ಸಕಲೇಶಪುರ: ‘ಸ್ನೇಹ ಮತ್ತು ಸೇವೆ ವಿಷಯದಲ್ಲಿ ಸಕಲೇಶಪುರದ ರೋಟರಿ ಸಂಸ್ಥೆ 3182 ಜಿಲ್ಲೆಯ ಇತರ 85 ಸಂಸ್ಥೆಗಳಿಗೆ ಮಾದರಿ ಆಗಿದೆ’ ಎಂದು ರೋಟರಿ ಜಿಲ್ಲಾ ಗವರ್ನರ್ ಸಿ.ಎ. ದೇವಾನಂದ್ ಹೇಳಿದರು.
ಇಲ್ಲಿಯ ರೋಟರಿ ಸಂಸ್ಥೆಗೆ ಮಂಗಳವಾರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯಿಂದ ನಿರ್ಮಾಣ ಮಾಡಿರುವ ಹೇಮಾವತಿ ಪುತ್ಥಳಿ, ಕೌಡಹಳ್ಳಿ ಎನ್.ಕೆ. ಗಣಪಯ್ಯ ರೋಟರಿ ಕಿವುಡು ಮತ್ತು ಮೂಕ ಮಕ್ಕಳ ಶಾಲೆಯ ಹೊಸ ಕಟ್ಟಡ, ದೋಣಿಗಾಲ್‌ನಲ್ಲಿ ರಸ್ತೆ ಸುರಕ್ಷತಾ ನಾಮಫಲಕ ಹಾಗೂ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆ ಒಳ ಮತ್ತು ಹೊರ ರೋಗಿಗಳಿಗೆ ಶುದ್ಧ ಕುಡಿಯುವ ಬಿಸಿ ಮತ್ತು ತಣ್ಣೀರು ಘಟಕ ಉದ್ಘಾಟಿಸಿದ ನಂತರ ರೋಟರಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ತಮ್ಮ ದುಡಿಮೆಯ ಒಂದಿಷ್ಟು ಹಣವನ್ನು ಸೇವೆಗೆ ಖರ್ಚು ಮಾಡುವುದರಿಂದ ದೊರೆಯುವ ತೃಪ್ತಿ ಬೇರೆ ಯಾವುದರಿಂದಲೂ ದೊರೆಯುವುದಿಲ್ಲ. ತಮ್ಮ ಸ್ವಂತ ಹಣವನ್ನು ಸಂಸ್ಥೆಗೆ ಖರ್ಚು ಮಾಡಿಕೊಂಡು ಜೊತೆಗೆ ಸೇವಾ ಚಟುವಟಿಕೆಗಳಿಗೆ ಸಮಯವನ್ನೂ ನೀಡುವ ರೋಟರಿ ಸದಸ್ಯರ ಸೇವೆ ನಿಜಕ್ಕೂ ಶ್ಲಾಘನೀಯ’ ಎಂದರು.
ಸಹಾಯಕ ಗವರ್ನರ್ ಅರುಣ್ ರಕ್ಷಿದಿ ಮಾತನಾಡಿ, ‘ರೋಟರಿ ಸಂಸ್ಥೆಯು ಶಿಕ್ಷಣ, ಆರೋಗ್ಯ, ಜಾಗೃತಿ, ಪರಿಸರ ಪ್ರಜ್ಞೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಸಕಲೇಶಪುರದ ಪರಿಸರವನ್ನು ಸಂರಕ್ಷಣೆ ಮಾಡಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಸರ್ಕಾರಗಳು ಕೈಗೆತ್ತಿಕೊಳ್ಳಬೇಕು. ಇದರಿಂದ ತಾಲ್ಲೂಕಿನ ಆರ್ಥಿಕ ಅಭಿವೃದ್ಧಿ ಹಾಗೂ ಮೂಲ ಸೌಲಭ್ಯಗಳ ಅಭಿವೃದ್ಧಿ ಆಗುತ್ತದೆ’ ಎಂದು ಹೇಳಿದರು.
ರಾಷ್ಟ್ರಮಟ್ಟದ ಅಥ್ಲೆಟಿಕ್ ಆಟಗಾರ ಕಾಡಮನೆ ನವೀನ್, ಕಡಲೇಕಾಯಿ ಮಾರಾಟ ಮಾಡಿ ಸ್ವಾವಲಂಬಿ ಜೀವನ ನಡೆಸುತ್ತಿರುವ ಅಂಧ ವ್ಯಕ್ತಿ ದೌಲತ್‌ರಾವ್ ಗಾಯಕವಾಡ್ ಅವರನ್ನು ಸನ್ಮಾನಿಸಲಾಯಿತು.
ವಲಯ ದಂಡಾಧಿಕಾರಿ ಯಶ್ವಂತ್, ರೋಟರಿ ಸಂಸ್ಥೆ ಅಧ್ಯಕ್ಷ ಎ.ಡಿ. ವೀರೇಂದ್ರ, ಕಾರ್ಯದರ್ಶಿ ರವಿರಾಜ್ ಪಿ.ಶೆಟ್ಟಿ, ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.