ಖಜಾಂಚಿ ಕುಮಾರಸ್ವಾಮಿ, ಸಿಐಟಿಯು ಕಾರ್ಯದರ್ಶಿ
ಅರವಿಂದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.