ADVERTISEMENT

ಕೆರೆ ಪುನಶ್ಚೇತನಕ್ಕೆ ₹ 20 ಕೋಟಿ ನೀಡಿ

ಹಿರಿಯ ನಾಗರಿಕರ ವೇದಿಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 14:00 IST
Last Updated 3 ಜುಲೈ 2018, 14:00 IST
ಬಿ.ಕೆ. ಮಂಜುನಾಥ್
ಬಿ.ಕೆ. ಮಂಜುನಾಥ್   

ಹಾಸನ : ‘ತಾಲ್ಲೂಕಿನ ಕೆರೆಗಳ ಪುನಶ್ಚೇತನಕ್ಕಾಗಿ ಮೀಸಲಿಟ್ಟಿರುವ ₹ 20 ಕೋಟಿ ಅನುದಾನವನ್ನು ರಾಜ್ಯ ಸಮ್ಮಿಶ್ರ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಕಡಿತಗೊಳಿಸಬಾರದು’ ಎಂದು ಹಿರಿಯ ನಾಗರಿಕರ ವೇದಿಕೆ ಕಾರ್ಯದರ್ಶಿ ಬಿ.ಕೆ ಮಂಜುನಾಥ್ ಮನವಿ ಮಾಡಿದರು.

‘ಹಿರಿಯ ನಾಗರಿಕರ ವೇದಿಕೆ ಕೋರಿಕೆ ಮೇರೆಗೆ ಹಿಂದಿನ ಕಾಂಗ್ರೆಸ್ ಸರ್ಕಾರ ತಾಲ್ಲೂಕಿನ ಹಂದಿನ ಕೆರೆಯಿಂದ ಸತ್ಯಮಂಗಲ ಕೆರೆಗೆ ನೀರು ತುಂಬಿಸುವ ಹಾಗೂ ಚನ್ನಪಟ್ಟಣ ಮತ್ತು ಹುಣಸಿನಕೆರೆಗಳ ಪುನಶ್ವೇತನಕ್ಕಾಗಿ ಮೀಸಲಿಟ್ಟಿದ್ದ ಹಣವನ್ನು ಹೊಸ ಸರ್ಕಾರ ಮಂಡಿಸುತ್ತಿರುವ ಬಜೆಟ್ ನಲ್ಲಿ ಮುಂದುವರೆಸಬೇಕು’ ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಈ ಯೋಜನೆಗಳ ಅನುಷ್ಟಾನಕ್ಕೆ ಸಂಬಂಧಪಟ್ಟ ಇಲಾಖೆಗೆ ವರದಿ ತಯಾರಿಸಲು ಸೂಚಿಸುವಂತೆ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹಾಗೂ ಜೆಡಿಎಸ್‌ ನಾಯಕ ಎಚ್.ಎಸ್. ಪ್ರಕಾಶ್ ಅವರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಒತ್ತಡ ಹೇರುವಂತೆ ಮನವಿ ಮಾಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಹಾಸನ ನಗರ ಸೇರಿದಂತೆ ಎಲ್ಲಾ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಕಾರ್ಯ ನಿರ್ಲಕ್ಷ್ಯಕ್ಕೀಡಾಗುತ್ತಿದೆ. ನಗರದ ರಸ್ತೆ ಬದಿಗಳಲ್ಲಿ ಹಾಗೂ ಖಾಲಿ ನಿವೇಶನಗಳಲ್ಲಿ ಮತ್ತು ಹೊಸ ಬಡಾವಣೆಗಳಲ್ಲಿ ಪಾರ್ಥೇನಿಯಂ ಬೆಳೆದು ನಿಂತಿವೆ. ಕಸ ಸರಿಯಾಗಿ ವಿಲೇವಾರಿ ಮಾಡದ ಕಾರಣ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದ್ದು, ಕೂಡಲೇ ಸ್ಥಳೀಯ ಸಂಸ್ಥೆಗಳು ಸಂಬಂಧಪಟ್ಟ ಮಾಲೀಕರಿಗೆ ಸೂಚನೆ ನೀಡಿ. ಸ್ವಚ್ಛ ಮಾಡದ ಮಾಲೀಕರಿಗೆ ದಂಡ ವಿಧಿಸಬೇಕು’ ಎಂದು ಒತ್ತಾಯಿಸಿದರು.

‘ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ಜಿಲ್ಲೆಯಾದ್ಯಂತ ಸ್ವಚ್ಛತಾ ಕಾರ್ಯವನ್ನು ನಡೆಸಬೇಕು. ನಗರದ ಎಂ.ಜಿ. ರಸ್ತೆಯನ್ನು ಸ್ವಚ್ಛಗೊಳಿಸಿ ಮಾದರಿ ರಸ್ತೆಯನ್ನಾಗಿ ಮಾಬೇಕು’ ಎಂದು ಹೇಳಿದರು.
ಹಿರಿಯ ನಾಗರಿಕರ ವೇದಿಕೆ ಸಂಚಾಲಕ ಪುಟ್ಟರಾಜೇಗೌಡ, ಆರ್.ಪಿ. ವೆಂಕಟೇಶ್‌ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.