ADVERTISEMENT

ಹೊಯ್ಸಳ ದೇವಾಲಯದಲ್ಲಿ ಅಭಿವೃದ್ದಿ ಶುರು

ವಿಶ್ವ ಪರಂಪರೆ ಪಟ್ಟಿಗೆ ಹಳೇಬೀಡು: ಪರಿಶೀಲನೆಗೆ ಶೀಘ್ರ ಯುನೆಸ್ಕೊ ತಂಡ

ಎಚ್.ಎಸ್.ಅನಿಲ್ ಕುಮಾರ್
Published 8 ಜುಲೈ 2022, 6:00 IST
Last Updated 8 ಜುಲೈ 2022, 6:00 IST
ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದಲ್ಲಿ ಗೋಡೆಯ ವಿಗ್ರಹಗಳಿಗೆ ರಾಸಾಯಿನಿಕ ಶುದ್ದಿ ಮಾಡುವ ಕೆಲಸ ನಡೆಯುತ್ತಿದೆ
ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದಲ್ಲಿ ಗೋಡೆಯ ವಿಗ್ರಹಗಳಿಗೆ ರಾಸಾಯಿನಿಕ ಶುದ್ದಿ ಮಾಡುವ ಕೆಲಸ ನಡೆಯುತ್ತಿದೆ   

ಹಳೇಬೀಡು: ವಿಶ್ವಪರಂಪರೆ ಪಟ್ಟಿಗೆ ಹಳೇಬೀಡು ನಾಮನಿರ್ದೇಶನ ಆಗಿದ್ದು, ಶೀಘ್ರದಲ್ಲಿಯೇ ಯುನೆಸ್ಕೊ ತಂಡ ಪರಿಶೀಲನೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಹೊಯ್ಸಳೇಶ್ವರ ದೇವಾಲಯದಲ್ಲಿ ಅಭಿವೃದ್ಧಿ ಕೆಲಸಗಳು ಭರದಿಂದ ಸಾಗುತ್ತಿವೆ. ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸ್ಮಾರಕ. ಸಂಗ್ರಹಾಲಯ ಹಾಗೂ ಉದ್ಯಾನ ಹೀಗೆ ಮೂರು ವಿಭಾಗದಲ್ಲಿಯೂ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ.

ಹೊಯ್ಸಳೇಶ್ವರ ದೇವಾಲಯದ ಗೋಡೆ ಹಾಗೂ ವಿಗ್ರಹಗಳಿಗೆ ರಾಸಾಯನಿಕ ಶುದ್ಧಿ ಮಾಡಲಾಗುತ್ತಿದೆ. ಮೃದುವಾದ ಬಳಪದ ಕಲ್ಲಿನಿಂದ ನಿರ್ಮಿಸಿರುವ ಹೊಯ್ಸಳೇಶ್ವರ ದೇವಾಲಯದ ಗೋಡೆಯ ಕೆಲ ವಿಗ್ರಹಗಳಲ್ಲಿ ಕಾಣಿಸಿಕೊಂಡಿರುವ ಫಂಗಸ್ ನಿರ್ಮೂಲನೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ. ವಿಗ್ರಹಗಳು ಸವಕಳಿ ಆಗದಂತೆ ಮುಂದಿನ ಪೀಳಿಗೆಗೆ ಉಳಿಸುವ ಕಾರ್ಯ ನಡೆಯುತ್ತಿದೆ.

ಹೊಯ್ಸಳ ದೇವಾಲಯದ 15 ಕಡೆ ಸರ್ಕೂಟ್ ಕ್ಯಾಮೆರಾ ಅಳವಡಿಸಿ ಭದ್ರತೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಸ್ಮಾರಕ ಮಾತ್ರವಲ್ಲದೆ, ದೂರದಿಂದ ಬರುವ ಪ್ರವಾಸಿಗರ ಸುರಕ್ಷತೆಗೆ ಅನುಕೂಲವಾಗಲಿದೆ. ಕೆಲವು ಪ್ರವಾಸಿಗರು ಹಿಂದೆ ಹಣ ಹಾಗೂ ಇತರ ವಸ್ತುಗಳನ್ನು ಕಳೆದುಕೊಂಡಿದ್ದಾರೆ. ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಕೆಲಸ ಮೊದಲೇ ಆಗಬೇಕಾಗಿತ್ತು ಎನ್ನುತ್ತಾರೆ ಸ್ಥಳೀಯರು.

ADVERTISEMENT

‘ಎರಡು ಸ್ಥಳದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗುತ್ತಿದೆ. ನೀರು ಶುದ್ದಿಕರಣಕ್ಕಾಗಿ ಹೈಟೆಕ್ ಮಾದರಿ ಫಿಲ್ಟರ್‌ಗಳು ಬರಲಿವೆ. ದೂರದಿಂದ ದಣಿದು ಬರುವ ಪ್ರವಾಸಿಗರು ಬಾಯಾರಿಕೆ ನೀಗಿಸಿಕೊಳ್ಳಲು ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕ್ರಮ ಕೈಗೊಂಡಿದೆ’ ಎಂದು ಸಹಾಯಕ ಸ್ಮಾರಕ ಸಂರಕ್ಷಣಾಧಿಕಾರಿ ಗೌತಮ್ ಹೇಳಿದರು.

