ADVERTISEMENT

ಅಡಿಬೈಲು ರಂಗನಾಥಸ್ವಾಮಿ ದೇವಾಲಯವನ್ನು ಪ್ರವಾಸಿ ತಾಣ ಪಟ್ಟಿಗೆ ಸೇರಿಸಲು ಆಗ್ರಹ

ಲಕ್ಷಾಂತರ ಭಕ್ತರನ್ನು ಹೊಂದಿರುವ ಅಡಿಬೈಲು ದೇವಾಲಯ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 16:48 IST
Last Updated 8 ಫೆಬ್ರುವರಿ 2023, 16:48 IST
ಅಡಿಬೈಲು ಬೆಟ್ಟದ ಮೇಲಿನ ರಂಗನಾಥಸ್ವಾಮಿ ದೇವಾಲಯ.
ಅಡಿಬೈಲು ಬೆಟ್ಟದ ಮೇಲಿನ ರಂಗನಾಥಸ್ವಾಮಿ ದೇವಾಲಯ.   

ಆಲೂರು: ಸಾವಿರಾರು ವರ್ಷಗಳಿಂದ ತಾಲ್ಲೂಕಿನ 48 ಗ್ರಾಮಗಳ ಸಂಬಂಧಗಳನ್ನು ಧಾರ್ಮಿಕವಾಗಿ ಬೆಸೆದುಕೊಂಡು ಬಂದಿರುವ ಅಡಿಬೈಲು ರಂಗನಾಥಸ್ವಾಮಿ ದೇವಾಲಯವನ್ನು ಸರ್ಕಾರ ಪ್ರವಾಸಿ ತಾಣವೆಂದು ಘೋಷಣೆ ಮಾಡದಿರುವುದಕ್ಕೆ ತಾಲ್ಲೂಕಿನ ಹಲವಾರು ಗಣ್ಯರು ಖಂಡಿಸಿದ್ದಾರೆ.

ಅಡಿಬೈಲು ಬೆಟ್ಟದ ಮೇಲೆ ಕಲ್ಲುಬಂಡೆಯೊಳಗೆ ಹೊಯ್ಸಳರ ಕಾಲದಲ್ಲಿ ಈ ದೇಗುಲ ನಿರ್ಮಾಣವಾಗಿದೆ. ಕುಂದೂರು ಮತ್ತು ಭರತವಳ್ಳಿ ವ್ಯಾಪ್ತಿಗೆ ಸೇರಿದ ಸುಮಾರು 48 ಹಳ್ಳಿಗಳು ಒಟ್ಟುಗೂಡಿ ಮದುವೆ ಸಂಬಂಧವನ್ನು ಇಟ್ಟುಕೊಂಡು, ಇಂದಿಗೂ ಬಿಂದಿಗಮ್ಮ ಮತ್ತು ರಂಗನಾಥಸ್ವಾಮಿ ದೇವರ ಜಾತ್ರೆಯನ್ನು ವೈಭವದಿಂದ ನಡೆಸಿಕೊಂಡು ಬರುತ್ತಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ನಿತ್ಯ ಕನಿಷ್ಠ 10 ಸಾವಿರಕ್ಕೂ ಹೆಚ್ಚು ಜನ ಸೇರುತ್ತಾರೆ.

ಈ ಜಾತ್ರೆಯಲ್ಲಿ ಬಿಂದಿಗಮ್ಮ ಕಳಸ ರಾತ್ರಿ ವೇಳೆ ಏಳು ಊರು ಬಾಗಿಲುಗಳನ್ನು ದಾಟಿ ಹೋಗುವ ಉತ್ಸವ ಸತ್ಯಸಾಕ್ಷಿಗೆ ಹತ್ತಿರವಾಗಿದೆ. ತಲೆ ಮೇಲೆ ಹೊತ್ತ ಕಳಸವನ್ನು ಕೈಯಲ್ಲಿ ಹಿಡಿಯದೆ ಏಳು ಕಿ.ಮೀ. ದೂರದ ಬೆಟ್ಟ ಹತ್ತಿ, ಕೇವಲ ಮುಕ್ಕಾಲು ಗಂಟೆಯಲ್ಲಿ ದೇವಸ್ಥಾನವನ್ನು ತಲುಪುತ್ತದೆ.

ADVERTISEMENT

ಮನೆ ದೇವರೆಂದು ಪೂಜಿಸುವ ಸಾವಿರಾರು ಭಕ್ತರು ರಾಜ್ಯ, ಹೊರ ರಾಜ್ಯ, ಹೊರ ದೇಶದಲ್ಲಿಯೂ ನೆಲೆಸಿದ್ದಾರೆ. ಜಾತ್ರೆ ವೇಳೆಯಲ್ಲಿ ಎಲ್ಲರೂ ಒಂದೆಡೆ ಸೇರುತ್ತಾರೆ. ಇಂತಹ ವಿಸ್ಮಯ ಹಾಗೂ ಪ್ರಖ್ಯಾತಿ ಹೊಂದಿರುವ ದೇವಾಲಯವನ್ನು ಕೂಡಲೇ ಪ್ರವಾಸಿ ತಾಣದ ಪಟ್ಟಿಗೆ ಸೇರಿಸಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.

ದೇಗುಲವನ್ನು ಪ್ರವಾಸಿ ತಾಣಗಳ ಪಟ್ಟಿಗೆ ಸೇರಿಸಿದಲ್ಲಿ, ಹೆಚ್ಚಿನ ಜನರು ಇಲ್ಲಿಗೆ ಬರಲು ಸಾಧ್ಯವಾಗಲಿದೆ. ಇದರಿಂದ ಸುತ್ತಲಿನ ಪರಿಸರದಲ್ಲೂ ವಾಣಿಜ್ಯ ಚಟುವಟಿಕೆಗಳು ಹೆಚ್ಚುವುದರಿಂದ ಆರ್ಥಿಕ ಅಭಿವೃದ್ಧಿ ಸಾಧ್ಯವಾಗಲಿದೆ ಎನ್ನುವುದು ಗ್ರಾಮಸ್ಥರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.