ಹಳೇಬೀಡು: ಹೊಸ ಕಂದಾಯ ಗ್ರಾಮ ಆರಂಭಿಸಲು ಸರ್ಕಾರದ ಅನುಮೋದನೆ ದೊರಕಿರುವುದರಿಂದ ನರಸೀಪುರ ಬೋವಿ ಕಾಲೊನಿಯಲ್ಲಿ ಗುರುವಾರ ಮನೆಗಳ ಅಳತೆ ಕಾರ್ಯ ನಡೆಯಿತು.
ಬೇಲೂರು ತಹಶೀಲ್ದಾರ್ ಎಂ.ಮಮತಾ ಅವರ ಆದೇಶದಂತೆ ಹಳೇಬೀಡು ನಾಡಕಚೇರಿಯ ಕಂದಾಯ ಸಿಬ್ಬಂದಿ ಮನೆಗಳ ಅಳತೆ ಕಾರ್ಯ ನಿರ್ವಹಿಸಿದರು. ವ್ಯವಸ್ಥಿತವಾದ ಒಳ ರಸ್ತೆ, ಚರಂಡಿ ಇಲ್ಲದ ಕಿಷ್ಕಿಂಧೆಯಾದ ಬೋವಿ ಕಾಲೊನಿಯ ಬೀದಿಗಳಲ್ಲಿ ಸಿಬ್ಬಂದಿ ಕಷ್ಟಪಟ್ಟು ಅಳತೆ ಕಾರ್ಯ ನಿರ್ವಹಿಸಿದ್ದು ಕಂಡು ಬಂತು. ಗ್ರಾಮಕ್ಕೆ ಸೌಲಭ್ಯ ಹರಿದು ಬರಬಹುದು ಎಂಬ ನಿರೀಕ್ಷೆಯಲ್ಲಿ ಕೆಲವರು ಸಿಬ್ಬಂದಿ ಜೊತೆ ಓಡಾಡಿದರು.
ಮನೆಯ ಯಜಮಾನರ ಹೆಸರು ಎಷ್ಟು ಮಂದಿ ವಾಸವಾಗಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಿದ್ದರಿಂದ ಕೆಲವರು ಸರ್ಕಾರದಿಂದ ಪರಿಹಾರ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
‘ನರಸೀಪುರ ಬೋವಿ ಕಾಲೊನಿಯನ್ನು ಕಂದಾಯ ಗ್ರಾಮ ಮಾಡಬೇಕು ಎಂದು ಬೇಲೂರು ತಹಶೀಲ್ದಾರ್ ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವಕ್ಕೆ ಸರ್ಕಾರದಿಂದ ಅನುಮೋದನೆ ದೊರಕಿದೆ. ಆದ್ದರಿಂದ ಮನೆಗಳ ಅಳತೆ ಹಾಗೂ ಗ್ರಾಮದ ಕುರಿತು ಮಾಹಿತಿ ಸಂಗ್ರಹಿಸಲು ಸೂಚನೆ ನೀಡಿದ್ದರಿಂದ ಕಾರ್ಯಪ್ರವೃತ್ತರಾಗಿದ್ದೇವೆ’ ಎಂದು ಗ್ರಾಮ ಆಡಳಿತ ಅಧಿಕಾರಿ ರವಿಕುಮಾರ್ ತಿಳಿಸಿದರು.
ಗ್ರಾಮ ಆಡಳಿತ ಅಧಿಕಾರಿ ಪೂರ್ಣಿಮಾ, ಗ್ರಾಮ ಸಹಾಯಕಿ ಲತಾ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.