ಹೊಯ್ಸಳ ದೇವಾಲಯದಲ್ಲಿ ಎಲ್ಲೆಂದರಲ್ಲಿ ವಿದ್ಯುತ್ ತಂತಿಗಳು ನೇತಾಡುತ್ತಿದ್ದವು. ವಿವಿಧ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ಪರಿಶೀಲನೆ ನಡೆಸಿದ ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮಹಾ ನಿರ್ದೇಶಕಿ ವಿದ್ಯಾವತಿ, ಸೂಕ್ತ ಕ್ರಮಕ್ಕೆ ಸೂಚಿಸಿದ್ದರು. ದೇವಾಲಯದ ಒಳಾಂಗಣದಲ್ಲಿ ವಿದ್ಯುತ್ ವಯರ್‌ಗಳು ಕಾಣದಂತೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಅಂಗವಿಕಲರು ದೇವಾಲಯ ವೀಕ್ಷಿಸಲು ಅನುಕೂಲವಾಗುವಂತೆ ಗಾಲಿಕುರ್ಚಿಗಳನ್ನು ತರಿಸಲಾಗುತ್ತಿದೆ. ಪ್ರವಾಸಿಗರು ದೇವಾಲಯ ಪ್ರವೇಶಿಸುವ ಸ್ಥಳದಲ್ಲಿ ಗಾಲಿಕುರ್ಚಿಯನ್ನು ಕೊಡುವ ಹಾಗೂ ಹಿಂದಕ್ಕೆ ಪಡೆಯುವ ವ್ಯವಸ್ಥೆ ರೂಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಶೌಚಾಲಯ ನವೀಕರಣ ಮಾಡುವುದರೊಂದಿಗೆ ಮತ್ತೊಂದು ಹೊಸ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ಹಳೆಯ ಶೌಚಾಲಯವನ್ನು ಸುಧಾರಿತ ಮಾದರಿಗೆ ಪರಿವರ್ತನೆ ಮಾಡಲಾಗುತ್ತಿದೆ. ಅಂಗವಿಕಲರ ಶೌಚಾಲಯ ನಿರ್ಮಾಣ ಸಹ ನಡೆಯುತ್ತಿದೆ.

ಮ್ಯೂಸಿಯಂನಲ್ಲಿ ವಿಗ್ರಹ ಜೋಡಣೆ ಮಾತ್ರವಲ್ಲದೇ ಪೋಟೊ ಗ್ಯಾಲರಿಯನ್ನು ನಿರ್ಮಿಸಲಾಗುತ್ತಿದೆ. ಒಳಾಂಗಣ ಮ್ಯೂಸಿಯಂನಲ್ಲಿ ವಿನೂತನವಾದ ವಿದ್ಯುತ್ ದೀಪ ಹಾಗೂ ವಿಗ್ರಹ ಸಂರಕ್ಷಣೆಗೆ ಹೊಸದಾಗಿ ಗಾಜು ಅಳವಡಿಸುವ ಕೆಲಸ ಬಿಡುವಿಲ್ಲದಂತೆ ನಡೆಯುತ್ತಿದೆ.

ಆದರೆ ಪುರಾತತ್ವ ಇಲಾಖೆಗೆ ಸೇರಿದ ಜೈನಬಸದಿ, ಕೇದಾರೇಶ್ವರ ದೇವಾಲಯ, ನಗರೇಶ್ವರ ಉತ್ಖನನ ಸ್ಮಾರಕ ಹಾಗೂ ಹುಲಿಕೆರೆ ಪುಷ್ಕರಣಿಯತ್ತ ನೋಡುವವರು ಇಲ್ಲದಂತಾಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಸುಂದರ ಉದ್ಯಾನ ನಿರ್ಮಾಣ

ಉದ್ಯಾನದಲ್ಲಿ ಹೊಸದಾಗಿ ವಿಶೇಷ ತಳಿಯ ಹುಲ್ಲು ಬೆಳೆಸಲಾಗುತ್ತಿದ್ದು, ಹಳೆಯ ಹುಲ್ಲು ತೆರವು ಮಾಡಲಾಗುತ್ತಿದೆ. ಹೊಸದಾಗಿ ರೂಪಿಸುವ ಲಾನ್‌ನಲ್ಲಿ ಹಳೆಯ ಹುಲ್ಲು ಚಿಗುರೊಡೆದು ಅಂದಗೆಡಬಾರಾದು ಎಂದು ಸಣ್ಣ ಸಹಿತ ಕೀಳುವ ಕೆಲಸವನ್ನು ಉದ್ಯಾನ ವಿಭಾಗ ಕೈಗೊಂಡಿದೆ.

ಒಣಗಿರುವ ಹೂವಿನ ಗಿಡಗಳ ಜಾಗದಲ್ಲಿ ಬೇರೆ ಗಿಡಗಳನ್ನು ನೆಡಲಾಗುತ್ತಿದೆ. ಹೂವು ಬಿಡದಿದ್ದರೂ ಆಕರ್ಷಕವಾದ ಗಿಡಗಳು ಹಾಗೂ ವಿಶೇಷ ಜಾತಿಯ ಹೂವಿನ ಗಿಡಗಳನ್ನು ನೆಡಲು ಭೂಮಿ ಹದ ಮಾಡಲಾಗುತ್ತಿದೆ. ಅಲ್ಲೆಲ್ಲ ಹೂವಿನ ಬೆಡ್ಡ್ ನಿರ್ಮಿಸಲು ತೋಟಗಾರಿಕಾ ತಜ್ಞರು ಪರಿಶೀಲನೆಯಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.