ಅರಸೀಕೆರೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೂರು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಶತಮಾನೋತ್ಸವ ಆಚರಿಸುತ್ತಿದ್ದು, ಅರಸೀಕೆರೆ ನಗರದಲ್ಲಿ ಸಂಘವು ಶತಾಬ್ದಿ ಸಂಚಲನದ ಕಾರ್ಯಕ್ರಮ ನಿಮಿತ್ತ ಆಕರ್ಷಕ ಪಂಥ ಸಂಚಲನ ನಡೆಸಿತು.
ಗ್ರಾಮದೇವತೆ ಶ್ರೀ ಕರಿಯಮ್ಮ ದೇವಸ್ಥಾನದಿಂದ ಹೊರಟ ಪಂಥಸಂಚಲನವು ಬಸವೇಶ್ವರ ನಗರ, ರೋಟರಿ ಶಾಲೆ, ರುದ್ರಗುಡಿ ಬೀದಿ, ಪಿ.ಪಿ.ಸರ್ಕಲ್, ಬಿ.ಎಚ್.ರಸ್ತೆ, ಗಣಪತಿ ಪೆಂಡಾಲ್, ಪೇಟೆಬೀದಿ, ಬೃಂದಾವನ ವೃತ್ತ, ಹುಳಿಯಾರು ರಸ್ತೆ, ಹಾಸನ ವೃತ್ತದ ಮೂಲಕ ಜಗದ್ಗುರು ಕೋಡಿಮಠ ಕಾಲೇಜು ತಲುಪಿತು.
ತೆರೆದ ವಾಹನದಲ್ಲಿ ಭಾರತ ಮಾತೆ, ಕೇಶವ ಬಲಿರಾಮ ಹೆಡಗೇವಾರ್ ಹಾಗೂ ಮಾಧವ ಸದಾಶಿವ ಗೋಳ್ವಾಲ್ಕರ್ ಭಾವಚಿತ್ರಗಳೊಂದಿಗೆ ನೂರಾರು ಸಂಖ್ಯೆಯಲ್ಲಿ ಗಣವೇಷಧಾರಿಗಳು ಶಿಸ್ತು ಮತ್ತು ಶ್ರದ್ಧೆಯಿಂದ ಹೆಜ್ಜೆ ಹಾಕುತ್ತಿದ್ದ ಗಾಂಭಿರ್ಯ ನೋಡುಗರ ಮನ ಸೆಳೆಯಿತು.
ಪಂಥ ಸಂಚಲನದಲ್ಲಿ ದೇಶಭಕ್ತಿ ಗೀತೆಗಳು, ವಾದ್ಯ ಗೋಷ್ಠಿ, ಘೋಷಣೆಗಳು ವಿಶೇಷವಾಗಿ ಗಮನ ಸೆಳೆದವು. ನಗರದ ವಿವಿಧ ವೃತ್ತಗಳು ಸೇರಿ ತಮ್ಮ ತಮ್ಮ ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಬಿಡಿಸಿ, ಗಣವೇಷಧಾರಿಗಳ ಮೇಲೆ ಸಾರ್ವಜನಿಕರು ಪುಷ್ಪವೃಷ್ಠಿಗೈದು ಸ್ವಾಗತಿಸಿ, ದೇಶ ಭಕ್ತಿ ಪ್ರದರ್ಶಿಸಿದರಲ್ಲದೆ ರಸ್ತೆಯ ಇಕ್ಕೆಲಗಳಲ್ಲಿ ನಾಗರಿಕರು ನಿಂತು ವೀಕ್ಷಿಸಿದರು.
ನಗರದಲ್ಲಿ ಕೇಸರಿ ಬಂಟಿಗ್ಸ್‌ಗಳು, ಹಸಿರು ತಳಿರು ತೋರಣಗಳು ರಾರಾಜಿಸುತ್ತಿದ್ದು, ಹಬ್ಬದ ಸಂಭ್ರಮ ಮೂಡಿತ್ತು. ನಗರದ ಪಿ.ಪಿ.ವೃತ್ತದಲ್ಲಿ ಪುಟಾಣಿ ಮಕ್ಕಳ ವೇಷಭೂಷಣ ಎಲ್ಲರ ಗಮನ ಸೆಳೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.