ADVERTISEMENT

ಜೆಡಿಎಸ್‌ ಸಭೆಯಲ್ಲಿ ರೌಡಿಶೀಟರ್‌ಗಳು

ಸ್ವರೂಪ್‌ ಹೆಸರು ಕೆಡಿಸಲಿಕ್ಕಾಗಿಯೇ ಗಲಾಟೆ: ಎಚ್.ಡಿ. ರೇವಣ್ಣ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 15:38 IST
Last Updated 8 ಸೆಪ್ಟೆಂಬರ್ 2022, 15:38 IST

ಹಾಸನ: ‘ನಗರದಲ್ಲಿ ಸೆ.5 ರಂದು ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಕೆಲವರು ರೌಡಿ ಶೀಟರ್‌ಗಳು ಭಾಗಿಯಾಗಿದ್ದರು. ಅವರೇ ಬ್ಯಾನರ್ ಹರಿದು ಹಾಕಿದ್ದಾರೆ’ ಎಂದು ಶಾಸಕ ಎಚ್‌.ಡಿ. ರೇವಣ್ಣ ಆರೋಪಿಸಿದರು.

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಭೆಯ ಬಗ್ಗೆ ಮುಂಚಿತವಾಗಿ ಪತ್ರಿಕೆಗಳಲ್ಲಿ ಜಾಹಿರಾತು ನೀಡಲಾಗಿತ್ತು. ಸಭೆಯಲ್ಲಿ ಟಿಕೆಟ್ ಘೋಷಣೆ ಮಾಡಲಾಗುವುದು ಎಂದು ತಿಳಿಸಿರಲಿಲ್ಲ. ಜಿಲ್ಲೆಯಲ್ಲಿ ನೆರೆಹಾವಳಿ ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು. ಆದರೆ ಸಭೆಗೆ ಕೆಲವು ರೌಡಿಶೀಟರ್‌ಗಳು ಬಂದಿದ್ದರು’ ಎಂದು ದೂರಿದರು.

‘ಸಭಾಂಗಣದ ಹೊರಗೆ ಹಾಕಿದ್ದ ಬ್ಯಾನರ್ ಏಕೆ ಕಿತ್ತರು’ ಎಂದು ಪ್ರಶ್ನಿಸಿದ ಅವರು, ‘ಬಿಜೆಪಿ ಸರ್ಕಾರ ಬಂದ ಮೇಲೆ ಕೆಲವರನ್ನು ರೌಡಿಶೀಟರ್‌ನಿಂದ ಕೈಬಿಟ್ಟಿದ್ದು, ಅವರೇ ಮಾಡಿರುವ ಕೃತ್ಯ ಇದಾಗಿದೆ’ ಎಂದರು.

ADVERTISEMENT

‘ಅವರನ್ನು ಸಭೆಗೆ ಕಳುಹಿಸಿದ್ದು ಯಾರೂ? ಗದ್ದಲದ ಹಿಂದೆ ಯಾರ ಕೈವಾಡವಿದೆ? ಸಭೆಗೆ ಬಂದು ಗಲಾಟೆ ಮಾಡಿದ ರೌಡಿಶೀಟರ್‌ಗಳ ಬಗ್ಗೆ ಪೊಲೀಸ್‌ ವರಿಷ್ಠಾಧಿಕಾರಿಗೆ ತಿಳಿಸಿದ್ದೇನೆ. ಕೆಲವರು ಸ್ವರೂಪ್ ಹೆಸರು ಕೆಡಿಸಲೆಂದೇ ಈ ರೀತಿ ವರ್ತನೆ ತೋರಿದ್ದಾರೆ’ ಎಂದು ಆಪಾದಿಸಿದರು.

‘ಕೆಲವರು ಏಕೆ ಜೆಡಿಎಸ್ ಸಭೆಗೆ ಬಂದಿದ್ದಾರೆ ಎಂಬುದು ನನಗೆ ಗೊತ್ತಿದೆ. ಶೋಭಾಯಾತ್ರೆಗೆ 500 ಜನ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಎಲ್ಲಡೆ ವಿಡಿಯೊ ಚಿತ್ರೀಕರಣ ಮಾಡಲಾಗುತ್ತದೆ. ಆದರೆ ನಮ್ಮ ಸಭೆಗೆ ಏಕೆ ಪೊಲೀಸರನ್ನು ನಿಯೋಜಿಸಿರಲಿಲ್ಲ ಎಂದು ಪ್ರಶ್ನಿಸಿದ ರೇವಣ್ಣ, ಜಿಲ್ಲೆಯಲ್ಲಿ ಗುಪ್ತಚರ ಇಲಾಖೆ ಸತ್ತು ಹೋಗಿದೆ’ ಎಂದರು.

