ADVERTISEMENT

ಮರಳು ಕಳ್ಳಸಾಗಣೆ: 6 ಜನರ ವಿರುದ್ಧ ಎಫ್‌ಐಆರ್‌

ಉಪವಿಭಾಗಾಧಿಕಾರಿ ಪ್ರತೀಕ್‌ ಬಯಾಲ್‌ ನೇತೃತ್ವದಲ್ಲಿ ಶುಕ್ರವಾರ ರಾತ್ರಿ ದಾಳಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2022, 7:31 IST
Last Updated 24 ಏಪ್ರಿಲ್ 2022, 7:31 IST
ಸಕಲೇಶಪುರ ತಾಲ್ಲೂಕು ಯಡಕೇರಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಮರಳು ಕಳ್ಳಸಾಗಣೆ ಮಾಡುತ್ತಿದ್ದ ಟಿಪ್ಪರ್‌ ಅನ್ನು ಉಪವಿಭಾಗಾಧಿಕಾರಿ ಪ್ರತೀಕ್ ಬಯಾಲ್ ನೇತೃತ್ವದ ತಂಡ ವಶಕ್ಕೆ ಪಡೆದಿದೆ
ಸಕಲೇಶಪುರ ತಾಲ್ಲೂಕು ಯಡಕೇರಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಮರಳು ಕಳ್ಳಸಾಗಣೆ ಮಾಡುತ್ತಿದ್ದ ಟಿಪ್ಪರ್‌ ಅನ್ನು ಉಪವಿಭಾಗಾಧಿಕಾರಿ ಪ್ರತೀಕ್ ಬಯಾಲ್ ನೇತೃತ್ವದ ತಂಡ ವಶಕ್ಕೆ ಪಡೆದಿದೆ   

ಸಕಲೇಶಪುರ/ಹೆತ್ತೂರು: ಉಪ ವಿಭಾಗಾಧಿಕಾರಿ ಪ್ರತೀಕ್‌ ಬಯಾಲ್‌ ನೇತೃತ್ವದ ತಂಡ ಶುಕ್ರವಾರ ರಾತ್ರಿ ದಿಢೀರ್ ದಾಳಿ ನಡೆಸಿ, ಯಸಳೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಹೇಮಾವತಿ ನದಿ ಹಾಗೂ ಐಗೂರು ಹಳ್ಳದಿಂದ ಅಕ್ರಮವಾಗಿ ಮರಳು ತೆಗೆದು ಕಳ್ಳಸಾಗಣೆ ಮಾಡುತ್ತಿದ್ದ ಎರಡು ಟಿಪ್ಪರ್‌ ಹಾಗೂ ಒಂದು ಪಿಕ್‌ಅಪ್‌ ಜೀಪ್‌ ಅನ್ನು ವಶಕ್ಕೆ ಪಡೆದು, 6 ಜನರ ವಿರುದ್ಧ ಪ್ರಕರಣ ದಾಖಲಿಸಿದೆ.

ಐಗೂರು ಹಳ್ಳ, ಹೇಮಾವತಿ ಹೊಳೆಯಿಂದ ತೆಗೆದ ಮರಳನ್ನು ಟಿಪ್ಪರ್ ಹಾಗೂ ಪಿಕ್‌ಅಪ್‌ ವಾಹನಗಳಲ್ಲಿ ಸಾಗಣೆ ಮಾಡುತ್ತಿದ್ದರು. ದಾಳಿ ಸುಳಿವು ಅರಿದ ಚಾಲಕರು ಹಾಗೂ ಮರಳು ತುಂಬಿಸುತ್ತಿದ್ದವರು ಪರಾರಿಯಾಗಿದ್ದಾರೆ. ಹಲವು ಕಡೆ ಅಕ್ರಮವಾಗಿ ಮರಳು ದಾಸ್ತಾನು ಮಾಡಿರುವುದು ಪತ್ತೆಯಾಗಿದೆ.

‘ಹೇಮಾವತಿ ಹೊಳೆ, ಐಗೂರು, ಚಿಕ್ಕಲ್ಲೂರು ಹಳ್ಳದಿಂದ ರಾತ್ರಿ ವೇಳೆ ಭಾರಿ ಪ್ರಮಾಣದಲ್ಲಿ ಮರಳು ಸಾಗಿಸಲಾಗುತ್ತಿದೆ. ಟಿಪ್ಪರ್‌ಗಳ ಓಡಾಟ ಹಾಗೂ ದೂಳಿನಿಂದ ಉಂಟಾಗುತ್ತಿರುವ ಸಮಸ್ಯೆ ಕುರಿತು ಸ್ಥಳೀಯರು ದೂರು ನೀಡಿದ್ದರು. ಹೀಗಾಗಿ, ಖಾಸಗಿ ವಾಹನಗಳಲ್ಲಿ ತೆರಳಿ ದಾಳಿ ನಡೆಸಿದೆವು’ ಎಂದು ಉಪವಿಭಾಗಾಧಿಕಾರಿ ಪ್ರತೀಕ್ ಬಯಾಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ರಾತ್ರಿ ವೇಳೆ ಮರಳು ದಂಧೆ ನಡೆಸುವವರು 18ರಿಂದ 22 ವರ್ಷದ ಯುವಕರನ್ನು ಬಳಸಿಕೊಳ್ಳುತ್ತಿದ್ದಾರೆ. ಇವರು ರಸ್ತೆ ಬದಿಯಲ್ಲಿ ಬೈಕ್‌ ನಿಲ್ಲಿಸಿಕೊಂಡು ಪೊಲೀಸ್‌, ಇತರ ಇಲಾಖೆ ವಾಹನಗಳು ಬಂದರೆ ಈ ಬಗ್ಗೆ ದಂಧೆಕೋರರಿಗೆ ಮಾಹಿತಿ ನೀಡುತ್ತಿದ್ದರು. ಭವಿಷ್ಯದ ದೃಷ್ಟಿಯಿಂದ ಈ ಯುವಕರ ವಿರುದ್ಧ ಪ್ರಕರಣ ದಾಖಲಿಸದೆ, ಎಚ್ಚರಿಕೆ ನೀಡಿ ಕಳುಹಿಸ ಲಾಗಿದೆ. ಈ ಯುವಕರು ಮತ್ತೊಮ್ಮೆ ಇದೇ ತಪ್ಪು ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ದಾಳಿಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್‌, ಯಸಳೂರು ಪಿಎಸ್‌ಐ ಬ್ಯಾಟರಾಯ ಗೌಡ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೂಪರ್‌ವೈಸರ್‌ ಹರೀಶ್‌ ಇದ್ದರು.

ಮರಳು ದಂಧೆಕೋರರು ಕೆಲ ಕಾರ್ಮಿಕರನ್ನು ನೇಮಿಸಿ ಕೊಂಡಿದ್ದಾರೆ. ಇವರು ಹೊಳೆ ಪಕ್ಕದಲ್ಲೇ ಅಡುಗೆ ಮಾಡಿ ತಿಂದು ಮಲಗುತ್ತಿದ್ದಾರೆ. ಇದು ದೊಡ್ಡ ದಂಧೆ.

ಪ್ರತೀಕ್ ಬಯಾಲ್‌, ಉಪವಿಭಾಗಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.