ADVERTISEMENT

ರಸ್ತೆ ವಿಸ್ತರಣೆ: ಕಾನೂನು ತೊಡಕು ನಿವಾರಿಸಿ

ಸಕಲೇಶಪುರದ ಬಿ.ಎಂ.ರಸ್ತೆ ಪರಿಶೀಲನೆ: ಸಂಸದ ಪ್ರಜ್ವಲ್‌ ರೇವಣ್ಣ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 9:15 IST
Last Updated 21 ಆಗಸ್ಟ್ 2020, 9:15 IST
ಸಕಲೇಶಪುರ ತಾಲ್ಲೂಕಿನ ಕ್ಯಾಮನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಸಂಕ್ಲಾಪುರಮಠ ಗ್ರಾಮದಲ್ಲಿ ಅತಿವೃಷ್ಟಿಯಿಂದ ರಸ್ತೆ ಕುಸಿದಿರುವ ಸ್ಥಳಕ್ಕೆ ಗುರುವಾರ ಸಂಸದ ಪ್ರಜ್ವಲ್‌ ರೇವಣ್ಣ ಭೇಟಿ ನೀಡಿ ಪರಿಶೀಲಿಸಿದರು. ಶಾಸಕ ಎಚ್.ಕೆ.ಕುಮಾರಸ್ವಾಮಿ ಇದ್ದಾರೆ
ಸಕಲೇಶಪುರ ತಾಲ್ಲೂಕಿನ ಕ್ಯಾಮನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಸಂಕ್ಲಾಪುರಮಠ ಗ್ರಾಮದಲ್ಲಿ ಅತಿವೃಷ್ಟಿಯಿಂದ ರಸ್ತೆ ಕುಸಿದಿರುವ ಸ್ಥಳಕ್ಕೆ ಗುರುವಾರ ಸಂಸದ ಪ್ರಜ್ವಲ್‌ ರೇವಣ್ಣ ಭೇಟಿ ನೀಡಿ ಪರಿಶೀಲಿಸಿದರು. ಶಾಸಕ ಎಚ್.ಕೆ.ಕುಮಾರಸ್ವಾಮಿ ಇದ್ದಾರೆ   

ಸಕಲೇಶಪುರ: ಪಟ್ಟಣದ ಬಿ.ಎಂ.ರಸ್ತೆ ವಿಸ್ತರಣೆಗೆ ಇರುವ ಕಾನೂನಿನ ತೊಡಕು ಹಾಗೂ ತಾಂತ್ರಿಕ ಅಡಚಣೆ ನಿವಾರಿಸಿ ಇತ್ಯರ್ಥಗೊಳಿಸಿ ನನೆಗುದಿಗೆ ಬಿದ್ದಿರುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದರು.

ಆಗಸ್ಟ್‌ ಮೊದಲ ವಾರದಲ್ಲಿ ಬಿದ್ದ ಭಾರಿ ಮಳೆಯಿಂದ ಜೀವ ಹಾಗೂ ಆಸ್ತಿಪಾಸ್ತಿ ಹಾನಿ ಆಗಿರುವ ಪ್ರದೇಶಗಳನ್ನು ಪರಿಶೀಲನೆ ನಡೆಸಿ ಗುರುವಾರ ಅವರು ಮಾತನಾಡಿದರು.

ಪಟ್ಟಣ ಪ್ರವೇಶ ಮಾಡುವ ಸೇತುವೆಯಿಂದ ಪ್ರವಾಸಿ ಮಂದಿರಕ್ಕೆ ಕೇವಲ ಒಂದು ನಿಮಿಷದ ಪ್ರಯಾಣ. ರಸ್ತೆಯಲ್ಲಿ ವಾಹನ ದಟ್ಟಣೆಯಿಂದ ಉಂಟಾದ ಟ್ರಾಫಿಕ್‌ ಜಾಮ್‌ನಿಂದಾಗಿ ಸುಮಾರು 35 ನಿಮಿಷ ಬೇಕಾಯಿತು. ಈ ಸಮಸ್ಯೆಗೆ ಶೀಘ್ರ ಪರಿಹಾರ ಆಗಬೇಕು ಎಂದರು.

