ADVERTISEMENT

ಸಕಲೇಶಪುರ ಪುರಸಭೆ ಜೆಡಿಎಸ್‌ ತೆಕ್ಕೆಗೆ

ಅಧ್ಯಕ್ಷರಾಗಿ ಕಾಡಪ್ಪ, ಉಪಾಧ್ಯಕ್ಷರಾಗಿ ಜರೀನಾ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 1:33 IST
Last Updated 4 ನವೆಂಬರ್ 2020, 1:33 IST
ಸಕಲೇಶಪುರ ಪುರಸಭೆ ಅಧ್ಯಕ್ಷರಾಗಿ ಕಾಡಪ್ಪ, ಉಪಾಧ್ಯಕ್ಷೆಯಾಗಿ ಜರೀನಾ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು. ಸದಸ್ಯರು ವಿಜಯೋತ್ಸವ ಆಚರಿಸಿದರು. ಶಾಸಕ ಎಚ್.ಕೆ. ಕುಮಾರಸ್ವಾಮಿ ಇದ್ದಾರೆ
ಸಕಲೇಶಪುರ ಪುರಸಭೆ ಅಧ್ಯಕ್ಷರಾಗಿ ಕಾಡಪ್ಪ, ಉಪಾಧ್ಯಕ್ಷೆಯಾಗಿ ಜರೀನಾ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು. ಸದಸ್ಯರು ವಿಜಯೋತ್ಸವ ಆಚರಿಸಿದರು. ಶಾಸಕ ಎಚ್.ಕೆ. ಕುಮಾರಸ್ವಾಮಿ ಇದ್ದಾರೆ   

ಸಕಲೇಶಪುರ: ಇಲ್ಲಿಯ ಪುರಸಭೆಗೆ ಅಧ್ಯಕ್ಷರಾಗಿ ಜೆಡಿಎಸ್‌ ಪಕ್ಷದ ಕಾಡಪ್ಪ, ಉಪಾಧ್ಯಕ್ಷರಾಗಿ ಜರೀನಾ ಮಂಗಳವಾರ ಅವಿರೋಧವಾಗಿ
ಆಯ್ಕೆಯಾದರು.

23 ಸದಸ್ಯ ಬಲದ ಪುರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. 14 ಸದಸ್ಯರ ಸ್ಪಷ್ಟ ಬಹುಮತ ಹೊಂದಿದ್ದ ಜೆಡಿಎಸ್‌ನ ಕಾಡಪ್ಪ ಒಬ್ಬರೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ಜರೀನಾ ಒಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿಯಾಗಿದ್ದ ತಹಶೀಲ್ದಾರ್‌ ಮಂಜುನಾಥ್‌ ಇಬ್ಬರ ಅವಿರೋಧ ಆಯ್ಕೆಯನ್ನು ಘೋಷಣೆ
ಮಾಡಿದರು.

ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ ಪಕ್ಷದಿಂದಲೇ ನಾಲ್ವರು ಮಹಿಳಾ ಸದಸ್ಯರ ನಡುವೆ ಪೈಪೋಟಿ ಇತ್ತು. ಆದರೆ ಪಕ್ಷದ ವರಿಷ್ಠರು ಮೊದಲ ಅವಧಿಗೆ ಜರೀನಾ ಹಾಗೂ ಎರಡನೇ ಅವಧಿಗೆ ಜ್ಯೋತಿ ರಾಜ್‌ಕುಮಾರ್ ಅವರಿಗೆ ನೀಡಲು ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಯಾವುದೇ ಗೊಂದಲ ಇಲ್ಲದಂತೆ ಶಾಸಕ ಎಚ್‌.ಕೆ. ಕುಮಾರಸ್ವಾಮಿ ಸಮ್ಮುಖದಲ್ಲಿ ಚುನಾವಣೆ ಶಾಂತಿಯುತವಾಗಿ ನಡೆಯಿತು.

ADVERTISEMENT

ಆಯ್ಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಶಾಸಕ, ಪುರಸಭಾ ಸದಸ್ಯರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಪರಿಶಿಷ್ಟ ಜಾತಿ ಮುಖಂಡರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

‘ಪಟ್ಟಣದಲ್ಲಿ ಕುಡಿಯುವ ನೀರು, ವಿದ್ಯುತ್‌, ತ್ಯಾಜ್ಯ ವಿಲೇವಾರಿ ಸೇರಿದಂತೆ ಮೂಲಸೌಕರ್ಯ ಸಮಸ್ಯೆ ನಿವಾರಣೆಗೆ ಶಕ್ತಿ ಮೀರಿ ಶ್ರಮಿಸಲಾಗುವುದು. ಶಾಸಕರ ನೇತೃತ್ವದಲ್ಲಿ ಪುರಸಭೆಯ ಎಲ್ಲಾ ಸದಸ್ಯರ ವಿಶ್ವಾಸ ಪಡೆದು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು’ ಎಂದು ನೂತನ ಅಧ್ಯಕ್ಷ ಕಾಡಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಜಿ.ಪಂ. ಸದಸ್ಯ ಸುಪ್ರದೀಪ್ತ ಯಜಮಾನ್‌, ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ದೊಡ್ಡದೀಣೆಸ್ವಾಮಿ, ಯುವ ಜನತಾದಳ ಅಧ್ಯಕ್ಷ ಸ.ಬ. ಭಾಸ್ಕರ್, ಎಪಿಎಂಸಿ ಅಧ್ಯಕ್ಷ ಕವನ್‌ಗೌಡ, ಮಾಜಿ ಅಧ್ಯಕ್ಷ ಜಾತಹಳ್ಳಿ ಪುಟ್ಟಸ್ವಾಮಿಗೌಡ ಹಾಗೂ ಇತರರು ಇದ್ದರು.

ಪುರಸಭೆ ಮುಖ್ಯಾಧಿಕಾರಿ ಸ್ಟೀಫನ್‌ ಪ್ರಕಾಶ್ ಹಾಗೂ ಸಿಬ್ಬಂದಿ ನೂತನ ಅಧ್ಯಕ್ಷ, ಉಪಾಧ್ಯಕ್ಷೆ ಹಾಗೂ ಸದಸ್ಯರನ್ನು ಸನ್ಮಾನಿಸಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.