ADVERTISEMENT

ಪ್ರಗತಿ ಬಡಾವಣೆ: ಪಾಳು ಬಿದ್ದ ಉದ್ಯಾನ, ತೆರೆದ ಚರಂಡಿ

ಪ್ರಗತಿ ಬಡಾವಣೆ ನಿವಾಸಿಗಳಿಗೆ ದೂಳಿನ ಮಜ್ಜನ, ಬಸ್‌ ಸೌಕರ್ಯ ಕೊರತೆ

ಜೆ.ಎಸ್.ಮಹೇಶ್‌
Published 10 ಫೆಬ್ರುವರಿ 2021, 4:51 IST
Last Updated 10 ಫೆಬ್ರುವರಿ 2021, 4:51 IST
ಹಾಸನದ ಒಂದನೇ ವಾರ್ಡ್‌ನ ಪ್ರಗತಿ ನಗರದಲ್ಲಿ ನಿರ್ವಹಣೆಯಿಲ್ಲದೆ ಪಾಳು ಬಿದ್ದ ಉದ್ಯಾನ 
ಹಾಸನದ ಒಂದನೇ ವಾರ್ಡ್‌ನ ಪ್ರಗತಿ ನಗರದಲ್ಲಿ ನಿರ್ವಹಣೆಯಿಲ್ಲದೆ ಪಾಳು ಬಿದ್ದ ಉದ್ಯಾನ    

ಹಾಸನ: ಮಳೆಗಾಲದಲ್ಲಿ ಚರಂಡಿ ತುಂಬಿ ಗಲೀಜು ನೀರು ಮನೆಗೆ ನುಗ್ಗುತ್ತದೆ, ನಿರ್ವಹಣೆ ಇಲ್ಲದೆ ಸೊರಗಿರುವ ಉದ್ಯಾನ, ಮನೆ ಬಾಗಿಲಿಗೆ ಕಸದ ಆಟೊ ಬಂದರೂ ಖಾಲಿ ನಿವೇಶನಗಳಲ್ಲಿ ಸಾರ್ವಜನಿಕರು ಕಸ ಎಸೆಯುವುದು ತಪ್ಪಿಲ್ಲ.

ಇದು ನಗರಸಭೆ 1ನೇ ವಾರ್ಡ್ ವ್ಯಾಪ್ತಿಯ ರೈಲ್ವೆ ನಿಲ್ದಾಣದ ಹಿಂಭಾಗದ ಪ್ರಗತಿ ನಗರದ ಪ್ರಮುಖ ಸಮಸ್ಯೆಗಳು.

ವಾರ್ಡ್‌ ವ್ಯಾಪ್ತಿಗೆ ಚನ್ನಪಟ್ಟಣ, ಕರೀಗೌಡ ಕಾಲೊನಿ, ರಾಜಘಟ್ಟ ಬಡಾವಣೆ ಸೇರಲಿದೆ. ರಾಜಘಟ್ಟ ಕೆರೆಗೆ ಹೊಂದಿಕೊಂಡಿರುವ ಪ್ರಗತಿ ಬಡಾವಣೆಯಲ್ಲಿ ಸಾಕಷ್ಟು ಸಮಸ್ಯೆ ಇದೆ. 150ಕ್ಕೂ ಹೆಚ್ಚು ಮನೆಗಳಿದ್ದು, ಸರ್ಕಾರಿ ನೌಕರರು, ಉಪನ್ಯಾಸಕರು, ವಕೀಲರು, ಕೂಲಿ ಕಾರ್ಮಿಕರು ವಾಸವಾಗಿದ್ದಾರೆ.

ADVERTISEMENT

ಮಳೆಗಾಲದಲ್ಲಿ ರಾಜಘಟ್ಟ ಕೆರೆಯಲ್ಲಿ ನೀರು ಹೆಚ್ಚುತದೆ. ಆಗ ಕೊಳಚೆ ನೀರು ಬಡಾವಣೆಯತ್ತ ನುಗ್ಗುತ್ತದೆ. ಅದಕ್ಕಾಗಿಯೇ ಪ್ರಕೃತಿ ಬಡಾವಣೆ ಮೂರನೇ ಕ್ರಾಸ್‌ನ ನಿವಾಸಿಯೊಬ್ಬರು ಗಲೀಜು ನೀರು ಬಾರದಂತೆ ಚರಂಡಿಗೆ ತಡೆಗೋಡೆ ನಿರ್ಮಿಸಿದ್ದಾರೆ.

