ಸಕಲೇಶಪುರ: ‘20 ವರ್ಷಗಳಿಂದ ನಮ್ಮೂರಿನ ರಸ್ತೆಯು ಹಳ್ಳ, ದಿಣ್ಣೆ, ಮಂಡಿಯುದ್ದ ಗುಂಡಿಗಳಿಂದ ಹಾಳಾಗಿ ವಾಹನಗಳನ್ನು ಓಡಿಸುವುದಕ್ಕೇ ಆಗುತ್ತಿರಲಿಲ್ಲ. ಅಂತೂ ₹ 3 ಕೋಟಿ ಅನುದಾನದಲ್ಲಿ ರಸ್ತೆ ಡಾಂಬರೀಕರಣ ಆಗುತ್ತಿದೆ ಎಂದು ಖುಷಿ ಪಟ್ಟಿದ್ದೆವು. ಒಂದು ತಿಂಗಳಲ್ಲೇ ಹಾಕಿದ ಡಾಂಬರು ಕಿತ್ತು ಹೋಗುತ್ತಿದೆ ಎಂದರೆ ಅದೆಂತಹ ಕಳಪೆ ಕಾಮಗಾರಿ ಮಾಡಿದ್ದಾರೆ ನೋಡಿ’...
ಇದು ಹಾಲೇಬೇಲೂರಿನ ರಸ್ತೆಯ ಡಾಂಬರು ಕಿತ್ತು ಹೋಗುತ್ತಿರುವುದನ್ನು ತೋರಿಸುವ ಗ್ರಾಮಸ್ಥರು ಹೇಳುವ ಮಾತು.
ಹಾಲೇಬೇಲೂರು–ಹೊಂಕರವಳ್ಳಿ ಗಡಿ ನಡುವಿನ 3 ಕಿ.ಮೀ. ಉದ್ದದ ರಸ್ತೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಕೇಂದ್ರ ರಸ್ತೆ ನಿಧಿ (ಸಿಆರ್‌ಎಫ್) ಅಡಿ ಮೇ ಕೊನೆಯ ವಾರದಲ್ಲಿ ಡಾಂಬರೀಕರಣ ಕಾಮಗಾರಿ ಕೈಗೊಳ್ಳಲಾಗಿದೆ. ಬಾಳೇಗದ್ದೆಯಿಂದ ಪ್ಲಾಂಟರ್ಸ್ ಕ್ಲಬ್‌ವರೆಗೂ ಡಾಂಬರೀಕಣ ಮಾಡುವುದು ಬಾಕಿ ಇದೆ. ಕಾಮಗಾರಿ ಮಾಡುವಾಗ ಮಳೆ ಬಂದ ಕಾರಣ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಆದರೆ 3 ಕಿ.ಮೀ. ಹಾಕಿರುವ ಡಾಂಬರು ಹಲವೆಡೆ ಈಗಾಗಲೆ ಬಿರುಕು ಬಿಟ್ಟು, ಕೈಯಿಂದ ಮೇಲೆ ಎತ್ತುವಂತಾಗಿದೆ ಎಂದು ಗ್ರಾಮಸ್ಥರು ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಮಲೆನಾಡಿನಲ್ಲಿ ಜೂನ್ ಮೊದಲ ವಾರದಿಂದ ವಾಡಿಕೆಯಂತೆ ಮಳೆಯಾಗುತ್ತದೆ. ಮಳೆ ಶುರುವಾದರೆ, ಅಕ್ಟೋಬರ್ ಕೊನೆಯ ವಾರದವರೆಗೂ ಇರುತ್ತದೆ. ಇದು ಸಣ್ಣ ಮಕ್ಕಳಿಗೂ ಗೊತ್ತಿರುವ ವಿಚಾರ. ಆದರೆ ಜನಪ್ರತಿನಿಧಿಗಳಿಗೆ, ಪದವಿ ಪಡೆದಿರುವ ಎಂಜಿನಿಯರ್‌ಗಳಿಗೆ ಮಳೆಗಾಲದಲ್ಲಿ ಮಲೆನಾಡಿನಲ್ಲಿ ರಸ್ತೆಗಳಿಗೆ ಡಾಂಬರು ಹಾಕಬಹುದಾ ಎಂಬ ಸಾಮಾನ್ಯ ಜ್ಞಾನ ಇಲ್ಲವೇ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.
ಬೇಸಿಗೆಯ ಸುಡು ಬಿಸಿಲಿನಲ್ಲಿ ಡಾಂಬರೀಕರಣ ಮಾಡಿದರೆ, ಡಾಂಬರು ಜಿನುಗಿ ವಾಹನಗಳು ಸಂಚರಿಸುವಾಗ ರಸ್ತೆ ಪಕ್ಕಾ ಆಗುತ್ತದೆ. ಮಳೆ ಶುರುವಾಗುವಾಗ ಕಾಮಗಾರಿ ಕೈಗೊಂಡರೆ ಯಾವ ರಸ್ತೆಯೂ ಉಳಿಯುವುದಿಲ್ಲ. ಅದೇ ಪರಿಸ್ಥಿತಿ ಹಾಲೇಬೇಲೂರು–ಹೊಂಕರವಳ್ಳಿ ರಸ್ತೆಯದ್ದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಾಂಬರೀಕರಣ ಮಾಡಿ ಒಂದೂವರೆ ತಿಂಗಳಲ್ಲಿ ಹಾಳಾಗಿದೆ. ಒಂದು ತಿಂಗಳು ಹೀಗೆಯೇ ಮಳೆ ಬಂದರೆ ರಸ್ತೆಗೆ ಹಾಕಿರುವ ಡಾಂಬರು ಮೇಲೆ ಎದ್ದು ಬರುತ್ತದೆ. ಗುತ್ತಿಗೆದಾರರಿಂದ ಪುನಃ ರಸ್ತೆ ನಿರ್ಮಾಣ ಮಾಡಿಸಬೇಕುಪ್ರಕಾಶ್ ಅಧ್ಯಕ್ಷ ಕುನಿಗನಹಳ್ಳಿ ಗ್ರಾ.ಪಂ.
ಈ ಬಾರಿ ಮುಂಗಾರು ಜೂನ್ ಮೊದಲ ವಾರದಿಂದಲೇ ಆರಂಭವಾಗಿದೆ. ಕೆಲವೆಡೆ ಡಾಂಬರು ಕಿತ್ತಿದೆ. ಗುತ್ತಿಗೆದಾರರಿಗೆ 2 ವರ್ಷ ನಿರ್ವಹಣೆ ಜವಾಬ್ದಾರಿ ಇದೆ. ಮಳೆ ನಿಂತ ಕೂಡಲೇ ಗುಣಮಟ್ಟದಲ್ಲಿ ಡಾಂಬರೀಕಣ ಮಾಡಿಸಲಾಗುವುದು.ಹನುಮಂತರೆಡ್ಡಿ ಎಂಜಿನಿಯರ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.