ADVERTISEMENT

ಹಾಸನ | ಭೂ ಪರಿಹಾರ ನೀಡಿ, ಒತ್ತುವರಿ ತಡೆಯಿರಿ: ಎಚ್.ಆರ್ ನವೀನ್

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 6:14 IST
Last Updated 6 ಫೆಬ್ರುವರಿ 2026, 6:14 IST
ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಲಕ್ಷ್ಮಿಸಾಗರ ಗ್ರಾಮದ ರೈತರು ಗುರುವಾರ ಪ್ರತಿಭಟನೆ ನಡೆಸಿದರು.
ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಲಕ್ಷ್ಮಿಸಾಗರ ಗ್ರಾಮದ ರೈತರು ಗುರುವಾರ ಪ್ರತಿಭಟನೆ ನಡೆಸಿದರು.   

ಹಾಸನ: ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದ ಸರ್ವೆ ನಂಬರ್‌ 35ರಲ್ಲಿ ರೈತರು ದಶಕಗಳಿಂದ ಸಾಗುವಳಿ ಮಾಡುತ್ತಿದ್ದು, ಈ ಕೃಷಿ ಭೂಮಿಗೆ ಪರಿಹಾರ ನೀಡದೇ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಆರ್ ನವೀನ್ ಕುಮಾರ್ ಮಾತನಾಡಿ, 1985ರಲ್ಲಿ ಸರ್ಕಾರವು 26 ರೈತ ಕುಟುಂಬಗಳಿಗೆ ತಲಾ 0.26 ಎಕರೆಯಂತೆ ಸರ್ವೆ ನಂಬರ್‌ 35ರಲ್ಲಿ ಕೃಷಿಭೂಮಿಯನ್ನು ಮಂಜೂರು ಮಾಡಿ ಹಕ್ಕುಪತ್ರ ನೀಡಿತ್ತು. ಅಂದಿನಿಂದ ಇಂದಿನವರೆಗೂ ರೈತರು ನಿರಂತರವಾಗಿ ಭೂಮಿ ಸಾಗುವಳಿ ಮಾಡುತ್ತ ಜೀವನ ನಡೆಸುತ್ತಿದ್ದಾರೆ. ಪಹಣಿಗಳಲ್ಲಿಯೂ ಈ ರೈತರ ಹೆಸರು ದಾಖಲಾಗಿವೆ ಎಂದರು.

1997ರಲ್ಲಿ ಹಾಸನ ವಿಮಾನ ನಿಲ್ದಾಣದ ಉದ್ದೇಶಕ್ಕಾಗಿ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ನಡೆಸಿ, ರೈತರು ಸ್ವಾಧೀನದಲ್ಲಿದ್ದ ಜಮೀನಿನ ಒಂದು ಭಾಗವನ್ನು ಪಡೆದು ಪರಿಹಾರ ಪಾವತಿಸಿತ್ತು. ಉಳಿದ ಭೂಮಿಯಲ್ಲಿ ರೈತರು ಈಗಲೂ ಕೃಷಿ ಚಟುವಟಿಕೆ ಮುಂದುವರಿಸುತ್ತಿದ್ದಾರೆ. ಈ ಮಧ್ಯೆ ಉಳಿದ ಭೂಮಿಯನ್ನೂ ಸ್ವಾಧೀನಪಡಿಸಿಕೊಳ್ಳಲು ಕೆಐಎಡಿಬಿ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿದರು.

ADVERTISEMENT

ಈ ನಡುವೆ ಕೆಐಡಿಬಿಯು 2024ರ ಡಿಸೆಂಬರ್ 20ರಂದು ಬೆಂಗಳೂರಿನ ಕೇಂದ್ರ ಕಚೇರಿಗೆ ಪತ್ರ ಬರೆದು, ಈಗಾಗಲೇ ಶೇ 50 ಹಣ ಪಾವತಿಸಿರುವ 12 ಎಕರೆ 22 ಗುಂಟೆ ಭೂಮಿಯನ್ನು ಹಿಂಪಡೆದು, ಹೊಸದಾಗಿ ನಿಯಮಾನುಸಾರ ಭೂಸ್ವಾಧೀನ ಪ್ರಕ್ರಿಯೆ ನಡೆಸಿ ಖಾತೆದಾರರಿಗೆ ಪರಿಹಾರ ಪಾವತಿಸುವ ಕುರಿತು ಸೂಚನೆ ನೀಡಲಾಗಿದೆ. ಆದರೂ, ಉಳಿದ ಭೂಮಿಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವಿಳಂಬದ ನಡುವೆಯೇ ಕೆಲವು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ರೈತರು ಸಾಗುವಳಿ ಮಾಡುತ್ತಿರುವ ಕೃಷಿಭೂಮಿಯನ್ನು ಅಗೆದು ನಾಶಪಡಿಸುತ್ತಿದ್ದು, ಇಲ್ಲಿನ ಮಣ್ಣನ್ನು ಸಮೀಪದ ಚಿಕ್ಕಟ್ಟಿ ಕೆರೆಯ ಜಾಗಕ್ಕೆ ಹಾಕಿ ಮುಚ್ಚುವ ಪ್ರಯತ್ನ ನಡೆಸುತ್ತಿದ್ದಾರೆ. ಸರ್ವೆ ನಂಬರ್‌ 35ರಲ್ಲಿನ ಖಾಲಿ ಸರ್ಕಾರಿ ಭೂಮಿಯನ್ನೂ ಕಬಳಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.

ರೈತರು ಅನುಭವದಲ್ಲಿರುವ ಉಳಿದ ಭೂಮಿಗೆ ಕಾನೂನುಬದ್ಧ ಭೂಸ್ವಾಧೀನ ಪ್ರಕ್ರಿಯೆ ನಡೆಸಿ, ಇಂದಿನ ಮಾರುಕಟ್ಟೆ ದರದಲ್ಲಿ ಸೂಕ್ತ ಪರಿಹಾರ ನೀಡಬೇಕು. ನಡೆಯುತ್ತಿರುವ ಅಕ್ರಮ ಒತ್ತುವರಿ ಮತ್ತು ಭೂನಾಶವನ್ನು ತಕ್ಷಣವೇ ತಡೆದು ಲಕ್ಷ್ಮೀಸಾಗರ ರೈತರ ಭೂಮಿ ರಕ್ಷಿಸಬೇಕು ಎಂದು ಒತ್ತಾಯಿಸಿದರು.

ಎಂ.ಬಿ. ಮೂರ್ತಿ, ಜಯಲಕ್ಷ್ಮಿ, ಭಾರತಿ, ಸುಮಿತ್ರಾ, ರತ್ನಮ್ಮ, ಯಮುನಾ, ನಾಗರಾಜು ಸೇರಿದಂತೆ ರೈತರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.