ADVERTISEMENT

ಆಶ್ರಯ ನಿವೇಶನ ಮಂಜೂರಾತಿಗೆ ಆಗ್ರಹ

ದೇವರಾಯಪಟ್ಟಣ, ದೊಡ್ಡಮಂಡಿಗನಹಳ್ಳಿ ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 13:41 IST
Last Updated 27 ಜನವರಿ 2021, 13:41 IST
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ದೇವರಾಯಪಟ್ಟಣ ಹಾಗೂ ದೊಡ್ಡಮಂಡಿಗನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ದೇವರಾಯಪಟ್ಟಣ ಹಾಗೂ ದೊಡ್ಡಮಂಡಿಗನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.   

ಹಾಸನ: ಸರ್ಕಾರಿ ಗೋಮಾಳವನ್ನು ಭೂಗಳ್ಳರಿಂದ ರಕ್ಷಿಸಿ ಆಶ್ರಯ ಯೋಜನೆ ಅಡಿ ಅರ್ಹ ಫಲಾನುಭವಿಗಳಿಗೆ
ನಿವೇಶನ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ದೇವರಾಯಪಟ್ಟಣ ಹಾಗೂ
ದೊಡ್ಡಮಂಡಿಗನಹಳ್ಳಿ ಗ್ರಾಮಸ್ಥರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಕಸಬಾ ಹೋಬಳಿ ದೇವರಾಯಪಟ್ಟಣದ ಸರ್ವೇ ನಂ. 21ರಲ್ಲಿ 4 ಎಕರೆ 23 ಗುಂಟೆ ಪೈಕಿ 4
ಎಕರೆಯನ್ನು ಆಶ್ರಯ ನಿವೇಶನಕ್ಕೆ ನೀಡಲಾಗಿದೆ. ಉಳಿಕೆ 23 ಗುಂಟೆ ಸರ್ಕಾರಿ ಗೋಮಾಳವಾಗಿದೆ. ಸರ್ವೇ
ನಂ. 22ರಲ್ಲಿ 4 ಎಕರೆ ಗೋಮಾಳವಿದ್ದು, 10 ವರ್ಷಗಳ ಹಿಂದೆಯೇ ಅಂದಿನ ಜಿಲ್ಲಾಧಿಕಾರಿ ಗೋಮಾಳ
ಸಂರಕ್ಷಿಸುವಂತೆ ಆದೇಶ ನೀಡಿದ್ದರು. ಆದರೆ ಈ ವರೆಗೂ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು
ಆರೋಪಿಸಿದರು.

ಜಿಲ್ಲಾಧಿಕಾರಿ ಆದೇಶದಂತೆ ಉಪವಿಭಾಗಾಧಿಕಾರಿ 2011ರಲ್ಲಿ ಪರಿಶೀಲನೆ ನಡೆಸಿ, ಸರ್ಕಾರಿ ಜಮೀನನ್ನು
ಕರ್ನಾಟಕ ಭೂ ಕಂದಾಯ ಕಾಯ್ದೆ 1951ರ ಅನ್ವಯ ಸಾರ್ವಜನಿಕ ನಿವೇಶನ ಉದ್ದೇಶದಿಂದ ಕಾಯ್ದಿರಿಸಿದರು.
ಆದರೆ, ಆ ಉದ್ದೇಶಕ್ಕೆ ಭೂಮಿಯನ್ನು ಉಪಯೋಗಿಸಲು ಬರುವುದಿಲ್ಲ ಎಂದು ದೃಢಪಟ್ಟಿದೆ.

ADVERTISEMENT

ಈಗಾಗಲೇ ಭೂಗಳ್ಳರು ನಕಲಿ ಹಕ್ಕು ಪತ್ರಗಳನ್ನು ಸೃಷ್ಠಿಸಿ ಅಕ್ರಮ ಖಾತೆಗಳನ್ನು ಮಾಡಿಸಿ ಸಾರ್ವಜನಿಕರಿಗೆ
ಮೋಸ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಈ ಸರ್ಕಾರಿ ಜಾಗವನ್ನು ಸಂರಕ್ಷಿಸಬೇಕು.
ದೇವರಾಯಪಟ್ಟಣ ಹಾಗೂ ದೊಡ್ಡಮಂಡಿಗನಹಳ್ಳಿಯಲ್ಲಿ ಹಲವಾರು ವರ್ಷಗಳಿಂದ ವಾಸವಾಗಿರುವ ನೈಜ್ಯ
ಹಾಗೂ ಅರ್ಹ ಫಲಾನುಭವಿಗಳಿಗೆ ಆಶ್ರಯ ಯೋಜನೆ ಅಡಿ ನಿವೇಶನ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ತಿರುಮಲಯ್ಯ, ಚಂದ್ರಶೇಖರ್‌, ಜ್ಯೋತಿ, ಸುಜಾತಾ, ಗೌರಮ್ಮ, ಇಬ್ರಾಹಿಂ,
ಸಹೇರಾ ಬಾನು, ಸವೀದಾ, ಶಾರದಮ್ಮ, ಸುರೇಶ್‌, ಚಂದ್ರಮ್ಮ, ರಘು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.