ADVERTISEMENT

ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್: ಶಿಕ್ಷಣ ಗುಣಮಟ್ಟ ಕಾಯ್ದುಕೊಳ್ಳಲು ಸೂಚನೆ

ಅಧಿಕಾರಿಗಳಿಗೆ ಸಚಿವರ

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 14:04 IST
Last Updated 3 ಜೂನ್ 2019, 14:04 IST
ಹಾಸನದಲ್ಲಿ ಸಚಿವ ಎಚ್‌.ಡಿ.ರೇವಣ್ಣ ಅವರು ಅಧಿಕಾರಿಗಳ ಸಭೆ ನಡೆಸಿದರು.
ಹಾಸನದಲ್ಲಿ ಸಚಿವ ಎಚ್‌.ಡಿ.ರೇವಣ್ಣ ಅವರು ಅಧಿಕಾರಿಗಳ ಸಭೆ ನಡೆಸಿದರು.   

ಹಾಸನ: ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆ ಮೊದಲ ಸ್ಥಾನದಲ್ಲಿರುವ ಹಿನ್ನಲೆಯಲ್ಲಿ ಅದೇ ಗುಣಮಟ್ಟ ಕಾಯ್ದುಕೊಂಡು ಇನ್ನಷ್ಟು ಶೈಕ್ಷಣಿಕ ಅಭಿವೃದ್ಧಿ ಸಾಧಿಸಲು ಹೊಸ ಯೋಜನೆ ಪ್ರಾರಂಭಿಸಲು ಸಚಿವ ಎಚ್.ಡಿ. ರೇವಣ್ಣ ಸಮ್ಮತಿ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ತಾವು ಈ ಹಿಂದೆ ಅಲ್ಪ ಸಂಖ್ಯಾತರ ಅಭಿವೃದ್ಧಿ ಇಲಾಖೆಯಲ್ಲಿ ಇದ್ದ ವೇಳೆ ಮುರಾರ್ಜಿ ದೇಸಾಯಿ ವಸತಿ ಶಾಲೆ, ಮೌಲಾನಾ ಅಜಾದ್ ಶಾಲೆ ಹಾಗೂ ಉರ್ದು ಶಾಲೆಗಳಲ್ಲಿ ಪ್ರಾರಂಭಿಸಿದ ಸ್ಮಾರ್ಟ್ ಕ್ಲಾಸ್ ಯೋಜನೆಗಳು ಮತ್ತು ಅದರ ಯಶಸ್ಸನ್ನು ಸಚಿವರ ಗಮನಕ್ಕೆ ತಂದರು.

ಈ ಸ್ಮಾರ್ಟ್ ಕ್ಲಾಸ್‍ಗಳ ಪ್ರಾರಂಭದಿಂದ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ವೃದ್ಧಿಯ ಜೊತೆಗೆ ಪರಿಣಾಮಕಾರಿ ಬೋಧನಾ ವ್ಯವಸ್ಥೆ ಜಾರಿಗೊಳಿಸಿದಂತೆ ಆಗುತ್ತದೆ. ಈ ಹಿಂದಿನ ಪ್ರಯೋಗಗಳು ಉತ್ತಮ ಫಲ ನೀಡಿದೆ ಎಂದು ಅಕ್ರಂ ಪಾಷ ಸಚಿವರಿಗೆ ವಿವರಿಸಿದರು.

ADVERTISEMENT

ರೇವಣ್ಣ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ತಲಾ ಎರಡರಂತೆ ಸ್ಮಾರ್ಟ್ ಕ್ಲಾಸ್‍ಗಳನ್ನು ಪ್ರಾರಂಭಿಸಲು ಅಗತ್ಯ ಪ್ರಸ್ತಾವ ಸಿದ್ಧಪಡಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ಅಗತ್ಯ ಅನುದಾನ ಪೂರೈಸಲು ಕ್ರಮವಹಿಸಲಾಗುವುದು ಎಂದು ಹೇಳಿದರು.

ಇದೇ ರೀತಿ ಜಿಲ್ಲೆಯ ಎಲ್ಲಾ ಶಿಕ್ಷಕರಿಗೆ ತಾಲ್ಲೂಕು ಮಟ್ಟದಲ್ಲಿ ಮೂರು ದಿನಗಳ ಪುನರ್ ಮನನ ತರಬೇತಿ ನಡೆಸಲು ಸೂಕ್ತ ಕ್ರಮವಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ರೇವಣ್ಣ ಸೂಚನೆ ನೀಡಿದರು.

ಅಲ್ಲದೇ, ಪಬ್ಲಿಕ್ ಶಾಲೆ ಪ್ರಾರಂಭಿಸಲು ಸರ್ಕಾರಿ ಶಾಲೆ ಶಿಕ್ಷಕರಿಗೆ ಇಂಗ್ಲಿಷ್‌ ಭಾಷೆಯಲ್ಲಿ ಬೋಧಿಸುವ ಕುರಿತು ಅಗತ್ಯ ತರಬೇತಿ ಒದಗಿಸಬೇಕು. ಅದಕ್ಕೆ ಯೋಜನೆ ಸಿದ್ಧಪಡಿಸಿ ಜಾರಿಗೆ ತರುವಂತೆ ಸಚಿವರು ನಿರ್ದೇಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.