‘ಎಸ್‌ಪಿಜಿ ಭದ್ರತೆ ಇರುವಾಗಲೇ ನಮ್ಮ ತಾಯಿ, ತಂದೆ ಪತ್ನಿ ಮೇಲೆ ಆಸಿಡ್ ದಾಳಿ ನಡೆದಿತ್ತು. ಜನರ ಮಧ್ಯೆ ಇರುತ್ತೇವೆ. ಯಾವಾಗ ಏನಾದರೂ ಆಗಬಹುದು. ಬಿಜೆಪಿ ಸರ್ಕಾರ ಬಂದ ಮೇಲೆ ಹಾಸನದಲ್ಲಿ ರೌಡಿಗಳನ್ನು ಬೆಳೆಸಲಾಗುತ್ತಿದೆ’ ಎಂದು ದೂರಿದರು.

‘ಸ್ವರೂಪ್‌ ಅವರ ತಂದೆ ದಿ. ಎಚ್.ಎಸ್. ಪ್ರಕಾಶ್ ಅವರಿಗೆ ಜೆಡಿಎಸ್ ಪಕ್ಷದಿಂದ ಆರು ಬಾರಿ ಟಿಕೆಟ್ ನೀಡಲಾಗಿತ್ತು. ಸ್ವರೂಪ ಅವರನ್ನು ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರನ್ನಾಗಿ ಮಾಡಿದ್ದೇವೆ. 3–4 ವರ್ಷದಿಂದ ಜಿಲ್ಲೆಯಲ್ಲಿ ಆಗಿರುವ ರಾಜಕೀಯ ಬೆಳವಣಿಗೆಯನ್ನು ಗಣನೆಗೆ ತೆಗೆದುಕೊಂಡು, ಎಲ್ಲರೂ ಕೂತು ಹಾಸನ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ನೀಡಬೇಕು ಎಂಬುದರ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

‘ಹಾಸನ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ, ಜಿಲ್ಲೆಯ ಶಾಸಕರು, ಮುಖಂಡರು ಕುಳಿತುಕೊಂಡು ತೀರ್ಮಾನ ಮಾಡುತ್ತೇವೆ’ ಎಂದು ತಿಳಿಸಿದರು.

‘ಮೂಲ ಉದ್ದೇಶದಂತೆ ಕಾಮಗಾರಿ ನಡೆಸಿ’

‘ಹಾಸನ ವಿಮಾನ ನಿಲ್ದಾಣ ಕಾಮಗಾರಿ ಮೂಲ ಉದ್ದೇಶಕ್ಕೆ ವಿರುದ್ಧವಾಗಿ ನಡೆಯಬಾರದು. ಇದಕ್ಕೆ ವಿರುದ್ಧವಾಗಿ ಕಾಮಗಾರಿ ಮುಂದುವರಿದರೆ ಸ್ಥಗಿತಗೊಳಿಸಲಿ. ಮುಂದಿನ ದಿನದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಾಗ ಕಾಮಗಾರಿ ಮುಂದುವರಿಸಲಾಗುವುದು’ ಎಂದು ಶಾಸಕ ಎಚ್.ಡಿ. ರೇವಣ್ಣ ಹೇಳಿದರು.

‘ಮೂಲ ಉದ್ದೇಶದಂತೆ 1200 ಎಕರೆಗೂ ಹೆಚ್ಚು ಭೂಮಿಯನ್ನು ವಿಮಾನ ನಿಲ್ದಾಣ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ನಿಗದಿಪಡಿಸಲಾಗಿತ್ತು. 2೦೦8ರಲ್ಲಿ ಜುಪಿಟರ್ ಎವಿಯೇಷನ್ ಕಂಪನಿಗೆ 540 ಎಕರೆ ಜಮೀನನ್ನು ತರಬೇತಿ ಅಕಾಡೆಮಿ, ಐಟಿ ಕ್ಯಾಂಪಸ್ ಹಾಗೂ ಇನ್‌ಲ್ಯಾಂಡ್ ಕಂಟೇನರ್ ಡಿಪೋ ಸೌಲಭ್ಯ ಒದಗಿಸಲು ₹ 630 ಕೋಟಿ ಬಂಡವಾಳ ಹೂಡಿಕೆಯ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿತ್ತು’ ಎಂದರು.

‘ಈ ಯೋಜನೆಯಿಂದ ಸುಮಾರು 6,500 ಜನರಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿತ್ತು. ಇದೀಗ ಈ ಯೋಜನೆ ಕಾಮಗಾರಿ ಸ್ಥಗಿತಕ್ಕೆ ಹಿಂದಿನ ಜಿಲ್ಲಾಧಿಕಾರಿ ಆರ್. ಗಿರೀಶ್ ಪತ್ರ ವ್ಯವಹಾರ ಮಾಡಿದ್ದು’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.