ತೆರೆದ ಚರಂಡಿಯ ಕಟ್ಟ ವಾಸನೆಯಿಂದ ಜನರು ಬೇಸತ್ತು ಹೋಗಿದ್ದಾರೆ. ಹಲವು ವರ್ಷಗಳ ಹಿಂದೆ ಚರಂಡಿ ವ್ಯವಸ್ಥೆ ಮಾಡಲಾಗಿದೆ. ಕೆಲವು ಕಡೆ ಹೂಳು ತುಂಬಿದೆ, ಮತ್ತೆ ಕೆಲವು ಕಡೆ ಹೂಳು ತೆಗೆದು ಅಲ್ಲಿಯೇ ಹಾಕಲಾಗಿದೆ.ಪ್ರಗತಿ ಬಡಾವಣೆ ಸಮೀಪವೇ ಟ್ರಕ್‌ ಟರ್ಮಿನಲ್‌ ಇದ್ದು, ಗೂಡ್ಸ್‌ ಲಾರಿಗಳ ಸಂಚಾರದಿಂದ ಜನರಿಗೆ ದೂಳಿನ ಮಜ್ಜನ ತಪ್ಪಿದಲ್ಲ.

ನಗರದಿಂದ ಮೂರು ಕಿ.ಮೀ. ದೂರದಲ್ಲಿರುವ ಈ ಬಡಾವಣೆಗೆ ಬಸ್‌ ಸೌಕರ್ಯ ಇಲ್ಲ. ₹70 ನೀಡಿ ಆಟೊದಲ್ಲಿಯೇ ಪ್ರಯಾಣಿಸಬೇಕು. ಆದ್ದರಿಂದ ಬೆಳಿಗ್ಗೆ ಮತ್ತು ಸಂಜೆ ಮಿನಿ ಬಸ್‌ ಬಿಟ್ಟರೆ ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಎನ್ನುತ್ತಾರೆ ನಿವಾಸಿಗಳು.

‘ಹಿಂದೆ ಬಡಾವಣೆ ನಿರ್ಮಾಣವಾದಾಗ ಉದ್ಯಾನಕ್ಕೆ ಜಾಗ ಮೀಸಲಿಡಲಾಗಿತ್ತು. ಶಾಸಕರಾಗಿದ್ದ ಪ್ರಕಾಶ್‌ ಅವರು ಉದ್ಯಾನಕ್ಕೆ ತಂತಿ ಬೇಲಿ ಹಾಕಿಸಿದ್ದರು. ಉದ್ಯಾನ ಪಕ್ಕದಲ್ಲಿ ರಾಜಘಟ್ಟ ಕೆರೆಯಲ್ಲಿ ಖಾಸಗಿ ವ್ಯಕ್ತಿಗಳು ನಿವೇಶನ ನಿರ್ಮಾಣ ಮಾಡುತ್ತಿದ್ದು, ಉದ್ಯಾನ ಕಾಂಪೌಂಡ್‌ ಬೀಳಿಸಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಉದ್ಯಾನ ಸಮೀಪ ಮರ ಕಟಾವು ಮಾಡಿದ್ದು, ಉದ್ಯಾನದ ಬೇಲಿ ಮುರಿದಿದೆ’ ಎಂದು ಹಸಿರು ಭೂಮಿ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ನಿವಾಸಿ ರಾಜೀವೇಗೌಡ ಆರೋಪಿಸಿದರು.

‘ನಗರದ ಪೃಥ್ವಿ ಚಿತ್ರಮಂದಿರದ ಬಳಿ ರಾಜಘಟ್ಟಕ್ಕ ಸಂಪರ್ಕ ಕಲ್ಪಿಸುವ ರಸ್ತೆಯ ಎರಡೂ ಬದಿಯಲ್ಲಿ ಕೋಳಿ ಅಂಗಡಿ ತ್ಯಾಜ್ಯ ಸುರಿಯುತ್ತಾರೆ. ಅಲ್ಲದೆ ರಾತ್ರಿ ವೇಳೆ ಈ ರಸ್ತೆಯಲ್ಲಿ ಮಹಿಳೆಯರು ಓಡಾಡಲು ಭಯಪಡುವ ವಾತಾವರಣ ಇದ್ದು, ಪೊಲೀಸ್‌ ಬೀಟ್‌ ಹೆಚ್ಚಿಸಬೇಕು. ಪ್ರಗತಿ ಬಡಾವಣೆ ಸಮೀಪವೇ ಲಾರಿ ನಿಲ್ದಾಣವಿದ್ದು, ಇದರಿಂದ ಬರುವ ದೂಳಿನಿಂದ ಸಾಕಾಗಿ ಹೋಗಿದೆ’ ಎಂದು ನಿವಾಸಿ ಡಾ. ಗಿರೀಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.