
ಹೆತ್ತೂರು: ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿಯ ಹಿರಿಯೂರು ಕೂಡಿಗೆಯಲ್ಲಿ ಸಂಜೀವಿನಿ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳ ಆಶ್ರಯದಲ್ಲಿ ಮಹಿಳಾ ಮಾಸಿಕ ಸಂತೆ ಆಯೋಜಿಸಲಾಗಿತ್ತು.
ಉದ್ಘಾಟಿಸಿ ಮಾತನಾಡಿದ ವಳಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ರನ್ನಿಸ್, ಮಹಿಳೆಯರು ಆರ್ಥಿಕವಾಗಿ ಸಬಲೀಕರಣ ಆಗಬೇಕು. ಮಹಿಳೆಯರು ಬೆಳೆದ ತರಕಾರಿಗಳು, ಮನೆಯಲ್ಲಿ ತಯಾರಿಸಿದ ಸಿಹಿ -ಖಾರದ ತಿಂಡಿಗಳನ್ನು ತಂದು ಈ ಸಂತೆಯಲ್ಲಿ ಮಾರುವುದರೊಂದಿಗೆ ವ್ಯಾಪಾರದ ಜ್ಞಾನವನ್ನು ಪಡೆದುಕೊಂಡು ಆರ್ಥಿಕ ಸಬಲೀಕರಣ ಆಗಬಹುದು. ಇಂತಹ ಅವಕಾಶವನ್ನು ಮಹಿಳೆಯರು ಸಮರ್ಪಕವಾಗಿ ಬಳಸಿಕೊಳ್ಳುವಂತಾಗಲಿ ಎಂದು ಹೇಳಿದರು.
ವ್ಯವಸ್ಥಾಪಕ ನಾಗೇಶ್ ಎಚ್.ಎಸ್. ಮಾತನಾಡಿ, ಸರ್ಕಾರವು ಸ್ವಸಹಾಯ ಸಂಘದವರಿಗೆ ಕಡಿಮೆ ದರದಲ್ಲಿ ಸಾಲ ನೀಡುತ್ತಿದ್ದು, ಇದನ್ನು ಬಳಸಿಕೊಂಡು ಮಹಿಳೆಯರು ಕೃಷಿ ಉತ್ಪನ್ನಗಳು ಹಾಗೂ ಕೃಷಿಯೇತರ ಉತ್ಪನ್ನಗಳನ್ನು ಉತ್ಪಾದನೆ ಮಾಡಿ ಮಾರುಕಟ್ಟೆಯಲ್ಲಿ ಮಾರುವ ಮೂಲಕ ಆರ್ಥಿಕ ಶಕ್ತಿ ಪಡೆಯಬಹುದು. ಈ ರೀತಿಯ ಮಾಸಿಕ ಸಂತೆಯಲ್ಲಿ ಭಾಗವಹಿಸುವ ಮೂಲಕ ವ್ಯವಹಾರ ಜ್ಞಾನ ಪಡೆದುಕೊಳ್ಳಬೇಕು ಎಂದರು.
ಗ್ರಾಮ ಪಂಚಾಯಿತಿಯ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯರು, ತಾವು ಬೆಳೆದ ತರಕಾರಿಗಳು ಹಾಗೂ ಮನೆಯಲ್ಲಿ ತಯಾರಿಸಿದ ಸಿಹಿ-ಖಾರದ ತಿಂಡಿಗಳನ್ನು ತಂದು ವ್ಯಾಪಾರ ಮಾಡಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದರ್ಶನ್, ಒಕ್ಕೂಟದ ಅಧ್ಯಕ್ಷೆ ತೀರ್ಥಾ ರಾಮಕೃಷ್ಣ, ಕಾರ್ಯದರ್ಶಿ ಲಲಿತಾ, ತಾಲ್ಲೂಕು ವ್ಯವಸ್ಥಾಪಕರಾದ ಮಮತಾ ಎಂ.ಬಿ., ಕೆ. ಮಂಜಮ್ಮ ತಿಪ್ಪೇಸ್ವಾಮಿ, ಎಲ್‌ಸಿಆರ್‌ಪಿ, ಕೃಷಿ ಸಖಿ, ಪಶು ಸಖಿ, ಸ್ವ ಸಹಾಯ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.