ಹೊಳೆನರಸೀಪುರ: ರೈತರಿಗೆ ತೂಕದಲ್ಲಿ ಮೋಸ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶಾಸಕ ಎಚ್.ಡಿ.ರೇವಣ್ಣ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರಲ್ಲದೇ, ದೂರುಗಳು ಬಂದರೆ ಎಫ್‌ಐಆರ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.
‘ಖರೀದಿ ಕೇಂದ್ರದಲ್ಲಿ ಅಧಿಕಾರಿಗಳು ರೈತರಿಗೆ ತೂಕದಲ್ಲಿ ಮೋಸ ಮಾಡುತ್ತಿದ್ದು, ರೈತರಿಂದ ಹಣ ಪಡೆಯುತ್ತಿದ್ದಾರೆ. ಹಳ್ಳಿಗಳಿಂದ ತಂದ ರಾಗಿಯನ್ನು ಸಕಾಲದಲ್ಲಿ ಇಳಿಸಿಕೊಳ್ಳದೆ ಎರಡು– ಮೂರು ದಿನ ಗಾಡಿಗಳನ್ನು ನಿಲ್ಲಿಸಿ ತೊಂದರೆ ನೀಡುತ್ತಿದ್ದಾರೆ. ರೈತರಲ್ಲದವರಿಂದ ರಾಗಿ ಖರೀದಿಸುತ್ತಿದ್ದಾರೆ’ ಎಂದು ಅನೇಕರು ಆರೋಪಿಸಿದ್ದರು.
ಇದು ಪತ್ರಿಕೆ ಹಾಗೂ ದೃಶ್ಯಮಾಧ್ಯಮಗಳಲ್ಲಿ ನೋಡಿದ ಶಾಸಕ ಎಚ್.ಡಿ. ರೇವಣ್ಣ ಸೋಮವಾರ ದಿಢೀರ್ ಭೇಟಿ ನೀಡಿ ಅಧಿಕಾರಿಗಳನ್ನು ತರಾಟಗೆಗೆ ತೆಗೆದುಕೊಂಡರು. ಸ್ಥಳದಲ್ಲಿದ್ದ ರಾಗಿ ಖರೀದಿ ಕೇಂದ್ರದ ಅಧಿಕಾರಿ ಸಮದ್ ಅಲಿ ‘ಇಲ್ಲ ಸಾರ್ ಲೋಡರ್ಸ್‌ಗಳನ್ನು ಕೇಳಿ ಎಂದು ಸಮುಜಾಯಿಷಿ ನೀಡಿದಾಗ ಅಸಮಾಧಾನಗೊಂಡ ರೇವಣ್ಣ, ‘ನೀವು ಹಾಗೂ ಲೋಡರ್ಸ್ ಸೇರಿಯೇ ರೈತರಿಗೆ ಮೋಸ ಮಾಡುತ್ತಿದ್ದೀರಂತೆ. ಇದೆಲ್ಲ ಇಲ್ಲಿ ನಡೆಯಲ್ಲ. ಇನ್ನು ಮುಂದೆ ಇಂತಹ ದೂರುಗಳು ಬಂದರೆ ನಿಮ್ಮ ಮೇಲೆ ಎಫ್‍ಐಆರ್ ಮಾಡಿಸುತ್ತೇನೆ ಎಂದು ಎಚ್ಚರಿಸಿದರು. ಇವರೇನಾದರು ನಿಮಗೆ ಮೋಸ ಮಾಡಿದರೆ ನೀವು ನೇರ ತಹಶೀಲ್ದಾರ್‍ಗೆ ದೂರು ನೀಡಿ’ ಎಂದು ಸ್ಥಳದಲ್ಲಿದ್ದ ರೈತರಿಗೆ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.