ADVERTISEMENT

ತೋಟಗಳಿಗೆ ನುಗ್ಗಿದ ನೀರು: ರೈತರಲ್ಲಿ ಆತಂಕ

ದೊಡ್ಡಕೆರೆಯಿಂದ ಹರಿದು ಬಂದ ನೀರು: ಬಾಳೆ, ವೀಳ್ಯೆದೆಳೆ, ಅಡಿಕೆ ಹಾಳಾಗುವ ಭೀತಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 7:25 IST
Last Updated 13 ಅಕ್ಟೋಬರ್ 2021, 7:25 IST
ರಾಮನಾಥಪುರ ಹೋಬಳಿಯ ಕಾಳೇನಹಳ್ಳಿಯಲ್ಲಿನ ಕೆರೆಯ ನೀರು ತೋಟಗಳಲ್ಲಿ ತುಂಬಿರುವುದು
ರಾಮನಾಥಪುರ ಹೋಬಳಿಯ ಕಾಳೇನಹಳ್ಳಿಯಲ್ಲಿನ ಕೆರೆಯ ನೀರು ತೋಟಗಳಲ್ಲಿ ತುಂಬಿರುವುದು   

ಕೊಣನೂರು: ಸತತ ಮಳೆಯಿಂದಾಗಿ ಕಾಳೇನಹಳ್ಳಿಯಲ್ಲಿ ತೋಟಗಳಿಗೆ ನೀರು ನುಗ್ಗಿ ವೀಳ್ಯೆದೆಲೆ ಬಳ್ಳಿ, ಬಾಳೆಯ ಗಿಡಗಳು ಕೊಳೆಯುತ್ತಿದ್ದು ರೈತರು ಆತಂಕಗೊಂಡಿದ್ದಾರೆ.

ಸೋಮವಾರ ಮಧ್ಯಾಹ್ನ ಮತ್ತು ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ರಾಮನಾಥಪುರ ಹೋಬಳಿಯ ಕಾಳೇನಹಳ್ಳಿಯ ದೊಡ್ಡಕೆರೆಯಿಂದ ಹೆಚ್ಚಿನ ಪ್ರಮಾಣದ ನೀರು ಹೊರಹರಿದು ಅಕ್ಕಪಕ್ಕದ ತೋಟಗಳಿಗೆ ನುಗ್ಗಿದೆ.

ದೊಡ್ಡಕೆರೆಯ ನೀರು ಹರಿಯುವ ಸ್ಥಳದಲ್ಲಿ ಕೆಲ ದಿನಗಳಿಂದ ಮಾಗಡಿ- ಸೋಮವಾರಪೇಟೆ ರಸ್ತೆ ವಿಸ್ತರಣೆ ಕಾಮಗಾರಿಯು ನಡೆಯುತ್ತಿದ್ದು ಸೇತುವೆ ನಿರ್ಮಿಸುವ ಸಲುವಾಗಿ ಕೆರೆಯ ನೀರು ಹರಿಯುವ ತಾತ್ಕಾಲಿಕ ಕಾಲುವೆಯನ್ನು ಮೊದಲಿದ್ದಕ್ಕಿಂತ ಎತ್ತರಕ್ಕೆ ನಿರ್ಮಿಸಲಾಗಿದೆ. ಹೆಚ್ಚಿನ ಪ್ರಮಾಣದ ನೀರು ಹರಿಯಲು ಅಗತ್ಯದಷ್ಟು ಪೈಪ್‌ಗಳನ್ನು ಅಳವಡಿಸದಿರುವ ಪರಿಣಾಮ ಕೆರೆಯಿಂದ ಬಂದ ನೀರು ಸರಾಗವಾಗಿ ಹರಿಯದೆ ಅಕ್ಕಪಕ್ಕದ ಹತ್ತಾರು ಎಕರೆ ತೋಟಗಳಿಗೆ ನುಗ್ಗಿದೆ.

ADVERTISEMENT

‘ಕಳೆದ 4 ದಿನಗಳ ಹಿಂದೆಯೂ ಸಹ ಮಳೆಯ ನೀರು ತೋಟಗಳಿಗೆ ನುಗ್ಗಿದ್ದರಿಂದ ನೀರು ತುಂಬಿದ್ದ ತೋಟಗಳಲ್ಲಿನ ವೀಳ್ಯೆದೆಲೆ ಬಳ್ಳಿಗಳು ಹಣ್ಣಾಗ ತೊಡಗಿವೆ. ಇದೀಗ ಮತ್ತೆ ತೋಟಗಳಿಗೆ ನೀರು ತುಂಬಿದ್ದು ಅತಿಯಾದ ತೇವಾಂಶದಿಂದಾಗಿ ಉಳಿದ ವೀಳ್ಯೆದೆಲೆಯ ಬಳ್ಳಿ, ಬಾಳೆಯ ಗಿಡಗಳು ನಾಶವಾಗುವ ಜೊತೆಗೆ ಅಡಿಕೆ ಕಾಯಿಗಳು ಬಲಿಯುವುದಕ್ಕಿಂತ ಮುಂಚೆಯೇ ಬಿದ್ದು ಹೋಗುತ್ತವೆ. ಮರಗಳ ಬೇರು ಸಡಿಲವಾಗಿ ಮರಗಳು ಬಿದ್ದು ಹೋಗುವ ಅಪಾಯವಿದೆ’ ಎಂದು ರೈತರು ಅಳಲು ತೋಡಿಕೊಂಡರು

‘ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಸೂಕ್ತ ಪರಿಹಾರವನ್ನು ನೀಡಬೇಕು ಮತ್ತು ಕೆರೆಯ ನೀರು ಕೊಲ್ಲಿಯ ಮೂಲಕ ಸರಾಗವಾಗಿ ಹರಿದು ಹೋಗುವಂತೆ ಕ್ರಮವಹಿಸಬೇಕು’ ಎಂದು ಕೋಟೇಗೌಡ, ಶರತ್, ರಾಮೇಗೌಡ, ತಿಮ್ಮೇಗೌಡ ಆಗ್ರಹಿಸಿದರು.

ಮಂಗಳವಾರ ಬೆಳಿಗ್ಗೆ ಕೆರೆಯ ನೀರು ತಾತ್ಕಾಲಿಕ ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ವಾಹನಗಳು ನಿಧಾನವಾಗಿ ಚಲಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.