ADVERTISEMENT

ಪಕ್ಷದ ಕಾರ್ಯಕರ್ತರು ಹಾಗೂ ಪುರಸಭೆ ಸದಸ್ಯರು ಮಾತನಾಡಿ, ಇದು ಒಂದು ದಿನದ ಸಮಸ್ಯೆ ಅಲ್ಲ. ಕೋವಿಡ್‌–19 ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿಯೇ ರಸ್ತೆಯಲ್ಲಿ ವಾಹನಗಳ ದಟ್ಟಣೆ ಇಷ್ಟು ಇದೆ. ಇನ್ನು ಸಾಮಾನ್ಯವಾಗಿ ನಿತ್ಯವೂ ಟ್ರಾಫಿಕ್‌ ಜಾಮ್‌ ಸಮಸ್ಯೆಯನ್ನು ಸ್ಥಳೀಯರು ಹಾಗೂ ಪ್ರವಾಸಿಗರು ಎದುರಿಸಬೇಕಾಗಿದೆ. ರಸ್ತೆ ಬದಿಯ ಕೆಲವು ನಿವಾಸಿಗಳು ನ್ಯಾಯಾಲಯ ಮೆಟ್ಟಿಲು ಹತ್ತಿದ್ದಾರೆ. ಈ ಸಮಸ್ಯೆಯನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿಯೂ ರಸ್ತೆ ವಿಸ್ತರಣೆ ಮಾಡಲಾಗಿದೆ. ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ, ಹೆಚ್ಚು ವಾಹನ ಹೊಂದಿರುವ ಸಕಲೇಶಪುರದಲ್ಲಿ ರಸ್ತೆ ವಿಸ್ತರಣೆ ಎಂದೋ ಆಗಬೇಕಾಗಿತ್ತು. ಇದಕ್ಕೆ ಕಾರಣ ಹುಡುಕುವ ಬದಲು ವಿಸ್ತರಣೆ ಕಾರ್ಯ ಮಾಡಬೇಕು. ನ್ಯಾಯಾಲಯದಲ್ಲಿ ದಾವೆ ಹೂಡಿರುವ ನಿವಾಸಿಗಳ ನ್ಯಾಯಸಮ್ಮತ ಬೇಡಿಕೆ ಈಡೇರಿಸಿ ಅರ್ಧಕ್ಕೆ ನಿಂತಿರುವ ಕಾಮಗಾರಿ ಪೂರ್ಣಗೊಳಿಸುವತ್ತ ಅಧಿಕಾರಿಗಳು ಮುಂದಾಗಬೇಕು ಎಂದರು.

ಶಾಸಕ ಎಚ್.ಕೆ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಗಿರೀಶ್‌ ನಂದನ್‌, ತಹಶೀಲ್ದಾರ್‌ ಮಂಜುನಾಥ್‌, ಡಿವೈಎಸ್‌ಪಿ ಗೋಪಿ, ಜೆಡಿಎಸ್‌ ಮುಖಂಡ ಸ.ಬ.ಭಾಸ್ಕರ್‌, ಸಚಿನ್‌ ಪ್ರಸಾದ್‌, ಪುರಸಭೆ ಸದಸ್ಯರು ಇದ್ದರು.

ತಾಲ್ಲೂಕಿನ ಕ್ಯಾಮನಹಳ್ಳಿ ಸಮೀಪದ ಸಂಕ್ಲಾಪುರ ಮಠ ಗ್ರಾಮದಲ್ಲಿ ಉಕ್ಕಿ ಹರಿಯುತ್ತಿದ್ದ ಎತ್ತಿನಹಳ್ಳದಲ್ಲಿ ಕೊಚ್ಚಿಹೋದ ಸಿದ್ದಯ್ಯ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು. ರಸ್ತೆ ಕುಸಿದಿರುವ ಸ್ಥಳಕ್ಕೆ ಭೇಟಿ ನೀಡಿದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.